

ರಾಯಲ್ಪಾಡು: ಶ್ರೀನಿವಾಸಪುರ ತಾಲೂಕಿನ ಕೂರಿಗೇಪಲ್ಲಿ ಗ್ರಾಮ ಪಂಚಾಯಿತಿ ಕಸ ವಿಲೇವಾರಿ ಘಟಕ ನಿರ್ಮಾಣವಾಗಿ ಹಲವು ವರ್ಷಗಳೇ ಕಳೆಯುತ್ತಿದ್ದರೂ ನಿರ್ವಹಣೆ ಕೊರತೆಯಿಂದ, ಘಟಕ ಕುಡುಕರ ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದೆ.
ಸಚ್ಛಭಾರತ್ ಮಿಷನ್ ಯೋಜನೆಯಡಿ ಸರ್ಕಾರಗಳು ಲಕ್ಷಾಂತರ ರೂಪಾಯಿ ಅನುದಾನ ಬಿಡುಗಡೆ ಮಾಡಿ ಪ್ರತಿ ಗ್ರಾಮ ಪಂಚಾಯಿತಿಗೊಂದು ಕಸ ವಿಲೇವಾರಿ ಘಟಕ, ತ್ಯಾಜ್ಯ ಸಂಗ್ರಹಣೆ ವಾಹನ, ಹಾಗೂ ಅಗತ್ಯ ಕಾರ್ಮಿಕರನ್ನು ನಿಯೋಜಿಸುತ್ತಿದ್ದರೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಶ್ರೀನಿವಾಸಪುರ ತಾಲೂಕಿನ ಕೂರಿಗೇಪಲ್ಲಿ ಗ್ರಾಮ ಪಂಚಾಯಿತಿ ಕಸ ವಿಲೇವಾರಿ ಘಟಕ ನಿರುಪಯುಕ್ತ ಎನಿಸಿದೆ.
ಕೂರಿಗೇಪಲ್ಲಿ ಗ್ರಾಮಪಂಚಾಯಿತಿಗೆ ಸಂಬಂಧಿಸಿದ ಕಸ ವಿಲೇವಾರಿ ಘಟಕವು ರೆಡ್ಡೋರಿಪಲ್ಲಿ ಗ್ರಾಮದ ಬಳಿಯ ಕಮ್ಮಮ್ಮಬೋಡಿ ಬೆಟ್ಟದ ಸಮೀಪ ನಿರ್ಮಿಸಲಾಗಿದ್ದು, ಕಟ್ಟಡದ ಬಾಗಿಲಿಗೆ ಕನಿಷ್ಠ ಪಕ್ಷ ಬೀಗ ಸಹ ಇಲ್ಲ. ಕಟ್ಟಡದ ತುಂಬೆಲ್ಲ ಮದ್ಯದ ಬಾಟಲ್‌ಗಳೇ ಕಾಣುತ್ತಿದ್ದು, ಇದನ್ನು ಕೇಳುವವರೇ ಇಲ್ಲದಾಗಿದೆ. ಅಧಿಕಾರಿಗಳು ಇನ್ನಾದರೂ ಘಟಕದ ನಿರ್ವಹಣೆಯತ್ತ ಗಮನಹರಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸುತ್ತಿದ್ದಾರೆ.
ಕೇಂದ್ರ ಹಾಗೂ ರಾಜ್ಯ ಸರ್ಕಾರ ಜಂಟಿಯಾಗಿ ಗ್ರಾಮೀಣ ಪ್ರದೇಶದ ನೈರ್ಮಲ್ಯ ಕಾಪಾಡಬೇಕೆಂದು ಸ್ವಚ್ಛ ಭಾರತದ ಭಾಗವಾಗಿದ್ದು, ಪ್ರತಿ ಗ್ರಾಮ ಪಂಚಾಯಿತಿಯಲ್ಲೂ ಕಸ ವಿಲೇವಾರಿ ಘಟಕ ನಿರ್ವಾಣ ಮಾಡಲಾಗಿದೆ. ಆದರೆ ಬಹಳಷ್ಟು ಗ್ರಾಮ ಪಂಚಾಯಿತಿಗಳಲ್ಲಿ ಕಸ ವಿಲೇವಾರಿ ಘಟಕಗಳನ್ನು ಬಳಕೆ ಮಾಡುತ್ತಿಲ್ಲ. ಇದೇ ಕಾರಣದಿಂದ ಕೂರಿಗೇಪಲ್ಲಿ ಗ್ರಾಮ ಪಂಚಾಯಿತಿ ಕಸ ವಿಲೇವಾರಿ ಘಟಕ ಈಗ ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದೆ. ಕೂಡಲೇ ಗ್ರಾಮ ಪಂಚಾಯತಿ ಅಧಿಕಾರಿಗಳು ಗಮನಹರಿಸದೇ ಹೋದರೆ ಮುಂದಿನ ದಿನಗಳಲ್ಲಿ ಹೋರಾಟ ಮಾಡಬೇಕಾಗುತ್ತದೆ ಎಂದು ಕರ್ನಾಟಕ ಪ್ರಾಂತ ರೈತ ಸಂಘ ಮುಖಂಡ ಪಾತಕೋಟಿ ನವೀನ್ ಕುಮಾರ್ ಎಚ್ಚರಿಸಿದ್ದಾರೆ.