

ವೆಂಕಟರಾಜು ಎಸ್.
ದೊಡ್ಡಬಳ್ಳಾಪುರ: ರಾಜಧಾನಿ ಬೆಂಗಳೂರಿಗೆ ಸಮೀಪವಿರುವ ನಗರ ದೊಡ್ಡಬಳ್ಳಾಪುರ. 1996ರಲ್ಲಿ ಅಂದಿನ ಜನಸಂಖ್ಯೆಗೆ ಅನುಗುಣವಾಗಿ, ಅಭಿವೃದ್ಧಿ ದೃಷ್ಟಿಯಿಂದ ನಗರಸಭೆಯಾಗಿ ಬಡ್ತಿ ನೀಡಲಾಯಿತು. ಆದರೆ, ದಶಕಗಳೇ ಕಳೆದರೂ ಅಭಿವೃದ್ಧಿ ವಿಷಯದಲ್ಲಿ ಇನ್ನೂ ಹಿಂದುಳಿದಿದೆ. ಒಟ್ಟು 31 ವಾರ್ಡ್ಗಳನ್ನು ಹೊಂದಿರುವ ದೊಡ್ಡಬಳ್ಳಾಪುರ ನಗರಸಭೆಯಲ್ಲಿ ಆಯಾ ವಾರ್ಡ್ಗಳಲ್ಲಿ ಏನೆಲ್ಲಾ ಸಮಸ್ಯೆಗಳಿವೆ? ಏನೆಲ್ಲಾ ಅಭಿವೃದ್ಧಿ ಕಾರ್ಯಗಳಾಗಿವೆ? ಜನರ ನಿರೀಕ್ಷೆಗಳೇನು ಎಂಬ ಬಗ್ಗೆ ಸಂಕ್ಷಿಪ್ತ ನೋಟ ಇಲ್ಲಿದೆ.
ಕಸದ ರಾಶಿ: ವಾರ್ಡ್ 1ರ ರಾಜೀವ್ ಗಾಂಧಿ ಕಾಲನಿ, ಸುಭಾಷ್ ನಗರದ ವಿವಿಧೆಡೆ ಕಸದ ರಾಶಿ ಕಂಡುಬರುತ್ತಿದೆ. ನಗರ ಪ್ರದೇಶವಾಗಿದ್ದರೂ, ಖಾಲಿ ಜಾಗಗಳಲ್ಲಿ ಕಸ ವಿಲೇವಾರಿ ಮಾಡುವ ದೃಶ್ಯ ಸಾಮಾನ್ಯವಾಗಿದೆ. ಈ ಬಗ್ಗೆ ಸ್ಥಳೀಯರನ್ನು ವಿಚಾರಿಸಿದರೆ, ನಗರಸಭೆಯಿಂದ ನಿರ್ದಿಷ್ಟ ಸಮಯಕ್ಕೆ ಕಸ ಪಡೆಯಲು ವಾಹನ ಬರುವುದಿಲ್ಲ. ಕೆಲವು ರಸ್ತೆಗಳಿಗೆ ಬಂದರೂ ಹಲವು ಗಲ್ಲಿಗಳಿಗೆ ಬರುವುದೇ ಇಲ್ಲ. ಹೀಗಾಗಿ ಖಾಲಿ ಜಾಗದಲ್ಲಿ ಕಸ ವಿಲೇವಾರಿ ಮಾಡಲಾಗುತ್ತದೆ. ಪ್ರತಿನಿತ್ಯ ನಿಗದಿತ ಸಮಯಕ್ಕೆ ನಗರಸಭೆಯಿಂದ ವಾಹನ ವ್ಯವಸ್ಥೆ ಆಗಬೇಕು. ಆಗ ಕಸದ ರಾಶಿ ಸಮಸ್ಯೆ ಪರಿಹಾರವಾಗುತ್ತದೆ ಎಂಬುದು ಸ್ಥಳೀಯರ ಆಗ್ರಹ.
ಚಿಕ್ಕ ಚರಂಡಿಗಳು: ವಾರ್ಡ್ನ ಪ್ರಮುಖ ರಸ್ತೆಗಳು ಸೇರಿ ಹಲವು ಬೀದಿಗಳಲ್ಲಿ ಚಿಕ್ಕ ಚಿಕ್ಕ ಚರಂಡಿ ನಿರ್ವಿುಸಲಾಗಿದ್ದು, ಈಗಲೂ ಅವು ಹಾಗೆಯೇ ಇವೆ. ಕೆಲವು ಭಾಗದಲ್ಲಿ ಚರಂಡಿಗಳೇ ಇಲ್ಲವಾಗಿವೆ. ಇದರಿಂದ ಮನೆಯ ತ್ಯಾಜ್ಯ ನೀರು ಹೊರ ಹೋಗುವುದು ಕಷ್ಟವಾಗುತ್ತಿವೆ. ಜತೆಗೆ, ಮಳೆ ಬಂದರೆ ಮಳೆನೀರು ರಸ್ತೆಯ ಮೇಲೆ ನಿಂತು, ಸೊಳ್ಳೆಗಳ ಸಂತಾನೋತ್ಪತ್ತಿಗೆ ಸುಲಭ ಸಹಕಾರ ದೊರೆಯುತ್ತದೆ. ಕೆಲವು ರಸ್ತೆಗಳ ಬದಿಯ ಚರಂಡಿಗಳು ಕಟ್ಟಿಕೊಂಡಿರುವುದರಿಂದ, ಸೊಳ್ಳೆ ಕಾಟ ಹೇಳತೀರದಾಗಿದೆ.
ಬೀದಿದೀಪಗಳ ಅವ್ಯವಸ್ಥೆ: ವಾರ್ಡ್ನ ಕೆಲವು ರಸ್ತೆಗಳಲ್ಲಿ ಬೀದಿದೀಪಗಳ ಸಮಸ್ಯೆ ಸೃಷ್ಟಿಯಾಗಿದೆ. ಇನ್ನೂ ಕೆಲವೆಡೆ ಬೀದಿದೀಪಗಳೇ ಇಲ್ಲ. ಹಾಗಾಗಿ ಜನರು ತಡಕಾಡುತ್ತಲೇ ಓಡಾಡುವ ಪರಿಸ್ಥಿತಿ ಇದೆ.
ಸಿಸಿ ರಸ್ತೆಗಳು ಆಗುವುದು ಯಾವಾಗ?: ವಾರ್ಡ್ನ ಸಾಕಷ್ಟು ರಸ್ತೆಗಳಿಗೆ ಕಾಂಕ್ರೀಟ್ ಹಾಕಲಾಗಿದೆ. ಆದರೂ ಶೇ.20 ರಸ್ತೆಗಳು ಅಭಿವೃದ್ಧಿಯಲ್ಲಿ ಹಿಂದೆ ಬಿದ್ದಿವೆ. ಇನ್ನೂ ಕೆಲವು ರಸ್ತೆಗಳನ್ನು ನೀರಿನ ಮೀಟರ್ ಅಳವಡಿಕೆಗೆ ಅಗೆಯುತ್ತಿರುವ ಕಾರಣ ಪುನಃ ಹಾಳಾಗಲಿವೆ. ಪ್ರಮುಖವಾಗಿ ಗಲ್ಲಿ ರಸ್ತೆಗಳನ್ನು ಕಾಂಕ್ರೀಟ್ ರಸ್ತೆಯನ್ನಾಗಿಸುವಂತೆ ಜನತೆ ಒತ್ತಾಯಿಸುತ್ತಿದ್ದಾರೆ.
ಮನೆಗಳ ಪೂರ್ಣವಾಗುವುದು ಯಾವಾಗ?: ರಾಜೀವ್ ಗಾಂಧಿ ವಸತಿ ನಿಗಮ ಯೋಜನೆಯಡಿ ಫಲಾನುಭವಿಗಳಿಗೆ ನೀಡಲಾಗಿರುವ ಮನೆಗಳ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿಲ್ಲ. 100ಕ್ಕೂ ಹೆಚ್ಚು ಮನೆಗಳ ಕಾಮಗಾರಿ ಅರ್ಧಕ್ಕೆ ನಿಂತಿದೆ. ಹಲವು ಫಲಾನುಭವಿಗಳು ಸೂರಿಲ್ಲದೆ ಪರದಾಡುವಂತಾಗಿದೆ.
ನಮ್ಮ ವಾರ್ಡ್ನಲ್ಲಿ ಈಗಾಗಲೇ ಶೇ.80 ರಸ್ತೆಗಳನ್ನು ಸಿಸಿ ರಸ್ತೆಗಳನ್ನಾಗಿ ಪರಿವರ್ತಿಸಲಾಗಿದೆ. ಸಾಕಷ್ಟು ಚರಂಡಿಗಳನ್ನು ನಿರ್ವಿುಸಲಾಗಿದೆ. ಬೀದಿದೀಪಗಳ ವ್ಯವಸ್ಥೆ ಮಾಡಲಾಗಿದೆ. ಅನುದಾನದ ಕೊರತೆಯಿಂದ ಹಲವು ಕೆಲಸಗಳು ಬಾಕಿ ಉಳಿದಿವೆ. ಮನೆಗಳ ಕಾಮಗಾರಿ ಬಗ್ಗೆ ಶಾಸಕರು ಹಾಗೂ ರಾಜೀವ್ ಗಾಂಧಿ ವಸತಿ ನಿಗಮ ಮಂಡಳಿ ಗಮನಹರಿಸಬೇಕಿದೆ. | ಕಂಬಿ ನಂಜಪ್ಪ, ನಗರಸಭೆ ಮಾಜಿ ಸದಸ್ಯ, ರಾಜೀವ್ ಗಾಂಧಿ ಕಾಲನಿ ವಾರ್ಡ್ನ ಕೆಲವು ರಸ್ತೆಗಳಲ್ಲಿ ಕಸದ ನಿರ್ವಹಣೆಯಿಲ್ಲದೆ ಸಮಸ್ಯೆ ಉಂಟಾಗಿದೆ. ಪ್ರಮುಖವಾಗಿ ಚರಂಡಿಗಳಲ್ಲಿ ಸ್ವಚ್ಛತೆಯಿಲ್ಲದೆ, ಅನೈರ್ಮಲ್ಯ ವಾತಾವರಣ ಸೃಷ್ಟಿಯಾಗಿದೆ. ವಾರ್ಡ್ ಸದಸ್ಯರು ಈ ಬಗ್ಗೆ ಗಮನಹರಿಸಿ ಸಮಸ್ಯೆ ಪರಿಹರಿಸಬೇಕು. ಜತೆಗೆ, ವಾರಕ್ಕೆ ಕೇವಲ ಒಂದು ಗಂಟೆ ನೀರು ಬಿಡಲಾಗುತ್ತಿದೆ. ಕೆಲವೊಮ್ಮೆ ಅದರಲ್ಲೂ ವ್ಯತ್ಯಯ ಉಂಟಾಗುತ್ತಿದೆ. ಈ ಬಗ್ಗೆ ಹೆಚ್ಚಿನ ಗಮನಹರಿಸಬೇಕು. | ಜಗನ್ನಾಥ, ನಿವಾಸಿ ನಗರದ ಎಲ್ಲ ವಾರ್ಡ್ಗಳಲ್ಲಿ ಸ್ವಚ್ಛತೆಗೆ ಮೊದಲ ಆದ್ಯತೆ ನೀಡಲಾಗಿದೆ. ಪ್ರತಿನಿತ್ಯ ಮನೆಗಳಿಂದ ಕಸ ಸಂಗ್ರಹಿಸಿ ವಿಂಗಡಿಸಲಾಗುತ್ತಿದೆ. ಚರಂಡಿಗಳನ್ನು ಸ್ವಚ್ಛ ಮಾಡಲಾಗುತ್ತಿದೆ. ಸಾರ್ವಜನಿಕರು ಸಮಸ್ಯೆ ಬಗ್ಗೆ ದೂರು ಕೊಟ್ಟರೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಬಗೆಹರಿಸಲಾಗುವುದು. | ರಮೇಶ್ ಎಸ್.ಸುಣಗಾರ್, ಪೌರಾಯುಕ್ತ, ನಗರಸಭೆ