

ಚಾಮರಾಜನಗರ: ನಗರದ ಹೊರವಲಯದ ಜೋಡಿ ರಸ್ತೆಯಲ್ಲಿ ತಾಂಡವವಾಡುತ್ತಿದ್ದ ಕಸದ ರಾಶಿಯನ್ನು ನಗರಸಭೆ ಬುಧವಾರ ಬೆಳಗ್ಗೆ ತೆರವುಗೊಳಿಸಿತು.
ನಿತ್ಯ ಕಟ್ಟಡ ತ್ಯಾಜ್ಯ, ಪ್ಲಾಸ್ಟಿಕ್, ಚಿಕನ್ ಅಂಗಡಿ ಕಸವನ್ನು ಸುರಿಯುತ್ತಿದ್ದ ಪರಿಣಾಮ ರಸ್ತೆಯ ಎರಡೂ ಇಕ್ಕೆಲಗಳಲ್ಲಿ ತ್ಯಾಜ್ಯದ ರಾಶಿಯೇ ಇತ್ತು. ಈ ಬಗ್ಗೆ ‘ಜೋಡಿ ರಸ್ತೆಯ ಇಕ್ಕೆಲಗಳಲ್ಲಿ ಕಸದ ರಾಶಿ’ ಎಂಬ ಶೀರ್ಷಿಕೆಯಡಿ ಮೇ.26ರಂದು ವಿಜಯವಾಣಿ ವರದಿ ಮಾಡುವ ಮೂಲಕ ನಗರಸಭೆ ಗಮನ ಸೆಳೆದಿತ್ತು. ಇದರಿಂದ ಕಾರ್ಯ ಪ್ರವೃತ್ತರಾದ ಅಧಿಕಾರಿಗಳು ಮೇ.27ರಂದು ಜೆಸಿಬಿ ಮೂಲಕ ರಸ್ತೆ ಬದಿಯಲ್ಲಿದ್ದ ಕಟ್ಟಡ ತ್ಯಾಜ್ಯವನ್ನು ಮಟ್ಟಗೊಳಿಸಿ, ಉಳಿದ ತ್ಯಾಜ್ಯವನ್ನು ತೆರವುಗೊಳಿಸಿದ್ದಾರೆ.
ಮಳೆ ಬಿದ್ದ ಪರಿಣಾಮ ಕೋಳಿ ಹಾಗೂ ಹಸಿ ತ್ಯಾಜ್ಯ ಕೊಳೆತು ವಾಯುವಿಹಾರಿಗಳು ಹಾಗೂ ಸಾರ್ವಜನಿಕರು ಮೂಗು ಮುಚ್ಚಿಕೊಂಡು ತಿರುಗಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಅಲ್ಲದೆ ಅನಧಿಕೃತವಾಗಿ ಹಾಕಲಾಗುತ್ತಿರುವ ಕಸಕ್ಕೆ ಅಧಿಕಾರಿಗಳು ಕಡಿವಾಣ ಹಾಕುತ್ತಿಲ್ಲ ಎಂಬ ಆರೋಪ ಸಾರ್ವಜನಿಕ ವಲಯದಿಂದ ಕೇಳಿಬರುತ್ತಿತ್ತು. ವಿಜಯವಾಣಿ ವರದಿ ಪರಿಣಾಮದಿಂದ ಸಮಸ್ಯೆಗೆ ಮುಕ್ತಿ ದೊರತಂತಾಗಿದೆ.
ಮೈಸೂರು ಹಾಗೂ ಗುಂಡ್ಲುಪೇಟೆ ರಸ್ತೆಗೆ ಸಂಪರ್ಕ ಕಲ್ಪಿಸುವ ಜೋಡಿ ರಸ್ತೆಯಲ್ಲಿ ತಾಂಡವವಾಡುತ್ತಿದ್ದ ಕಸದ ರಾಶಿಯನ್ನು ಜೆಸಿಬಿ ಮೂಲಕ ತೆರವುಗೊಳಿಸಲಾಗಿದೆ. ಮತ್ತೆ ಅಲ್ಲಿ ಕಸ ಹಾಕುವವರ ಮೇಲೆ ನಿಗಾವಹಿಸಲು ಮತ್ತು ತಡೆಯಲು ಒಬ್ಬ ಕಾವಲುಗಾರನನ್ನು ಸಹ ನೇಮಿಸಿದ್ದೇವೆ.
ರಾಜಣ್ಣ,ನಗರಸಭೆ ಆಯುಕ್ತ, ಚಾಮರಾಜನಗರ.