

ಸಂದೀಪ್ ಸಾಲ್ಯಾನ್ ಬಂಟ್ವಾಳ
ಸಜೀಪಮುನ್ನೂರು ಗ್ರಾಮದ ಮಾರ್ನಬೈಲಿನಲ್ಲಿ ಮೂರು ವಾರಗಳ ಹಿಂದೆ ತ್ಯಾಜ್ಯ ತೆರವುಗೊಂಡ ಜಾಗದಲ್ಲಿಯೇ ಮತ್ತೆ ಕಸದ ರಾಶಿ ತುಂಬಿಕೊಂಡಿದೆ. ಪಂಚಾಯಿತಿ ಹಾಕಿದ ಎಚ್ಚರಿಕೆಯ ಸೂಚನಾ ಫಲಕದ ಮುಂದೆಯೇ ಕಸ ತುಂಬಿದ ಪ್ಲಾಸ್ಟಿಕ್ ಚೀಲವನ್ನು ಎಸೆದು ಹೋಗುತ್ತಿರುವ ಪ್ರವೃತ್ತಿ ಮುಂದುವರಿದಿದೆ. ಮಳೆಗೆ ರಸ್ತೆಯಲ್ಲಿಯೇ ತ್ಯಾಜ್ಯ ಕೊಳೆಯುತ್ತಿದೆ. ಬುದ್ಧಿವಂತರ ಜಿಲ್ಲೆಯ ದಡ್ಡರು ಮಾಡುವ ಅನಾಗರಿಕ ಕೃತ್ಯಕ್ಕೆ ಪಂಚಾಯಿತಿ ತಲೆತಗ್ಗಿಸುವಂತಾಗಿದೆ!
ಸಜೀಪಮುನ್ನೂರು ಗ್ರಾಮದ ಮಾರ್ನಬೈಲು, ನಂದಾವರ ರಸ್ತೆಗಳ ಇಕ್ಕೆಲಗಳು ಕಸ ಎಸೆಯುವ ತಾಣಗಳಾಗಿದೆ. ಮಾರ್ನಬೈಲು, ನಂದಾವರ ದ್ವಾರದ ಬಳಿ, ದಾಸರಗುಡ್ಡೆ, ರೈಲ್ವೆ ಟ್ರಾಕ್ ಹೀಗೆ ರಸ್ತೆಯ ಸುತ್ತಮುತ್ತ ತ್ಯಾಜ್ಯ ತುಂಬಿಕೊಂಡಿದೆ. ಇತ್ತೀಚೆಗೆ ವಿಜಯವಾಣಿಯಲ್ಲಿ ಸಜೀಪಮುನ್ನೂರು ಸಹಿತ ಕೆಲ ಗ್ರಾಮಗಳ ಕಸ ವಿಲೇವಾರಿ ಸಮಸ್ಯೆ ಬಗ್ಗೆ ಸರಣಿ ವರದಿ ಪ್ರಕಟಿಸಲಾಗಿತ್ತು. ವರದಿಗೆ ಸ್ಪಂದಿಸಿದ ದ.ಕ.ಜಿ.ಪಂ ಸಿಇಒ ಆನಂದ್, ಸಜೀಪಮುನ್ನೂರು ಗ್ರಾ.ಪಂ ಸಹಿತ ಎಲ್ಲ ಗ್ರಾ.ಪಂಗಳಿಗೆ ಸುತ್ತೋಲೆ ಕಳುಹಿಸಿ ಐದು ದಿನದೊಳಗಾಗಿ ಕಸ ತೆರವುಗೊಳಿಸುವಂತೆ ಆದೇಶ ಹೊರಡಿಸಿದ್ದರು. ಅದರಂತೆ ಮಾರ್ನಬೈಲ್ ಬಳಿಯ ಕಸವನ್ನು ಮಾತ್ರ ಜೆಸಿಬಿಯ ಮೂಲಕ ತೆರವುಗೊಳಿಸಲಾಗಿದ್ದು ಉಳಿದ ಭಾಗದಲ್ಲಿ ಹಾಗೆಯೇ ಉಳಿದಿತ್ತು.
ಮಾರ್ನಬೈಲುವಿನಲ್ಲಿ ತ್ಯಾಜ್ಯ ತೆರವುಗೊಳಿಸಿದ ಬಳಿಕ ಅದೇ ಸ್ಥಳದಲ್ಲಿ ಕಸ ಹಾಕುವುದನ್ನು ನಿಷೇಧಿಸಿದೆ ಎನ್ನುವ ಸೂಚನಾ ಫಲಕವನ್ನು ಸಜೀಪಮುನ್ನೂರು ಗ್ರಾ.ಪಂ ಹಾಕಿದೆ. ಸೂಚನಾ ಫಲಕದಲ್ಲಿ ಇಲ್ಲಿ ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ಕಸ ಎಸೆದು ನಿಯಮ ಉಲ್ಲಂಘಿಸುವವರಿಗೆ 5 ವರ್ಷ ಜೈಲು ಶಿಕ್ಷೆ ಅಥವಾ 1 ಲಕ್ಷದವರೆಗೆ ದಂಡ ಎಂದು ಬರೆಯಲಾಗಿದೆ. ಆದರೆ ಅದೇ ಸೂಚನಾ ಫಲಕದ ಅಡಿಯಲ್ಲಿ ದಿನ ನಿತ್ಯ ಕಸ ರಾಶಿ ಬೀಳುತ್ತಿದೆ.
ಸಜೀಪಮುನ್ನೂರು ಗ್ರಾ.ಪಂ ಸೂಚನಾ ಫಲಕದಲ್ಲಿ ಬರೆದಿರುವಂತೆ ಸುತ್ತಮುತ್ತಲ ಪ್ರದೇಶದಲ್ಲಿ ಯಾವುದೇ ಸಿಸಿ ಕ್ಯಾಮರಾ ಕಾಣುತ್ತಿಲ್ಲ, ಕಸ ಎಸೆಯುವವರಿಗೆ ಕಾರ್ಯಚರಣೆ ನಡೆಸಿ 1 ಸಾವಿರ ರೂ. ದಂಡ ವಿಧಿಸುತ್ತಿದ್ದರೂ ಇಷ್ಟು ಕಸ ಬೀಳುತ್ತಿರಲಿಲ್ಲ. ಮಾಹಿತಿ ಫಲಕದ ಸೂಚನೆ ಕೇವಲ ಫಲಕಕ್ಕೆ ಸೀಮಿತವಾಗದೆ ಅನುಷ್ಠಾನಕ್ಕೆ ಬಂದರೆ ಮಾತ್ರ ಕಸ ಎಸೆಯುವವರಿಗೆ ಕಡಿವಾಣ ಹಾಕಬಹುದು ಎಂದು ಗ್ರಾಮಸ್ಥರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸೂಚನಾ ಫಲಕದಲ್ಲಿ ಎಷ್ಟೇ ಕಠಿಣ ಶಿಕ್ಷೆಯ ಬಗ್ಗೆ ಉಲ್ಲೇಖಿಸಿದ್ದರೂ, ಕಾರ್ಯರೂಪಕ್ಕೆ ಬಾರದೆ ಹೋದರೆ ಅದು ಪ್ರಯೋಜನವಿಲ್ಲ ಎನ್ನುವುದು ಫಲಕದ ಅಡಿ ಭಾಗದಲ್ಲಿರುವ ತ್ಯಾಜ್ಯದ ರಾಶಿಯನ್ನು ನೋಡುವಾಗ ಅರಿವಾಗುತ್ತದೆ. ಸೂಚನಾ ಫಲಕಕ್ಕೆ ಬೆಲೆ ಕೊಡುತ್ತಿದ್ದರೆ ಯಾವ ಗ್ರಾಮದಲ್ಲೂ ಕಸದ ಸಮಸ್ಯೆಯೇ ಇರುತ್ತಿರಲಿಲ್ಲ. ಕಸ ವಿಲೇವಾರಿಗೆ ಸೂಕ್ತವಾಗಿ ಸ್ಪಂದಿಸದೆ ರಸ್ತೆ ಬದಿ ಎಲ್ಲೆಂದರಲ್ಲಿ ಕಸ ಎಸೆದು ಪಂಚಾಯಿತಿಯ ಸ್ವಚ್ಛತೆಯ ಪರಿಕಲ್ಪನೆಗೆ ಅಸಹಕಾರ ನೀಡುವವರಿಗೆ ಫಲಕದಲ್ಲಿ ಬರೆದಿರುವಂತೆ ದಂಡ ವಿಧಿಸುವುದೇ ಸೂಕ್ತ. ಕೆಲವೊಂದು ಪಂಚಾಯಿತಿಗಳು ಕಾರ್ಯಚರಣೆ ನಡೆಸಿ ಕಸ ಹಾಕುವವರಿಗೆ ದಂಡ ವಿಧಿಸಿದ ಪರಿಣಾಮ ಕಡಿವಾಣ ಬಿದ್ದಿದೆ. ಕಟ್ಟುನಿಟ್ಟಾಗಿ ದಂಡ ವಸೂಲಿ ಮಾಡುವುದರಿಂದ ಸ್ವಚ್ಛತೆಯ ಜತೆಗೆ ಪಂಚಾಯಿತಿಗೆ ಆದಾಯವೂ ಹೆಚ್ಚಾಗುತ್ತದೆ. ಇಂತಹ ಕ್ರಮದ ಬಗ್ಗೆ ಪಂಚಾಯಿತಿ ಆಡಳಿತ ಇಚ್ಛಾಶಕ್ತಿಯಿಂದ ಕಾರ್ಯೋನ್ಮುಖವಾಗಬೇಕು ಎಂದು ಪರಿಸರ ಪ್ರೇಮಿಗಳು ಆಗ್ರಹಿಸಿದ್ದಾರೆ.
ಮಾರ್ನಬೈಲು ಪರಿಸರದಲ್ಲಿ ಕೆಲವು ದಿನಗಳ ಹಿಂದೆ ತ್ಯಾಜ್ಯ ತೆರವುಗಳಿಸಿದ ಜಾಗದಲ್ಲಿ ಕಸ ಬಿದ್ದಿದೆ. ಇಲ್ಲಿ ಹಾಕಿರುವ ಸೂಚನಾ ಫಲಕದ ಕ್ರಮಗಳು ಅನುಷ್ಠಾನ ಹಾಕಬೇಕು. ಸೂಚನಾ ಫಲಕದಲ್ಲಿ ಸಿಸಿ ಕ್ಯಾಮರಾ ಇದೆ ಎಂದು ಬರೆಯಲಾಗಿದೆ. ಅದರ ಪರಿಸರದಲ್ಲಿ ಕ್ಯಾಮರಾ ಕಾಣುತ್ತಿಲ್ಲ.- ಮಧುಸೂದನ್ ಸಜೀಪ