

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ದೊಡ್ಡಬಳ್ಳಾಪುರ ತಾಲೂಕು ವ್ಯಾಪ್ತಿಯಲ್ಲಿ ಕಸ ಪ್ರಹಸನಕ್ಕೆ ತಡೆ ಇಲ್ಲದಂತಾಗಿದೆ, ಈಗಾಗಲೇ ಬೆಂಗಳೂರಿನ ಕಸದಿಂದ ಹೈರಾಣಾಗಿರುವ ಜನರಿಗೆ ಸ್ಥಳೀಯ ಆಡಳಿತಗಳ ವೈಲ್ಯದಿಂದ ಎದುರಾಗಿರುವ ಕಸದ ಕಂಕಟ ಮತ್ತಷ್ಟು ಬಾಧಿಸುತ್ತಿದೆ.
ದೊಡ್ಡಬಳ್ಳಾಪುರ ತಾಲೂಕಿನ ಕೈಗಾರಿಕಾ ವಲಯವಾಗಿರುವ ಬಾಶೆಟ್ಟಿಹಳ್ಳಿ ವ್ಯಾಪ್ತಿಯಲ್ಲಿನ ಹಲವು ಕಂಪನಿಗಳು ವೈಜ್ಞಾನಿಕವಾಗಿ ಕಸ ವಿಲೇವಾರಿ ಮಾಡದೆ, ವಾಮಮಾರ್ಗದಲ್ಲಿ ಕಸ ವಿಲೇವಾರಿ ಮಾಡುತ್ತಿರುವುದು ಗ್ರಾಮೀಣ ಭಾಗದಲ್ಲಿನ ಪರಿಸರಕ್ಕೆ ಧಕ್ಕೆ ತರುವಂತಾಗಿದೆ, ಕೈಗಾರಿಕೆಗಳಲ್ಲಿ ಉತ್ಪತ್ತಿಯಾಗುವ ರಾಸಾಯನಿಕ ಮಿಶ್ರಿತ ಕಸವನ್ನು ಎಲ್ಲೆಂದರಲ್ಲಿ ವಿಲೇವಾರಿ ಮಾಡುತ್ತಿರುವುದು ಒಂದೆಡೆಯಾದರೆ, ರಾಸಾಯನಿಕ ಮಿಶ್ರಿತ ತ್ಯಾಜ್ಯ ನೀರನ್ನು ರಾಜಕಾಲುವೆಗಳಿಗೆ ಹರಿಬಿಡುವ ಮೂಲಕ ಗ್ರಾಮೀಣ ಭಾಗದ ಜಲಮೂಲಗಳಿಗೆ ಕಂಟಕ ತಂದೊಡ್ಡಿವೆ. ಈ ಬಗ್ಗೆ ಎಚ್ಚರ ವಹಿಸಬೇಕಾದ ಮಾಲಿನ್ಯ ನಿಯಂತ್ರಣ ಮಂಡಳಿ ಕಣ್ಣು ಮುಚ್ಚಿಕುಳಿತಿದ್ದರೆ, ಸ್ಥಳೀಯ ಆಡಳಿತದ ಸಿಬ್ಬಂದಿ ಜಾಣಕುರುಡು ಪ್ರದರ್ಶಿಸುತ್ತಿದ್ದಾರೆ.
ಸೋಣ್ಣಪ್ಪನಹಳ್ಳಿಯಲ್ಲಿ ಕಸ ಮಾಫಿಯಾ: ಕೊನಘಟ್ಟ ಪಂಚಾಯಿತಿ ವ್ಯಾಪ್ತಿಯ ಸೋಣ್ಣಪ್ಪನಹಳ್ಳಿ ಸರ್ವೇ ನಂಬರ್‌ನಲ್ಲಿರುವ ಖಾಸಗಿ ಜಮೀನು ಕಸ ಸುರಿಯುವ ಡಂಫಿಂಗ್‌ಯಾರ್ಡ್ ಆಗಿ ಬಳಕೆಯಾಗುತ್ತಿದೆ, ಪ್ರತಿನಿತ್ಯ ಟನ್‌ಗಟ್ಟಲೆ ಕಸ ತಂದು ಸುರಿಯಲಾಗುತ್ತಿದೆ, ಹೀಗೆ ಸುರಿದ ಕಸವನ್ನು ಕೆಲವು ಕಡೆ ದೊಡ್ಡ ಗುಂಡಿಗಳನ್ನು ಮಾಡಿ ಹೂತುಹಾಕಲಾಗುತ್ತಿದೆ, ಮತ್ತೆ ಕೆಲವು ಕಡೆಗಳಲ್ಲಿ ಕಸವನ್ನು ಸುಟ್ಟು ಸ್ಥಳದಲ್ಲೇ ಕಸ ಕರಗಿಸುವ ದುಷ್ಕತ್ಯ ಎಸಗಲಾಗುತ್ತಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಭಾಗದ ಕೆಲವು ಖಾಸಗಿ ಜಮೀನು ಮಾಲೀಕರು ಹಲವು ಕಂಪನಿಗಳ ಜತೆ ಒಳ ಒಪ್ಪಂದ ಮಾಡಿಕೊಂಡು ಕಸ ಸುರಿಯಲು ಅನುಮತಿ ನೀಡಿದ್ದಾರೆ ಎಂಬ ಆರೋಪ ಕೇಳಿಬರುತ್ತಿದ್ದು, ಖಾಸಗಿ ಕಂಪನಿಗಳವರು ಕಸವನ್ನು ಸುರಿದು ಗ್ರಾಮೀಣ ಭಾಗದ ಪರಿಸರವನ್ನು ಮಲಿನಗೊಳಿಸುತ್ತಿದ್ದಾರೆ ಎಂಬ ಆಕ್ರೋಶ ವ್ಯಕ್ತವಾಗುತ್ತಿದೆ.
ರಘುನಾಥಪುರ ಕೆರೆಗೆ ಕಂಟಕ: ಇನ್ನು ಇದೇ ಖಾಸಗಿ ಜಮೀನಿನ ಪಕ್ಕದಲ್ಲಿ ಹಾದು ಹೋಗಿರುವ ರಾಜಕಾಲುವೆ ಸಮೀಪವೇ ಬಾಶೆಟ್ಟಿಹಳ್ಳಿ ಪಂಚಾಯಿತಿ ವ್ಯಾಪ್ತಿಯಲ್ಲಿ ಸಂಗ್ರಹವಾಗುವ ಕಸವನ್ನು ತಂದು ಸುರಿಯಲಾಗುತ್ತಿದೆ, ಈ ಕಸ ಮಳೆಗಾಲದಲ್ಲಿ ಮಳೆನೀರಿನೊಂದಿಗೆ ಬೆರೆತು ರಾಜಕಾಲುವ ಮೂಲಕ ರಘುನಾಥಪುರ ಕೆರೆ ಒಡಲು ಸೇರುತ್ತಿದೆ ಎಂದು ಸ್ಥಳೀಯ ಮುಖಂಡರು ಆರೋಪಿಸಿದ್ದಾರೆ. ಈ ಬಗ್ಗೆ ಮಾಹಿತಿ ತಿಳಿದ ರೈತ ಪರ ಹೋರಾಟಗಾರರು, ಪರಿಸರ ಪ್ರೇಮಿಗಳು ಸ್ಥಳಕ್ಕೆ ದಾವಿಸಿ ಕಸ ಸುರಿಯುತ್ತಿರುವವರನ್ನು ಪ್ರಶ್ನಿಸಿದ್ದಾರೆ. ಇದಕ್ಕೆ ಹಾರಿಕೆ ಉತ್ತರ ನೀಡುವುದಲ್ಲದೆ ಪ್ರಶ್ನಿಸಿದರೆ ಅವರನ್ನೇ ದಬಾಯಿಸುತ್ತಾರೆ. ಇವರ ಹಿಂದೆ ಪ್ರಭಾವಿಗಳ ಕೈವಾಡವಿದೆ ಎಂದು ರೈತ ಮುಖಂಡರು ಆರೋಪಿಸಿದ್ದಾರೆ.
ಮಾಲಿನ್ಯ ನಿಯಂತ್ರಣ ಮಂಡಳಿ ನೇಪಥ್ಯ:
ಹಲವು ವರ್ಷಗಳ ಹೋರಾಟದ ಲವಾಗಿ ದೊಡ್ಡಬಳ್ಳಾಪುರ ನಗರದಲ್ಲಿ ಕಳೆದೊಂದು ತಿಂಗಳ ಹಿಂದೆ ಮಾಲಿನ್ಯ ನಿಯಂತ್ರಣ ಮಂಡಳಿ ಕಚೇರಿ ಉದ್ಘಾಟನೆಯಾಗಿದೆ. ಆದರೆ ಉದ್ಘಾಟನೆಯಂದು ಪೂಜೆ ನೆರವೇರಿಸಿ ಹೋದ ಅಧಿಕಾರಿ-ಸಿಬ್ಬಂದಿ ಇದುವರೆಗೆ ಇತ್ತ ಕಡೆ ತಲೆಹಾಕಿಲ್ಲ. ಇದರ ವಿರುದ್ಧವೂ ಹಲವು ಬಾರಿ ಹೋರಾಟ ನಡೆಸಿದ್ದರೂ ಯಾವುದೇ ಪ್ರಯೋಜವಾಗಿಲ್ಲ. ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳು ದೊಡ್ಡಬಳ್ಳಾಪುರದ ಕಡೆ ತಲೆಹಾಕಿಯೂ ಮಲಗುವುದಿಲ್ಲ. ಇದರಿಂದ ಈ ಭಾಗದಲ್ಲಿ ಪರಿಸರ ಮಾಲಿನ್ಯಕ್ಕೆ ತಡೆ ಇಲ್ಲದಂತಾಗಿದೆ ಎಂದು ಅರ್ಕಾವತಿ ನದಿ ಹೋರಾಟ ಸಮಿತಿ ಸದಸ್ಯರು ಅಳಲು ತೋಡಿಕೊಂಡಿದ್ದಾರೆ.
ಖಾಸಗಿ ಜಮೀನೊಂದರಲ್ಲಿ ಈ ಭಾಗದ ಹಲವು ಕಂಪನಿಗಳ ತ್ಯಾಜ್ಯವನ್ನು ತಂದು ಸುರಿಯಲಾಗುತ್ತಿದೆ, ಹೀಗೆ ಸುರಿದ ಕಸವನ್ನು ಸ್ಥಳದಲ್ಲೇ ಬೆಂಕಿ ಹಚ್ಚಿ ಕಸವನ್ನು ಕರಗಿಸುವ ಕೃತ್ಯ ಎಸಗಲಾಗುತ್ತಿದೆ, ಇದರಿಂದ ತೀವ್ರತರವಾದ ಪರಿಸರ ಮಾಲಿನ್ಯವಾಗುತ್ತಿದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡಿದ್ದರೂ ಯಾವುದೇ ಪ್ರಯೋಜವಾಗುತ್ತಿಲ್ಲ.
ವಸಂತ್, ಅರ್ಕಾವತಿ ನದಿ ಹೋರಾಟ ಸಮಿತಿ ಮುಖಂಡ
ಬಾಶೆಟ್ಟಿಹಳ್ಳಿ ಪಂಚಾಯಿತಿ ವ್ಯಾಪ್ತಿಯಲ್ಲಿ ಸಂಗ್ರಹವಾಗುವ ಕಸವನ್ನು ತಂದು ಸೊಣ್ಣಪ್ಪನಹಳ್ಳಿ ಸರ್ವೆ ನಂಬರಿನ ಜಮೀನಿನ ಬಳಿ ಹಾದುಹೋಗಿರುವ ರಾಜಕಾಲುವೆ ಬಳಿ ಸುರಿಯಲಾಗುತ್ತಿದೆ. ಮಳೆಗಾಲದಲ್ಲಿ ಮಳೆ ನೀರಿನೊಂದಿಗೆ ಕಸ ಬೆರೆತು ರಾಜಕಾಲುವೆ ಮೂಲಕ ಹರಿದು ರಘುನಾಥಪುರ ಕೆರೆ ಸೇರುತ್ತಿದೆ. ಈ ಬಗ್ಗೆ ಇಲ್ಲಿನ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳಿಗೆ ತಿಳಿದಿದರೂ ಯಾವುದೇ ಕ್ರಮಕ್ಕೆ ಮುಂದಾಗುತ್ತಿಲ್ಲ.
ಆರ್.ಎಂ.ಮಹದೇವ್, ರಾಜ್‌ಕುಮಾರ್ ಸಂಘ ಸಂಘಟನಾ ಕಾರ್ಯದರ್ಶಿ, ದೊಡ್ಡಬಳ್ಳಾಪುರ