ಗರಗ ಗ್ರಾಮದೇವಿ ಜಾತ್ರೆ ಆರಂಭ

11 UPBR 1
Published on

ಉಪ್ಪಿನಬೆಟಗೇರಿ: ನೆತ್ತಿ ಸುಡುವ ಬಿಸಿಲು, ಗ್ರಾಮದ ತುಂಬೆಲ್ಲ ಎಲ್ಲಿ ನೋಡಿದರೂ ಭಂಡಾರದಿಂದ ಮಿಂದೆದ್ದ ಮುಖಗಳು, ಬಿಸಿಲಿನಿಂದ ಕಾದು ಕೆಂಡವಾದ ರಸ್ತೆಯಲ್ಲಿಯೇ ಬರಿಗಾಲಿನಿಂದ ತಿರುಗಾಡುವುದು ಒಂದೆಡೆಯಾದರೆ, 12 ವರ್ಷಗಳ ನಂತರ ಜರುಗುತ್ತಿರುವ ಗ್ರಾಮದೇವಿ ದ್ಯಾಮವ್ವ-ದುರ್ಗವ್ವ ದೇವಿಯರ ಜಾತ್ರೆಗೆ ತಂಡೋಪತಂಡವಾಗಿ ಭಕ್ತರು ಹರಿದು ಬರುತ್ತಿದ್ದಾರೆ.

ಧಾರವಾಡ ತಾಲೂಕಿನ ಗರಗ ಗ್ರಾಮದಲ್ಲಿ 12 ವರ್ಷಗಳ ಬಳಿಕ ಗ್ರಾಮ ದೇವತೆಗಳ ಜಾತ್ರೆ ನಡೆಯುತ್ತಿದ್ದು, ಮೇ 9ರಿಂದ ಜಾತ್ರೆ ಆರಂಭವಾಗಿದ್ದು, ಮೇ 10ರಿಂದ ಹೊನ್ನಾಟಕ್ಕೆ ಚಾಲನೆ ದೊರೆತಿದೆ. ಭಾನುವಾರ ಗ್ರಾಮದೇವಿ ದೇವಸ್ಥಾನದಿಂದ ದ್ಯಾಮವ್ವ-ದುರ್ಗಾಮಾತೆಯರ ಮೂರ್ತಿಗಳನ್ನು ಹೊತ್ತ ಭಕ್ತರು ಹೊನ್ನಾಟ ಆಡುತ್ತ ಹೊಸ ಪಂಚಾಯಿತಿ ಮತ್ತು ಕಟಾನ್ ಹಕ್ಕಲ ಓಣಿಯಲ್ಲಿ ಪ್ರತಿಷ್ಠಾಪಿಸಿದ್ದರು. ಮೆರವಣಿಗೆಯುದ್ದಕ್ಕೂ ಸಾವಿರಾರು ಭಕ್ತರು ಪರಸ್ಪರ ಭಂಡಾರ ಎರಚಿ ಸಂಭ್ರಮಿಸಿದರು. ಮೆರವಣಿಗೆಯಲ್ಲಿ ಡೊಳ್ಳು ಕುಣಿತ, ಜಗ್ಗಲಿಗೆ ಮೇಳದವರು ಪಾಲ್ಗೊಂಡಿದ್ದರು. ಎಲ್ಲ ಭಕ್ತರಿಗೆ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿತ್ತು. ಹೊನ್ನಾಟದ ನಂತರ ಉಭಯ ದೇವಿಯರನ್ನು ಮರಳಿ ದೇವಸ್ಥಾನಕ್ಕೆ ತೆಗೆದುಕೊಂಡು ಹೋಗಲಾಯಿತು.

ಮೇ 8ರಂದು ಗ್ರಾಮದೇವಿಯರ ಮೂರ್ತಿಗಳನ್ನು ಸೀಮೆಯಿಂದ (ಕಿತ್ತೂರ ಹಳ್ಳ) ದ್ಯಾಮವ್ವ ದೇವಸ್ಥಾನದವರೆಗೆ ಮಹಿಳೆಯರ ಪೂರ್ಣ ಕುಂಭಮೇಳ, ಸಕಲ ಮಂಗಳ ವಾದ್ಯಗಳಿಂದ ದೇವಸ್ಥಾನಕ್ಕೆ ತರಲಾಯಿತು. ಮೇ 9ರಂದು ದೇವಿ ಗುಡಿಯಲ್ಲಿ ಸ್ವಾಮೀಜಿಗಳ ನೇತೃತ್ವದಲ್ಲಿ ಹೋಮ, ಮೂರ್ತಿಗಳಿಗೆ ಜೀವ ಕಳೆ ತುಂಬುವುದು ವಿವಿಧ ಪೂಜೆಗಳು ನೆರವೇರಿದವು. ಮೇ 10 ರಂದು ಶನಿವಾರ ಗೌಡ್ರ ಓಣಿ, ಕಲ್ಲಾಪೂರ ಓಣಿಯಲ್ಲಿ ಹೊನ್ನಾಟ ಆಡಿ ಉಡಿ ತುಂಬಿದ್ದರು. ಈಗಾಗಲೆ ಹತ್ತಾರು ಕ್ವಿಂಟಾಲ್ನಷ್ಟು ಭಂಡಾರ ಬಳಕೆ ಮಾಡಲಾಗಿದೆ. ಹೊನ್ನಾಟ ನಡೆಯುವ ಪ್ರತಿ ಓಣಿಯಲ್ಲಿಯೂ ಭಕ್ತರಿಗೆ ಪ್ರಸಾದ ವ್ಯವಸ್ಥೆ ಅಚ್ಚುಕಟ್ಟಾಗಿ ನಡೆಯುತ್ತಿದೆ.

ಭಾವೈಕ್ಯಕ್ಕೆೆ ಸಾಕ್ಷಿ: ಗ್ರಾಮವೂ ಮೊದಲಿನಿಂದಲೂ ಸರ್ವಧರ್ಮ ಭಾವೈಕ್ಯ ಸಾರುತ್ತ ಬಂದಿದ್ದು, ಪ್ರತಿ ಓಣಿಯಲ್ಲಿ ಜರುಗುವ ಹೊನ್ನಾಟ ಮತ್ತು ಉಡಿ ತುಂಬುವ ಕಾರ್ಯಕ್ರಮದಲ್ಲಿ ಮುಸ್ಲಿಮರು ಪಾಲ್ಗೊಂಡು ಉಭಯ ದೇವಿಯರಿಗೆ ಉಡಿ ತುಂಬುತ್ತಾರೆ. ಉಭಯ ದೇವಿಯರ ಜಾತ್ರೆ ಅಂಗವಾಗಿ ಮಕ್ಕಳ ಮನರಂಜನೆಗಾಗಿ ಹೊಲದಲ್ಲಿ ದೊಡ್ಡ ಗಾತ್ರಗಳ ತೊಟ್ಟಿಲು, ತಿರಗುಣಿ, ಸೇರಿ ಇತರೆ ಆಟದ ಸಾಮಗ್ರಿಗಳನ್ನು ತರಿಸಲಾಗಿದ್ದು, ಮಹಿಳೆಯರು, ಯುವತಿಯರು ಹಾಗೂ ಮಕ್ಕಳು ಖುಷಿಯಿಂದ ಆಟವಾಡಿ ಸಂತಸ ಪಡುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net