

ಉಪ್ಪಿನಬೆಟಗೇರಿ/ಗರಗ: ದ್ಯಾಮವ್ವ-ದುರ್ಗವ್ವ ಜಾತ್ರೆ ಅಂಗವಾಗಿ ಕಳೆದ ಒಂಭತ್ತು ದಿನಗಳಿಂದ ಆರಂಭವಾಗಿದ್ದ ಗರಗ ಗ್ರಾಮದೇವಿ ಜಾತ್ರೆಯ ವಿವಿಧ ಕಾರ್ಯಕ್ರಮಗಳು ಸೋಮವಾರ ಸಂಪನ್ನಗೊಂಡವು.
ಜಾತ್ರೆ ಅಂಗವಾಗಿ ಮೇ 8ರಂದು ಉಭಯ ದೇವಿಯರ ಪುರ ಪ್ರವೇಶವಾಗಿತ್ತು. ನಂತರ ಗ್ರಾಮದ ವಿವಿಧ ಓಣಿಗಳಲ್ಲಿ ದೇವಿಯರ ಮೂರ್ತಿಗಳ ಭವ್ಯ ಮೆರವಣಿಗೆ ಹಾಗೂ ಹೊನ್ನಾಟ ವಿಜೃಂಭಣೆಯಿಂದ ಜರುಗಿದವು. ಭಾನುವಾರ ದ್ಯಾಮವ್ವ-ದುರ್ಗವ್ವ ದೇವಿ ದೇವಸ್ಥಾನದ ಓಣಿಯ ಭಕ್ತರು ಹೊನ್ನಾಟ ಆಡಿ ದೇವಿಯರ ಉಡಿ ತುಂಬಿ ಸಂಭ್ರಮಿಸಿದರು.
ರಾತ್ರಿ ಗಂಗಾವತಿ ಪ್ರಾಣೇಶ, ಬಸವರಾಜ ಮಹಾಮನೆ, ಮಲ್ಲಪ್ಪ ಹೊಂಗಲ ಹಾಗೂ ರಮೇಶ ಕುರುಬಗಟ್ಟಿ ಅವರಿಂದ ಹಾಸ್ಯ ಕಾರ್ಯಕ್ರಮ ಜರುಗಿತು.
ಸೋಮವಾರ ಬೆಳಗ್ಗೆ ಗ್ರಾಮದೇವಿ ದೇವಸ್ಥಾನದಲ್ಲಿ ಉಡಿ ತುಂಬಲು ಸಕಲ ವ್ಯವಸ್ಥೆ ಮಾಡಲಾಗಿತ್ತು. 10 ಗಂಟೆಗೆ ಉಭಯ ದೇವಿಯರನ್ನು ಗ್ರಾಮದ ಅಗಸಿ ಮೂಲಕ ಜಗದ್ಗುರು ಮಡಿವಾಳೇಶ್ವರ ಮಠಕ್ಕೆ ತೆಗೆದುಕೊಂಡು ಬರಲಾಯಿತು.
ಮೆರವಣಿಗೆಯುದ್ದಕ್ಕೂ ಡೊಳ್ಳು, ಡಿಜೆ ಹಾಡುಗಳು ಸೇರಿ ಸಕಲ ಮಂಗಳ ವಾದ್ಯಗಳು ಜಾತ್ರೋತ್ಸವದ ಮೆರುಗು ಹೆಚ್ಚಿಸಿದವು. ಶ್ರೀ ಮಡಿವಾಳೇಶ್ವರ ಕತೃ ಗದ್ದುಗೆ ಎದುರು ಪ್ರತಿಷ್ಠಾಪಿಸಿದ ದೇವಿಯರಿಗೆ ಗ್ರಾಮ ಹಾಗೂ ಸುತ್ತಲಿನ ಗ್ರಾಮಗಳ ಭಕ್ತರು ಸರತಿ ಸಾಲಿನಲ್ಲಿ ನಿಂತು ಉಡಿ ತುಂಬಿದರು.
ರಾಣಿಗ್ಯಾ, ಅರ್ಚಕರು ಸೇರಿ ಸೇವೆ ಸಲ್ಲಿಸಿದವರಿಗೆ ಜೋಳದ ಮೇಟಿ ರಾಶಿ ಹಂಚಲಾಯಿತು.
ಮಾಜಿ ಶಾಸಕ ಅಮೃತ ದೇಸಾಯಿ ಸೇರಿ ಹಲವಾರು ಮುಖಂಡರು ಉಭಯ ದೇವಿಯರ ದರ್ಶನ ಪಡೆದರು. ಮಧ್ಯಾಹ್ನ ಮಡಿವಾಳೇಶ್ವರ ಮಠದಿಂದ ಕುಂಬಾರ ಓಣಿ, ಮಾರ್ಕೆಟ್ ರಸ್ತೆ, ಬಸ್ ನಿಲ್ದಾಣ, ಹರಿಜನಕೇರಿ ಓಣಿ, ಜೈನರ ಓಣಿ, ತಳವಾರ ಓಣಿ ಹಾಗೂ ಹನುಮಂತ ದೇವರ ಪಾದಗಟ್ಟೆಗೆ ತೆರಳಿತು. ರಾತ್ರಿ 10 ಗಂಟೆಗೆ ಸೀಮೆ ಕಟ್ಟುವ (ಸೀಮೋಲ್ಲಂಘನ) ಕಾರ್ಯಕ್ರಮ ನೆರವೇರಿತು. ಶುಕ್ರವಾರವೂ ಉಭಯ ದೇವಿಯರಿಗೆ ಉಡಿ ತುಂಬುವ ಕಾರ್ಯಕ್ರಮ ನಡೆಯಲಿದೆ.