ಶ್ರೀ ಬ್ರಹ್ಮಬೈದರ್ಕಳ ಗರಡಿ ಕ್ಷೇತ್ರದಲ್ಲಿ ನಾಗಬ್ರಹ್ಮಮಂಡಲೋತ್ಸವ ಭಕ್ತರ ಗಢಣ

naga
Published on

ಮಂಗಳೂರು: ಕಂಕನಾಡಿ ಶ್ರೀ ಬ್ರಹ್ಮಬೈದರ್ಕಳ ಗರಡಿ ಕ್ಷೇತ್ರದಲ್ಲಿ ಮಂಗಳವಾರ ಸಂಭ್ರಮದ ನಾಗಬ್ರಹ್ಮ ಮಂಡಲೋತ್ಸವ ನಾಗಪಾತ್ರಿ ಕಾವೂರು ಮನೋಜ್ ಶಾಂತಿ ನೇತೃತ್ವದಲ್ಲಿ ನೆರವೇರಿತು.
ಕಂಕನಾಡಿ ಗರಡಿ ಸ್ಥಾಪನೆಗೊಂಡು 150 ವರ್ಷಗಳು ಪೂರ್ಣಗೊಂಡಿರುವ ಪ್ರಯುಕ್ತ ಮಾ.3ರಿಂದ 7ರವರೆಗೆ ಧಾರ್ಮಿಕ ಕಾರ್ಯಕ್ರಮಗಳು ಗರಡಿ ಕ್ಷೇತ್ರದ ಪ್ರಧಾನ ಅರ್ಚಕರಾದ ವೇದಮೂರ್ತಿ ಕೆ.ವಾಸುದೇವ ಶಾಂತಿಯವರ ಉಪಸ್ಥಿತಿಯಲ್ಲಿ ಬಿ.ಗಂಗಾಧರ ಶಾಂತಿಯವರ ನೇತೃತ್ವದಲ್ಲಿ ಹಾಗೂ ಶ್ರೀ ನಾರಾಯಣ ಗುರು ವೈದಿಕ ಸಮಿತಿ ಮಂಗಳೂರು ಇವರ ಸಹಭಾಗಿತ್ವದಲ್ಲಿ ನಡೆಯಿತು.
ಮಾ.7ರಂದು ಪ್ರಾತಃಕಾಲ 4.30ರಿಂದ ಗಣಹೋಮ, ನಾಗದೇವರಿಗೆ ವಿಶೇಷ ಪಂಚಾಮೃತ ಅಭಿಷೇಕ, ತನುತಂಬಿಲ ಸೇವೆ, ಮಧ್ಯಾಹ್ನ 11ರಿಂದ ಆಶ್ಲೇಷ ಬಲಿ, ಸರ್ಪಸೂಕ್ತ ಹೋಮ, ಮಂಡಲ ಪೂಜೆ, ರಾತ್ರಿ 9ರಿಂದ ನಾಗಪಾತ್ರಿ ಮನೋಜ್ ಶಾಂತಿ ಮತ್ತು ಬಳಗದವರಿಂದ ನಾಗಸಾನಿಧ್ಯದಲ್ಲಿ ಹಾಲಿಟ್ಟು ಸೇವೆ, ರಾತ್ರಿ 12ರಿಂದ ನಾಗಬ್ರಹ್ಮಮಂಡಲೋತ್ಸವ ಸೇವೆ ನಡೆಯಿತು.
ಮೇಯರ್ ಜಯಾನಂದ ಅಂಚನ್, ಶಾಸಕ ವೇದವ್ಯಾಸ ಕಾಮತ್, ಕಂಕನಾಡಿ ಗರಡಿ ಕ್ಷೇತ್ರದ ಅಧ್ಯಕ್ಷ ಚಿತ್ತರಂಜನ್ ಕೆ., ಗರಡಿ ಸಂಭ್ರಮದ ಅಧ್ಯಕ್ಷ ಮೋಹನ್ ಉಜ್ಜೋಡಿ, ಮ್ಯಾನೇಜರ್ ಜೆ. ಕಿಶೋರ್ ಕುಮಾರ್, ಗರಡಿ ಕ್ಷೇತ್ರದ ಮೊಕ್ತೇಸರರಾದ ಬಿ.ವಿಠಲ, ಎ.ವಾಮನ, ಬಿ.ದಾಮೋದರ ನಿಸರ್ಗ, ದಿವರಾಜ್, ಜಗದೀಪ್ ಡಿ.ಸುವರ್ಣ, ದಿನೇಶ್ ಅಂಚನ್, ಜೆ.ವಿಜಯ, ಉದ್ಯಮಿ ಜಿತೇಂದ್ರ ವೈ. ಸುವರ್ಣ, ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಆರ್., ನಾರಾಯಣಗುರು ವಿಚಾರ ವೇದಿಕೆ ಸಂಚಾಲಕ ಸತ್ಯಜಿತ್ ಸುರತ್ಕಲ್, ಮೂಲ್ಕಿ ಬಿಲ್ಲವ ಮಹಾಮಂಡಲ ಉಪಾಧ್ಯಕ್ಷ ಜಯ ಸಿ. ಸುವರ್ಣ, ಕಾರ್ಪೊರೇಟರ್‌ಗಳಾದ ಪ್ರವೀಣ್ ಚಂದ್ರ ಆಳ್ವ, ಸಂದೀಪ್ ಗರೋಡಿ, ಭಾಸ್ಕರ್ ಕೆ., ಅನಿಲ್ ಪೂಜಾರಿ, ಆರ್ಥಿಕ ಸಮಿತಿ ಮುಖ್ಯಸ್ಥ ಶರಣ್ ಪಂಪ್‌ವೆಲ್ ಮೊದಲಾದವರು ಉಪಸ್ಥಿತರಿದ್ದರು.
ಮಹಾ ಅನ್ನದಾನ: ನಾಗಬ್ರಹ್ಮಮಂಡಲೋತ್ಸವ ಅಂಗವಾಗಿ ಬೆಳಗ್ಗೆ 11.30ರಿಂದ ಮಹಾ ಅನ್ನದಾನ ಆರಂಭವಾಗಿದ್ದು, ರಾತ್ರಿಯವರೆಗೂ ಅನ್ನದಾನ, ಉಪಾಹಾರ ವ್ಯವಸ್ಥೆ ಮಾಡಲಾಗಿತ್ತು. 50ಸಾವಿರಕ್ಕೂ ಅಧಿಕ ಮಂದಿ ಅನ್ನಪ್ರಸಾದ, ಉಪಾಹಾರ ಸೇವಿಸಿದರು. ಕ್ಷೇತ್ರಕ್ಕೆ ಆಗಮಿಸಿದ ಭಕ್ತಾದಿಗಳಿಗೆ ಪ್ರಸಾದ ವ್ಯವಸ್ಥೆ, ಅನ್ನದಾನದ ಸುವ್ಯವಸ್ಥೆಗೆ 1700ಕ್ಕೂ ಅಧಿಕ ಸ್ವಯಂಸೇವಕರು ನಿರಂತರ ಸೇವೆಯಲ್ಲಿ ತೊಡಗಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net