

ಮಂಗಳೂರು: ಕಂಕನಾಡಿ ಬ್ರಹ್ಮಶ್ರೀ ಬೈದರ್ಕಳ ಗರಡಿ ಕ್ಷೇತ್ರದ 150ರ ಸಂಭ್ರಮ ಕಾರ್ಯಕ್ರಮಕ್ಕೆ ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಜಿಲ್ಲೆ ಸೇರಿದಂತೆ ಶುಕ್ರವಾರ ಹತ್ತೂರಿನಿಂದ ಹೊರೆಕಾಣಿಕೆ ಮೆರವಣಿಗೆ ಹರಿದು ಬಂತು. ಮೆರವಣಿಗೆಯಲ್ಲಿ 300ಕ್ಕೂ ಅಧಿಕ ವಾಹನಗಳು ಭಾಗವಹಿಸಿದವು.
ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಿಂದ ಸಂಜೆ ಹೊರೆಕಾಣಿಕೆ ಮೆರವಣಿಗೆ ಆರಂಭಗೊಂಡಿತು. 200ಕ್ಕೂ ಅಧಿಕ ಸುಮಂಗಲಿಯರಿಂದ ಪೂರ್ಣಕುಂಭ ಸ್ವಾಗತ, ಭಜನಾ ತಂಡಗಳು, ಚೆಂಡೆ ತಂಡಗಳು, ಕೀಲುಕುದುರೆ, ವೇಷಭೂಷಣಗಳು, ಕೋಟಿ ಚೆನ್ನಯರ ಪ್ರತಿಕೃತಿಗಳು, ವಾದ್ಯಘೋಷಗಳು ಹೊರೆಕಾಣಿಕೆಯ ವೈಭವಕ್ಕೆ ಕಳೆ ನೀಡಿದವು. ಪಂಪ್‌ವೆಲ್‌ನಿಂದ ಸಹಸ್ರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಮೆರವಣಿಗೆಯಲ್ಲಿ ಸಾಗಿ ಬಂದರು.
ವೈಭವದ ಹೊರೆಕಾಣಿಕೆ ಮೆರವಣಿಗೆಯನ್ನು ಶ್ರೀಧಾಮ ಮಾಣಿಲ ಕ್ಷೇತ್ರದ ಶ್ರೀ ಮೋಹನ್‌ದಾಸ್ ಸ್ವಾಮೀಜಿ ಉದ್ಘಾಟಿಸಿ, ಆಶೀರ್ವಚನ ನೀಡಿದರು. ವೀರಪುರುಷರಾದ ಕೋಟಿ-ಚೆನ್ನಯರ ಪವಿತ್ರ ಕ್ಷೇತ್ರವಾದ ಕಂಕನಾಡಿ ಗರಡಿಯಲ್ಲಿ ನಡೆಯುತ್ತಿರುವ 5 ದಿನಗಳ ಗರಡಿ ಸಂಭ್ರಮ ದೈವ-ದೇವರ ಅನುಗ್ರಹದೊಂದಿಗೆ ಯಶಸ್ವಿಯಾಗಿ ನಡೆಯಲಿ. ಇಂತಹ ಉತ್ಸವಗಳು ಧರ್ಮಜಾಗೃತಿಯೊಂದಿಗೆ, ಐಕ್ಯತೆ, ಆಧ್ಯಾತ್ಮಿಕತೆ ಮೂಡಿಸುವುದರೊಂದಿಗೆ ಪ್ರತಿಯೊಬ್ಬನಲ್ಲೂ ಚೈತನ್ಯ ಮೂಡಿಸಲು ಸಾಧ್ಯ ಎಂದರು.
ಈ ಸಂದರ್ಭ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದ ಅಧ್ಯಕ್ಷ ಎಚ್.ಎಸ್. ಸಾಯಿರಾಮ್, ಶಾಸಕ ವೇದವ್ಯಾಸ ಕಾಮತ್, ಕಂಕನಾಡಿ ಗರಡಿ ಕ್ಷೇತ್ರದ ಅಧ್ಯಕ್ಷ ಚಿತ್ತರಂಜನ್ ಕೆ., ಗರಡಿ ಸಂಭ್ರಮದ ಅಧ್ಯಕ್ಷ ಮೋಹನ್ ಉಜ್ಜೋಡಿ, ಮೇಯರ್ ಜಯಾನಂದ ಅಂಚನ್, ಉರ್ವ ಮಾರಿಯಮ್ಮ ದೇವಸ್ಥಾನದ ದೇವಾನಂದ ಗುಜರನ್, ಉದ್ಯಮಿ ಯಾದವ ಕೋಟ್ಯಾನ್, ಗರಡಿ ಕ್ಷೇತ್ರದ ಮೊಕ್ತೇಸರರಾದ ಬಿ.ವಿಠಲ, ಎ.ವಾಮನ, ಬಿ.ದಾಮೋದರ ನಿಸರ್ಗ, ದಿವರಾಜ್, ದಿನೇಶ್ ಅಂಚನ್, ಜೆ.ವಿಜಯ, ಕುದ್ರೋಳಿ ದೇವಸ್ಥಾನದ ಉಪಾಧ್ಯಕ್ಷೆ ಉರ್ಮಿಳಾ ರಮೇಶ್ ಕುಮಾರ್, ಕಾರ್ಯದರ್ಶಿ ಮಾಧವ ಸುವರ್ಣ, ಕೋಶಾಧಿಕಾರಿ ಪದ್ಮರಾಜ್ ಆರ್., ಟ್ರಸ್ಟಿ ಶೇಖರ್ ಪೂಜಾರಿ, ಉಪಮೇಯರ್‌ಪೂರ್ಣಿಮಾ, ಮನಪಾ ಮುಖ್ಯ ಸಚೇತಕ ಪ್ರೇಮಾನಂದ ಶೆಟ್ಡಿ, ಕಾರ್ಪೊರೇಟರ್‌ಗಳಾದ ಸಂದೀಪ್ ಗರೋಡಿ, ಪ್ರವೀಣ್‌ಚಂದ್ರ ಆಳ್ವ, ವೀಣಾ ಮಂಗಳ, ರೂಪಶ್ರೀ ಪೂಜಾರಿ, ಕೇಶವ ಮರೋಳಿ, ಆರ್ಥಿಕ ಸಮಿತಿಯ ಸಂಚಾಲಕ ಚಿತ್ತರಂಜನ್ ಬೋಳಾರ್, ಶರಣ್ ಪಂಪ್‌ವೆಲ್, ಕಾರ್ಪೊರೇಟರ್ ಭಾಸ್ಕರ್ ಕೆ., ಕಾರ್ಪೊರೇಟರ್ ಅನಿಲ್ ಪೂಜಾರಿ, ಬಿರುವೆರ್ ಕುಡ್ಲ ಸಂಸ್ಥಾಪಕ ಉದಯ ಪೂಜಾರಿ, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಪದ್ಮನಾಭ ಕೋಟ್ಯಾನ್, ದಿನೇಶ್ ಪಿ.ಕೆ., ಹೊರೆಕಾಣಿಕೆ ಸಮಿತಿ ಸಂಚಾಲಕರಾದ ಚಂದ್ರನಾಥ್ ಅತ್ತಾವರ್, ತೇಜಾಕ್ಷ ನಟ್ಟಿಮನೆ, ಭರತ್‌ರಾಮ್ ಗಂಗೆಮನೆ, ಪ್ರಚಾರ ಸಮಿತಿಯ ಬ್ರಿಜೇಶ್ ಗರಡಿ ಮತ್ತಿತರರು ಉಪಸ್ಥಿತರಿದ್ದರು.