

ಬೀರೂರು: ಮಹಿಳೆಯರಿಗೆ ಆರ್ಥಿಕವಾಗಿ ನೆರವು ನೀಡುತ್ತಿದ್ದ ರಾಜ್ಯ ಸರ್ಕಾರದ ಗೃಹಲಕ್ಷ್ಮೀ ಗ್ಯಾರಂಟಿಗೆ ಗರ ಬಡಿದಿದೆ. ಯೋಜನೆಯಡಿ ಪಡಿತರ ಚೀಟಿ ಮುಖ್ಯಸ್ಥ ಮಹಿಳೆಯರ ಖಾತೆಗೆ ಮಾಸಿಕ 2 ಸಾವಿರ ರೂ. ಹಾಕಲಾಗುತ್ತಿದೆ. ಆದರೆ ಮಾರ್ಚ್‌ನಲ್ಲಿ ಹಣ ಜಮಾ ಆಗದೆ ಇರುವುದರಿಂದ ಗೊಂದಲ ಉಂಟಾಗಿದೆ.
ಆಗಸ್ಟ್‌ನಲ್ಲಿ ಚಾಲ್ತಿಯಾದ ಗೃಹಲಕ್ಷ್ಮಿಯೋಜನೆಯಡಿ ಫೆಬ್ರವರಿವರೆಗೂ ಹಲವರಿಗೆ ಹಣ ಸಂದಾಯವಾದರೆ ಇನ್ನು ಕೆಲವು ಕುಟುಂಬದ ಮಹಿಳೆಗೆ ಹಣ ಸಂದಾಯವಾಗುತ್ತಿಲ್ಲ. ತಾಂತ್ರಿಕ ಸಮಸ್ಯೆಯಿಂದ ಕೆಲವರ ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆ ಆಗದೆ ಇರುವುದು ಹಾಗೂ ಎನ್‌ಪಿಸಿಐ (ನ್ಯಾಷನಲ್ ಪೇಮೆಂಟ್ ಕಾರ್ಪೋರೇಷನ್ ಆಫ್ ಇಂಡಿಯಾ) ಆಗದಿರುವ ಕಾರಣಕ್ಕೆ ಹಣ ಜಮೆಯಾಗುತ್ತಿರಲಿಲ್ಲ. ಅದಕ್ಕಾಗಿ ಮಹಿಳೆಯರಿಗೆ ಅವರ ನ್ಯಾಯಬೆಲೆ ಅಂಗಡಿಯಲ್ಲಿ ಐಪಿಪಿಬಿ ಖಾತೆ ತೆರೆದು ಆ ಖಾತೆಗೆ ಹಣ ಜಮೆ ಮಾಡಲಾಯಿತು. ಆದರೆ ಕುಟುಂಬ ನಿರ್ವಹಣೆಗಾಗಿ ಆ ಹಣವನ್ನೇ ನಂಬಿದ ಮಹಿಳೆಯರಿಗೆ ಮಾರ್ಚ್‌ನಲ್ಲಿ ಬರಬೇಕಾದ ಹಣ ಇನ್ನೂ ಬರದಿದ್ದಕ್ಕೆ ಬ್ಯಾಂಕ್ ಹಾಗೂ ಅಂಚೆ ಕಚೇರಿಗೆ ಅಲೆದಾಡುವಂತಾಗಿದೆ. ಬರ ಆವರಿಸಿರುವ ಸಂದರ್ಭದಲ್ಲಿ ಕುಟುಂಬಕ್ಕೆ ಆಸರೆಯಾಗಿದ್ದ ಗೃಹಲಕ್ಷ್ಮಿ ಯೋಜನೆಯ ಹಣ ಸಂದಾಯವಾಗದಿರುವುದು ಜನರಿಗೆ ಗಾಯದ ಮೇಲೆ ಉಪ್ಪು ಸವರಿದಂತಾಗಿದೆ.
ಬ್ಯಾಂಕ್ ಅಥವಾ ಅಂಚೆ ಕಚೇರಿ ಅಧಿಕಾರಿಗಳು ಖಾತೆ ಪರಿಶೀಲಿಸಿ ತಿಳಿಸಿ ಹೆಚ್ಚಿನ ಮಾಹಿತಿಗೆ ಕಂಪ್ಯೂಟರ್ ಕೇಂದ್ರಗಳು, ಗ್ರಾಮ ಒನ್, ಕರ್ನಾಟಕ ಒನ್‌ನಂಥ ನಾಗರಿಕ ಸೇವಾ ಕೇಂದ್ರಗಳಲ್ಲಿ ವಿಚಾರಿಸುವಂತೆ ಮಾರ್ಗದರ್ಶನ ನೀಡುತ್ತಿದ್ದಾರೆ. ಕಂಪ್ಯೂಟರ್ ಕೇಂದ್ರದವರು ಸಿಡಿಪಿಒ ಕಚೇರಿಗೆ ಭೇಟಿ ನೀಡುವಂತೆ ಸಲಹೆ ನೀಡುತ್ತಿದ್ದಾರೆ. ಅದನ್ನು ನಂಬಿದ ಮಹಿಳೆಯರು ಬ್ಯಾಂಕ್, ಅಂಚೆ ಕಚೇರಿ ಮತ್ತು ಸಿಡಿಪಿಒ ಕಚೇರಿಗೆ ಸುತ್ತುತ್ತಿದ್ದಾರೆ. ಕಂಪ್ಯೂಟರ್ ಕೇಂದ್ರಕ್ಕೆ ಭೇಟಿ ನೀಡಿ ಪಡಿತರ ಚೀಟಿ ಹಾಗೂ ಗೃಹಲಕ್ಷ್ಮಿ ಮಂಜೂರಾತಿ ಪತ್ರದ ಸ್ಥಿತಿ ಪರಿಶೀಲಿಸಿದಾಗ ಡಿಡಿಒಯಿಂದ ತಿರಸ್ಕೃತವಾಗಿದೆ ಎಂದು ಬಿಂಬಿತವಾಗುತ್ತಿದೆ. ಅಂದರೆ ಬಹಳಷ್ಟು ಫಲಾನುಭವಿಗಳ ಮಂಜೂರಾತಿ ತಿರಸ್ಕೃತಗೊಂಡಿದೆ.
ಒಟ್ಟಾರೆ ಮಳೆಯಿಲ್ಲದೆ ಬರ ಆವರಿಸಿರುವ ನಾಡಿಗೆ ಆಸರೆಯಾಗಿದ್ದ ಗೃಹಲಕ್ಷ್ಮಿಯೋಜನೆಯ ಫಲಾನುಭವಿಗಳಿಗೆ ಕುಟುಂಬ ನಿರ್ವಹಣೆಗೋ ಅಥವಾ ಅನಾರೋಗ್ಯ ಸಮಸ್ಯೆಗೋ ಪರಿಹಾರ ಕಂಡುಕೊಳ್ಳಲು ಸಹಕಾರಿಯಾಗುತ್ತಿತ್ತು. ಇದನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ತಿರಸ್ಕೃತ ಮಾಹಿತಿ ತೆಗೆದು ಫಲಾನುಭವಿಗಳಿಗೆ ಹಣ ಸಂದಾಯ ಮಾಡಬೇಕಿದೆ.