ಅಗತ್ಯ ವಸ್ತು ಖರೀದಿಗೆ ಅಂತರ ಕಾಯ್ದುಕೊಂಡ ಜನ

coroona 27 mar 20
Published on

ಬೆಂಗಳೂರು: ಕರೊನಾ ವೈರಸ್ ಹರಡದಂತೆ ಕನಿಷ್ಠ 1 ಮೀಟರ್ ಅಥವಾ 3 ಅಡಿ ಅಂತರ ಕಾಯ್ದುಕೊಳ್ಳುವಂತೆ ಸರ್ಕಾರ ಸೂಚನೆ ನೀಡಿದೆ. ಅದರಂತೆ ಎಲ್ಲ ಮಾರ್ಟ್​ಗಳು, ಸೂಪರ್ ಮಾರ್ಕೆಟ್​ಗಳು, ದಿನಸಿ ಅಂಗಡಿಗಳು, ಔಷಧಿ ಮಳಿಗೆಗಳು, ಹಾಲು ಮಾರಾಟ ಕೇಂದ್ರಗಳು, ಆಸ್ಪತ್ರೆಗಳು ಹಾಗೂ ಹಾಪ್​ಕಾಮ್ಸ್​ಗಳ ಸೇವೆ ಪಡೆಯಲು ಸಾಮಾಜಿಕ ಅಂತರ ಕಾಯ್ದುಕೊಳ್ಳಲು 1 ಮೀಟರ್​ಗೆ ಒಂದರಂತೆ ಬಾಕ್ಸ್​ಗಳನ್ನು ರಚಿಸಲಾಗಿದೆ. ಸಾರ್ವಜನಿಕರು ಈ ಬಾಕ್ಸ್​ಗಳಲ್ಲಿ ನಿಂತು ಅಗತ್ಯ ಸಾಮಾಗ್ರಿಗಳನ್ನು ಖರೀದಿಸುತ್ತಿದ್ದಾರೆ.

ಕೆಲವು ಸೂಪರ್ ಮಾರ್ಕೆಟ್​ಗಳು, ಮಾರ್ಟ್​ಗಳಲ್ಲಿ ಹೆಚ್ಚು ಜನಸಂದಣೆ ತಡೆಯಲು ಟೋಕನ್ ವ್ಯವಸ್ಥೆ ಮಾಡಲಾಗಿದೆ. ದೊಡ್ಡ ಮಳಿಗೆಯಲ್ಲಿ ಒಂದು ಅವಧಿಗೆ 30 ಜನರಿಗೆ ಟೋಕನ್ ನೀಡಿ ಪ್ರವೇಶ ನೀಡುತ್ತಿದ್ದು, ಅವರು ಹೊರಗೆ ಬಂದ ನಂತರ ಬೇರೆಯವರನ್ನು ಒಳಗೆ ಕಳುಹಿಸಲಾಗುತ್ತಿದೆ. ಡಿ-ಮಾರ್ಟ್, ವಿಶಾಲ್ ಮಾರ್ಟ್, ರಿಲಯನ್ಸ್ ಮಾರ್ಟ್ ಹಾಗೂ ಸೂಪರ್ ಮಾರ್ಕೆಟ್​ಗಳಿಗೆ ಆಗಮಿಸುವ ಗ್ರಾಹಕರಿಗೆ ಥರ್ಮಲ್ ಸ್ಕ್ರೀನಿಂಗ್ ಮಾಡಲಾಗುತ್ತಿದೆ.

ಜ್ವರ, ಕೆಮ್ಮು ಇದ್ದರೆ ವಾಪಸ್: ಮಾರ್ಟ್​ಗಳು ಹಾಗೂ ದಿನಸಿ ಅಂಗಡಿಗಳಿಗೆ ಅಗತ್ಯ ಸಾಮಾಗ್ರಿಗಳ ಖರೀದಿಗೆ ಬರುವ ಗ್ರಾಹಕರಲ್ಲಿ ಕೆಮ್ಮು, ಜ್ವರ, ಸೀನುವ ಲಕ್ಷಣಗಳು ಕಂಡುಬಂದರೆ ವಾಪಸ್ ಕಳಿಸಲಾಗುತ್ತಿದೆ. ಕೆಲವೆಡೆ ಅವರನ್ನು ಪ್ರತ್ಯೇಕವಾಗಿ ನಿಲ್ಲಿಸಿ ಖರೀದಿಗೆ ಅವಕಾಶ ನೀಡಲಾಗುತ್ತಿದೆ. ಇನ್ನು ಕೆಲವೆಡೆ ನೈರ್ಮಲ್ಯಕಾರಕ ವಿತರಣೆ ಮಾಡಿದರೆ, ಮಾಸ್ಕ್ ಧರಿಸಿ ಬರುವಂತೆ ಸೂಚನೆ ನೀಡಲಾಗುತ್ತಿದೆ.

ಹೆಚ್ಚುವರಿ ಅವಧಿ ಸೇವೆಗೆ ಸಲಹೆ

ಅಗತ್ಯ ಸೇವೆಗಳನ್ನು ನೀಡುತ್ತಿರುವ ಕೆಲವು ಮಳಿಗೆಗಳಲ್ಲಿ ಜನಸಂದಣಿ ಮತ್ತು ಸರತಿ ಸಾಲು ಹೆಚ್ಚಾಗುತ್ತಿದೆ. ಇದರಿಂದ ಕರೊನಾ ಹರಡುವ ಭೀತಿಯಿದೆ. ಹಾಗಾಗಿ ಮಾರ್ಟ್​ಗಳು, ಸೂಪರ್ ಮಾರ್ಕೆಟ್​ಗಳು, ದಿನಸಿ ಅಂಗಡಿಗಳು, ಔಷಧ ಮಳಿಗೆಗಳು ದಿನದ 24 ಗಂಟೆಗಳ ಸೇವೆ ನೀಡಬೇಕು ಎಂದು ಡಿಜಿಪಿ ಪ್ರವೀಣ್ ಸೂದ್ ತಮ್ಮ ಟ್ವಿಟರ್​ನಲ್ಲಿ ಸಲಹೆ ನೀಡಿದ್ದಾರೆ. ಅವರ ಸಲಹೆಯಂತೆ ಪ್ರತಿನಿತ್ಯ ಹೆಚ್ಚುವರಿ ಸೇವೆ ನೀಡಿದಲ್ಲಿ ಜನಸಂದಣಿ ಆಗುವುದನ್ನು ತಪ್ಪಿಸಬಹುದಾಗಿದೆ.

ಹೋಮ್ ಡೆಲಿವರಿಗೆ ಅವಕಾಶ

ನಗರದಲ್ಲಿ ಆನ್​ಲೈನ್ ಮೂಲಕ ಆರ್ಡರ್ ಮಾಡಿದರೆ ಮನೆ ಬಾಗಿಲಿಗೆ ಸೇವೆ ಒದಗಿಸುವ ಹಲವು ಸಂಸ್ಥೆಗಳು ಕಾರ್ಯ ನಿರ್ವಹಿಸುತ್ತಿವೆ. ನೀರು, ಹಾಲು, ಆಹಾರ, ದಿನಸಿ ಸಾಮಗ್ರಿ, ಔಷಧಗಳು ಹಾಗು ಗೃಹಬಳಕೆ ಪರಿಕರಗಳನ್ನು ಆನ್​ಲೈನ್ ಮೂಲಕ ಖರೀದಿಸುವವರಿಗೆ ಆಯಾ ಕಂಪನಿಗಳ ನೌಕರರು ಹೋಂ ಡೆಲಿವರಿ ಕೊಡಲು ಪೊಲೀಸ್ ಇಲಾಖೆ ಅವಕಾಶ ನೀಡಿದೆ. ಆನ್​ಲೈನ್ ಮಾರಾಟವನ್ನು ಅಗತ್ಯ ಸೇವೆಯೆಂದು ಪರಿಗಣಿಸಿರುವ ಪೊಲೀಸ್ ಕಮಿಷನರ್ ಭಾಸ್ಕರ್​ರಾವ್, ಆನ್​ಲೈನ್ ಡೆಲಿವರಿ ಮಾಡುವವರನ್ನು ತಡೆಯಬಾರದು ಎಂದು ಸುತ್ತೋಲೆ ಹೊರಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net