

ನರಗುಂದ: ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಅಬಕಾರಿ ಇಲಾಖೆ ಅಧಿಕಾರಿಗಳು ತಾಲೂಕಿನ ಹದ್ಲಿ ಕ್ರಾಸ್ನಲ್ಲಿ ಶುಕ್ರವಾರ ಬಂಧಿಸಿದ್ದಾರೆ.
ಹದ್ಲಿ ಗ್ರಾಮದ ದಾವಲಸಾಬ ನರಗುಂದ ಬಂಧಿತ ಆರೋಪಿ. ಬಂಧಿತನಿಂದ 5400 ರೂಪಾಯಿ ಮೌಲ್ಯದ 131 ಗ್ರಾಂ ಗಾಂಜಾ ಹಾಗೂ 20 ಸಾವಿರ ರೂಪಾಯಿ ಮೌಲ್ಯದ ಟಿವಿಎಸ್ ಎಕ್ಸೆಲ್ ವಶಪಡಿಸಿಕೊಳ್ಳಲಾಗಿದೆ. ಕಳೆದ ಕೆಲ ದಿನಗಳಿಂದ ದಾವಲಸಾಬ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ. ಎಂದಿನಂತೆ ಶುಕ್ರವಾರ ಸಣ್ಣಸಣ್ಣ ಪ್ಯಾಕೆಟ್ ಮಾಡಿ ಗಾಂಜಾವನ್ನು ಹದ್ಲಿ ಕ್ರಾಸ್ನಲ್ಲಿ ಪರಿಚಯಸ್ಥರಿಗೆ ಮಾರಾಟ ಮಾಡುತ್ತಿದ್ದ. ಈ ಬಗ್ಗೆ ಜಿಲ್ಲಾ ಅಬಕಾರಿ ಡಿಸಿ ಲಕ್ಷ್ಮೀನಾಯಕ ಅವರಿಗೆ ಸ್ಥಳೀಯರು ಮಾಹಿತಿ ನೀಡಿದರ ಮೇರೆಗೆ ದಾಳಿ ನಡೆಸಲಾಗಿತ್ತು.
ದಾಳಿಯಲ್ಲಿ ನರಗುಂದದ ಅಬಕಾರಿ ನಿರೀಕ್ಷಕ ಬಸವರಾಜ ಜಾಮಗೊಂಡ ಹಾಗೂ ಸಿಬ್ಬಂದಿ ಇದ್ದರು. ಬಂಧಿತ ಆರೋಪಿ ಮೇಲೆ ಈಗಾಗಲೇ ಮೂರು ಪ್ರಕರಣಗಳು ದಾಖಲಾಗಿವೆ.