ಗಾಂಜಾ ಪೆಡ್ಲರ್​ ಕಾಲಿಗೆ ಗುಂಡೇಟು

pedler
Published on

ಹೊಸಕೋಟೆ ಪೊಲೀಸರ ಕಾರ್ಯಾಚರಣೆ > ಖಾಕಿ ಮೇಲೆ ಹಲ್ಲೆಗೆ ಯತ್ನಿಸಿದ ಆರೋಪಿ

ಹೊಸಕೋಟೆ: ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಮತ್ತೊಮ್ಮೆ ಪೊಲೀಸರ ಗುಂಡು ಸದ್ದು ಮಾಡಿದೆ, ಕಳೆದೊಂದು ತಿಂಗಳ ಹಿಂದೆ ದೊಡ್ಡಬಳ್ಳಾಪುರದಲ್ಲಿ ಕೊಲೆ ಪ್ರಕರಣವೊಂದರಲ್ಲಿ ರೌಡಿಶೀಟರ್​ ಮೇಲೆ ಗುಂಡು ಹಾರಿಸಿ ಬಂಧಿಸಲಾಗಿತ್ತು ಇದರ ಬೆನ್ನಲ್ಲೇ ಹೊಸಕೋಟೆಯಲ್ಲಿ ಕುಖ್ಯಾತ ಪೆಡ್ಲರ್​ ಕಾಲಿಗೆ ಪೊಲೀಸರು ಗುಂಡು ಹಾರಿಸಿದ್ದಾರೆ.


ಬೈಕ್​ಗಳ ಕಳವು, ರಾಬರಿ ಸೇರಿ ಮಾದಕ ವಸ್ತುಗಳ ದಂಧೆಯಲ್ಲಿ ತೊಡಗಿದ್ದ ಸೈಯದ್​ ಸುಹೇಲ್​ (32) ಬಂಧಿತ. ಗಾಯಾಳುವನ್ನು ಚಿಕಿತ್ಸೆಗಾಗಿ ಹೊಸಕೋಟೆಯ ಎಂವಿಜೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲೆಗಳಲ್ಲಿ ಕಾನೂನುಬಾಹಿರ ಚಟುವಟಿಕೆ ನಡೆಸುತ್ತಿದ್ದ ಸೈಯದ್​ ಸುಹೇಲ್​ನನ್ನು ಹೊಸಕೋಟೆಯ ಅಮಾನಿ ದೊಡ್ಡಕೆರೆ ಸಮೀಪ ಬಂಧಿಸಲಾಗಿದೆ.


ಲಾಂಗ್​ನಿಂದ ಹಲ್ಲೆಗೆ ಯತ್ನ: ಹೊಸಕೋಟೆ ನಗರ ಹೊರವಲಯದ ಸುಂಕ ವಸೂಲಾತಿ ಕೇಂದ್ರ ಬಳಿ ಕಾಣಿಸಿಕೊಂಡ ಸೈಯದ್​ನನ್ನು ಬಂಧಿಸಲು ಯತ್ನಿಸಿದ ಪೊಲೀಸರ ಮೇಲೆ ಲಾಂಗ್​ ಬೀಸಿದ ಆರೋಪಿ ಅಮಾನಿಕೆರೆ ಪಕ್ಕದಲ್ಲಿನ ಜಮೀನಿನ ಮೂಲಕ ಓಡಿ ತಪ್ಪಿಸಿಕೊಳ್ಳಲು ಯತ್ನಿಸಿದ್ದ. ಆರೋಪಿಯನ್ನು ಸುತ್ತುವರಿದ ಪೊಲೀಸರು ಶರಣಾಗುವಂತೆ ಸೂಚನೆ ನೀಡಿದರು. ಈ ವೇಳೆ ಲಾಂಗ್​ನಿಂದ ಪೊಲೀಸರ ಮೇಲೆ ಹಲ್ಲೆಗೆ ಮುಂದಾಗಿದ್ದರಿಂದ ಸಿಬ್ಬಂದಿ ಪ್ರಾಣರಕ್ಷಣೆಗಾಗಿ ಇನ್​ಸ್ಪೆಕ್ಟರ್​ ಅಶೋಕ್​ ಅವರು ಆರೋಪಿ ಕಾಲಿಗೆ ಗುಂಡು ಹಾರಿಸಿದ್ದಾರೆ. ಗುಂಡೇಟಿನಿಂದ ಸ್ಥಳದಲ್ಲೇ ಕುಸಿದು ಬಿದ್ದ ಸೈಯದ್​ನನ್ನು ವಶಕ್ಕೆ ಪಡೆದ ಪೊಲೀಸರು ಪ್ರಾಥಮಿಕ ಚಿಕಿತ್ಸೆಗಾಗಿ ಹೊಸಕೋಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದರು.

ಸರಗಳ್ಳರ ಬೇಟೆ ವೇಳೆ ಸಿಕ್ಕಿಬಿದ್ದ
ಹೊಸಕೋಟೆ ಸೇರಿ ಜಿಲ್ಲೆಯ ಹಲವು ಕಡೆಗಳಲ್ಲಿ ಇತ್ತೀಚಿನ ದಿನಗಳಲ್ಲಿ ಸರಗಳವು ಪ್ರಕರಣ ಹೆಚ್ಚಿರುವುದರಿಂದ ಜಿಲ್ಲೆಯಾದ್ಯಂತ ಪೊಲೀಸ್​ ಗಸ್ತು ಹೆಚ್ಚಿಸಲಾಗಿದೆ. ಸರಗಳ್ಳರನ್ನು ಹಿಡಿಯಲು ಹುಟುಕಾಟ ನಡೆಸಿದ್ದ ವೇಳೆ ಕುಖ್ಯಾತ ಪೆಡ್ಲರ್​ ಸೈಯದ್​ ಪೊಲೀಸರ ಕಣ್ಣಿಗೆ ಬಿದ್ದಿದ್ದ. ತಕ್ಷಣ ಅರ್ಲಟ್​ ಆದ ಪೊಲೀಸರು ಆರೋಪಿಯ ಬೆನ್ನುಬಿದ್ದಿದ್ದರು. ಇದನ್ನು ಗಮನಿಸಿದ ಸೈಯದ್​ ತಪ್ಪಿಸಿಕೊಳ್ಳಲು ಹರಸಾಹಸ ನಡೆಸಿದ್ದ ಎನ್ನಲಾಗಿದೆ.

15 ದಿನದ ಹಿಂದೆ ಪರಾರಿಯಾಗಿದ್ದ
ಆರೋಪಿ ಸೈಯದ್​ ಸುಹೇಲ್​ 15 ದಿನದ ಹಿಂದಷ್ಟೇ ಮಾದಕ ವಸ್ತು ಮಾರಾಟದ ಆರೋಪದ ಮೇಲೆ ಬಂಧಿಸಲು ಮುಂದಾಗಿದ್ದ ಯಲಹಂಕ ಠಾಣೆ ಇನ್​ಸ್ಪೆಕ್ಟರ್​ ಮಹೇಶ್​ ಮೇಲೆ ಹಲ್ಲೆಗೆ ಯತ್ನಿಸಿ ಪರಾರಿಯಾಗಿದ್ದ ಎನ್ನಲಾಗಿದೆ. ಈತನ ವಿರುದ್ಧ ಗಾಂಜಾ ಮತ್ತು ಮಾದಕವಸ್ತು ಮಾರಾಟದ ಆರೋಪದ ಮೇಲೆ ಎನ್​ಡಿಪಿಎಸ್​ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಇದರೊಂದಿಗೆ ಹೊಸಕೋಟೆಯ ವೈದೇಹಿ ಮೆಡಿಕಲ್​ ಕಾಲೇಜು ಹಾಗೂ ಬೆಂಗಳೂರಿನ ಪ್ರತಿಷ್ಠಿತ ಕಾಲೇಜುಗಳ ಬಳಿ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿ ಬೆದರಿಸಿ ಅವರ ದ್ವಿಚಕ್ರ ವಾಹನಗಳನ್ನು ರಾಬರಿ ಮಾಡುತ್ತಿದ್ದ. ಈ ಆರೋಪದ ಮೇಲೆ ಈ ಹಿಂದೆಯೇ ಈತನನ್ನು ಬಂಧಿಸಿ ಬೈಕ್​ಗಳನ್ನು ಜಪ್ತಿ ಮಾಡಲಾಗಿತ್ತು. ಜೈಲಿಗೆ ಹೋಗಿದ್ದ ಈತ ಮರಳಿ ಬಂದು ಕೃತ್ಯ ಮುಂದುವರಿಸಿದ್ದ ಎನ್ನಲಾಗಿದೆ.

ಆರೋಪಿ ಸೈಯದ್​ ಗಾಂಜಾ ಸೇರಿ ಇನ್ನಿತರ ಮಾದಕವಸ್ತುಗಳ ಮಾರಾಟ ಮಾಡುತ್ತಿದ್ದ. ಈತನ ಬಂಧನಕ್ಕೆ ಬಲೆ ಬೀಸಲಾಗಿತ್ತು. ಹಲವು ಬಾರಿ ಕಡೇ ಕ್ಷಣದಲ್ಲಿ ಪೊಲೀಸರ ಬಲೆಯಿಂದ ತಪ್ಪಿಸಿಕೊಂಡಿದ್ದ. ಸುಂಕ ವಸೂಲಾತಿ ಕೇಂದ್ರದ ಬಳಿ ಗಸ್ತಿನಲ್ಲಿದ್ದ ಪೊಲೀಸರ ಕಣ್ಣಿಗೆ ಬಿದ್ದಿದ್ದ. ಆತನ ಬಂಧನಕ್ಕೆ ಮುಂದಾದ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ್ದರಿಂದ ಪ್ರಾಣ ರಕ್ಷಣೆಗಾಗಿ ಗುಂಡು ಹಾರಿಸಿ ಬಂಧಿಸಲಾಗಿದೆ.

| ನಾಗರಾಜ್​ ಹೆಚ್ಚುವರಿ ಪೊಲೀಸ್​ ವರಿಷ್ಠಾಧಿಕಾರಿ

ಶರಣಾಗುವಂತೆ ಅನೇಕ ಬಾರಿ ಸೂಚನೆ ನೀಡಿದರೂ ಆರೋಪಿ ಪ್ರತಿರೋಧವೊಡ್ಡಿದ್ದ, ಒಂದು ಬಾರಿ ಆಕಾಶಕ್ಕೆ ಗುಂಡುಹಾರಿಸಿ ಎಚ್ಚರಿಕೆ ನೀಡಿದರೂ ಬಗ್ಗದ ಸೈಯದ್​ ಪೊಲೀಸರ ಮೇಲೆಯೇ ಲಾಂಗ್​ನಿಂದ ಹಲ್ಲೆಗೆ ಮುಂದಾಗಿದ್ದ. ಈ ಹಿನ್ನೆಲೆಯಲ್ಲಿ ಗುಂಡು ಹಾರಿಸಿ ಬಂಧಿಲಾಗಿದೆ. ಈತನ ಮೇಲೆ ಹಲವು ಪ್ರಕರಣಗಳಿವೆ.
| ಅಶೋಕ್​, ಇನ್​ಸ್ಪೆಕ್ಟರ್​ ಹೊಸಕೋಟೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net