

ಬೆಂಗಳೂರು: ತಿರುಪತಿಯಿಂದ ಗಾಂಜಾ ತಂದು ನಗರದಲ್ಲಿ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ರಾಜಗೋಪಾಲನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಚಿಕ್ಕಬಳ್ಳಾಪುರ ಮೂಲದ ಶಿವಕುಮಾರ್ (27) ಬಂಧಿತ. ಆರೋಪಿಯಿಂದ 50 ಲಕ್ಷ ರೂ. ಮೌಲ್ಯದ 110 ಕೆ.ಜಿ. ಗಾಂಜಾ, ದ್ವಿಚಕ್ರ ವಾಹನ, 3 ಸಾವಿರ ರೂ. ನಗದು ಜಪ್ತಿ ಮಾಡಲಾಗಿದೆ ಎಂದು ಡಿಸಿಪಿ ಧರ್ಮೇಂದರ್ ಕುಮಾರ್ ಮೀನಾ ತಿಳಿಸಿದ್ದಾರೆ.
ಆರೋಪಿಯು ಬುಧವಾರ ಸಂಜೆ 6 ಗಂಟೆಯಲ್ಲಿ ಪೀಣ್ಯ 2ನೇ ಹಂತದ ಜಿ.ಕೆ.ಡಬ್ಲೂೃ ಲೇಔಟ್‌ನಲ್ಲಿ ಗಾಂಜಾ ಮಾರುತ್ತಿದ್ದ. ಈ ಬಗ್ಗೆ ಮಾಹಿತಿ ಆಧರಿಸಿ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು. 17 ಕೆ.ಜಿ. ಗಾಂಜಾ ಹಾಗೂ ದ್ವಿಚಕ್ರ ವಾಹನ ಸಮೇತ ಆರೋಪಿ ಶಿವಕುಮಾರ್‌ನನ್ನು ಬಂಧಿಸಲಾಗಿತ್ತು. ಮನೆಯಲ್ಲಿ ಗಾಂಜಾ ಸಂಗ್ರಹಿಸಿರುವುದಾಗಿ ವಿಚಾರಣೆಯಿಂದ ಗೊತ್ತಾಗಿತ್ತು. ಚಿಕ್ಕಬಳ್ಳಾಪುರದ ಮನೆ ಮೇಲೆ ದಾಳಿ ನಡೆಸಿ 93 ಕೆ.ಜಿ. ಗಾಂಜಾ ಜಪ್ತಿ ಮಾಡಲಾಗಿದೆ.
ಆರೋಪಿಯು ಲಾರಿ ಚಾಲಕನಾಗಿದ್ದು, ಹೈದರಾಬಾದ್, ತಿರುಪತಿ, ವಿಶಾಖಪಟ್ಟಣ, ವಿಜಯವಾಡ ಮಾರುಕಟ್ಟೆಗಳಿಗೆ ತರಕಾರಿ ತೆಗೆದುಕೊಂಡು ಹೋಗುತ್ತಿದ್ದ. ಇದೇ ವೇಳೆ ತಿರುಪತಿಯಲ್ಲಿ ಗಾಂಜಾ ಸರಬರಾಜು ಮಾಡುತ್ತಿದ್ದ ವ್ಯಕ್ತಿಯೊಬ್ಬನ ಪರಿಚಯವಾಗಿತ್ತು. ಗಾಂಜಾಕ್ಕೆ ಹೆಚ್ಚಿನ ಬೇಡಿಕೆ ಇದೆ. ಮಾರಾಟ ಮಾಡಿದರೆ ಹೆಚ್ಚಿನ ಹಣ ಸಂಪಾದಿಸಬಹುದು ಎಂಬುದನ್ನು ಆತನಿಂದ ತಿಳಿದುಕೊಂಡಿದ್ದ. ತಿರುಪತಿಗೆ ತರಕಾರಿ ತೆಗೆದುಕೊಂಡು ಹೋದಾಗ, ಆತನಿಂದ ಕಡಿಮೆ ಬೆಲೆಗೆ ಗಾಂಜಾ ಖರೀದಿಸಿ ತರುತ್ತಿದ್ದ. ಅದನ್ನು ನಗರಕ್ಕೆ ತಂದು ಪರಿಚಯಸ್ಥ ಗ್ರಾಹಕರಿಗೆ ಮಾರಾಟ ಮಾಡಿ ಹೋಗುತ್ತಿದ್ದ ಎಂಬುದು ಆರೋಪಿಯ ವಿಚಾರಣೆಯಿಂದ ಗೊತ್ತಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.