

ವಿಜಯವಾಣಿ ವಿಶೇಷ ಮೈಸೂರು
ನಗರದ ಅನೇಕ ಸ್ಥಳಗಳು ಗಾಂಜಾ ಸೇವನೆಯ ತಾಣಗಳಾಗಿಬಿಟ್ಟಿವೆ. ರಿಂಗ್ ರಸ್ತೆಯ ಸುತ್ತಮುತ್ತ, ಚಾಮುಂಡಿ ಬೆಟ್ಟದ ತಪ್ಪಲು, ಲಿಂಗಾಂಬುಧಿ ಕೆರೆ, ಹೆಬ್ಬಾಳು ಕೆರೆ ಸೇರಿದಂತೆ ಹೊರ ವಲಯದ ಖಾಸಗಿ ಬಡಾವಣೆಗಳ ರಸ್ತೆಗಳು ಮದ್ಯ ಮತ್ತು ಗಾಂಜಾ ಸೇವನೆಯ ತಾಣಗಳಾಗಿದ್ದು, 2019ರಲ್ಲಿ ಲಿಂಗಾಂಬುಧಿ ಕೆರೆಯ ಸಮೀಪ ಯುವತಿ ಮೇಲೆ ನಡೆದಿದ್ದ ಸಾಮೂಹಿಕ ದೌರ್ಜನ್ಯ ಪ್ರಕರಣದ ಆರೋಪಿಗಳ ಪೈಕಿ ಒಬ್ಬಾತ ಗಾಂಜಾ ಸೇವಿಸಿಯೇ ಈ ಕೃತ್ಯ ಎಸಗಿದ್ದ.
ಖಾಟ್ ಘಾಟು: ಗಾಂಜಾಕ್ಕಿಂತಲೂ ಹೆಚ್ಚು ಮೌಲ್ಯದ ಖಾಟ್ ಎಂಬ ಮಾದಕ ವಸ್ತು ಕೂಡ ಮೈಸೂರಿನಲ್ಲಿ ಸದ್ದಿಲ್ಲದೆ ಮಾರಾಟವಾಗುತ್ತಿದೆ. ಕೊರಿಯಾ ಮೂಲಕ ಮದ್ಯವ್ಯಸನಿಗಳ ಮನೆ ಬಾಗಿಲಿಗೆ ತಲುಪುತ್ತಿದೆ. ಐದು ವರ್ಷದ ಹಿಂದೆ ವಿದ್ಯಾರ್ಥಿ ವಿಸಾದಡಿ ಯೆಮನ್ ದೇಶದಿಂದ ಇಲ್ಲಿಗೆ ಬಂದು ನೆಲೆಸಿದ್ದ ಹಮ್ಜಾ ಅಬ್ದೊ ಖಾಸಿಂ ಅಬ್ದುಲ್ಲಾನಿಂದ ವಶಪಡಿಸಿಕೊಂಡು ಬಂಧಿಸಲಾಗಿತ್ತು. ಆಗ ಆತನಿಂದ 7 ಕೆ.ಜಿ.ಯಷ್ಟು ತೂಕದ ಖಾಟ್‌ಅನ್ನು ಪೊಲೀಸರು ವಶಕ್ಕೆ ಪಡೆದಿದ್ದರು.
ಮೈಸೂರು ನಗರದ ಸೂಕ್ಷ್ಮ ಪ್ರದೇಶಗಳಲ್ಲಿ ಗಾಂಜಾ ಮಾರಾಟ ನಡೆಯಲಿದೆ ಎಂಬುದನ್ನು ಗಮನಿಸಿರುವ ಪೊಲೀಸರು, ಅಂತಹ ಪ್ರದೇಶಗಳ ಮೇಲೆ ಹದ್ದಿನ ಕಣ್ಣಿಟ್ಟಿದ್ದಾರೆ. ಜಿಲ್ಲೆಯ ಕೆಲವು ಕಡೆ ಕೃಷಿ ಜಮೀನು ಖರೀದಿ ಮಾಡಿ ಶುಂಠಿ ಬೆಳೆಯುವವರು, ಬೆಳೆಯ ನಡುವೆ ಗಾಂಜಾ ಬೆಳೆಯುವುದು ಸಾಮಾನ್ಯವಾಗಿದೆ. ಅಲ್ಲಿಂದ ನಗರಕ್ಕೆ ಗಾಂಜಾ ಪೂರೈಕೆಯಾಗುತ್ತದೆ ಎನ್ನಲಾಗಿದೆ. ಮೈಸೂರು ನಗರದಲ್ಲಿ ಮಾದಕ ವಸ್ತು ಮಾರಾಟ ತಡೆ ಸಂಬಂಧ ಎಲ್ಲೆಡೆ ನಿಗಾ ವಹಿಸಲಾಗಿದೆ. ಗಾಂಜಾ ಹೊರತುಪಡಿಸಿ ಬೇರೆ ಯಾವುದೇ ಮಾದರಿಯ ಮಾದಕ ವಸ್ತು ಸಿಕ್ಕಿರುವ ಬಗ್ಗೆ ವರದಿಯಾಗಿಲ್ಲ. ಸಾರ್ವಜನಿಕರು ಎಲ್ಲಿಯಾದರೂ ಮಾದಕ ವಸ್ತು ಮಾರಾಟವಾಗುತ್ತಿದೆ ಎಂಬುದರ ಬಗ್ಗೆ ಮಾಹಿತಿ ನೀಡಿದರೆ ಕಾರ್ಯಾಚರಣೆ ನಡೆಸಲಾಗುವುದು ಎನ್ನುತ್ತಾರೆ ಪೊಲೀಸ್ ಅಧಿಕಾರಿಯೊಬ್ಬರು.
ಗಾಂಜಾ ಮಾರಾಟದಂತಹ ಪ್ರಕರಣಗಳನ್ನು ತಡೆಯಲು ‘ಆರ್ಥಿಕ ಮತ್ತು ಮಾದಕದ್ರವ್ಯ ಅಪರಾಧ ಪೊಲೀಸ್ ಠಾಣೆ’ ಎಂಬ ಪ್ರತ್ಯೇಕ ಠಾಣೆಯನ್ನೇ ತೆರೆಯಲಾಗಿದ್ದು, ಮಾದಕ ವಸ್ತುಗಳ ಮಾರಾಟ ಜಾಲದ ಕುರಿತು ಹದ್ದಿನ ಕಣ್ಣಿಡಲಾಗಿದೆ.
ಮೈಸೂರು ಕೇಂದ್ರ ಕಾರಾಗೃಹದಲ್ಲಿ ನಿತ್ಯ ಗಾಂಜಾ ಸುರಿಮಳೆಯೇ ಆಗುತ್ತಿತ್ತು. ಜೈಲಿನಲ್ಲಿದ್ದ ಕೈದಿಗಳಿಗೆ ಗಾಂಜಾ ಪೂರೈಕೆ ಮಾಡಲು ಅವರ ಸ್ನೇಹಿತರು, ಕಾರಾಗೃಹ ಹಿಂಭಾಗದಿಂದ ಕಲ್ಲಿನೊಂದಿಗೆ ಗಾಂಜಾ ಪೊಟ್ಟಣವನ್ನು ಕಟ್ಟಿ ಜೈಲಿನೊಳಗೆ ಎಸೆಯುತ್ತಿದ್ದರು. ಇದರಿಂದ ಜೈಲಿನಲ್ಲಿ ಕೈದಿಗಳಿಗೆ ಗಾಂಜಾ ಸುಲಭವಾಗಿ ಸಿಗುವಂತೆ ಆಗಿತ್ತು. ಇದನ್ನು ಮನಗಂಡ ಕಾರಾಗೃಹ ಮುಖ್ಯ ಅಧೀಕ್ಷಕರು, ನಗರ ಪೊಲೀಸ್ ಆಯುಕ್ತರಿಗೆ ಪತ್ರ ಬರೆದು ಜೈಲಿನ ಸುತ್ತ ಗಸ್ತು ವ್ಯವಸ್ಥೆ ಮಾಡುವಂತೆ ಮನವಿ ಮಾಡಿದ್ದರು.
ಮೈಸೂರು ನಗರದಲ್ಲಿ ಗಾಂಜಾ ಸೇರಿದಂತೆ ಇನ್ನಿತರ ಮಾದಕ ವಸ್ತುಗಳ ಮಾರಾಟ ಮತ್ತು ಸಾಗಣೆ ಮೇಲೆ ತೀವ್ರ ನಿಗಾ ವಹಿಸಲಾಗಿದ್ದು, ಕಟ್ಟುನಿಟ್ಟಿನ ತಪಾಸಣೆಯಿಂದ ಹೆಚ್ಚು ಗಾಂಜಾ ವಶಪಡಿಸಿಕೊಳ್ಳಲಾಗಿದೆ.ಎಸ್.ಜಾಹ್ನವಿ ಡಿಸಿಪಿ, ಅಪರಾಧ ಮತ್ತು ಸಂಚಾರ ವಿಭಾಗ