

ತರೀಕೆರೆ: ಅರೆ ಮಲೆನಾಡಿನಲ್ಲಿ ವ್ಯಾಪಿಸಿರುವ ಗಾಂಜಾ ಸೇವನೆ ಮತ್ತು ಮಾರಾಟ ದಂಧೆ ವ್ಯಸನಿಗಳ ಬದುಕು ಸುಡುವ ಜತೆಗೆ ಮಕ್ಕಳ ಉಜ್ವಲ ಭವಿಷ್ಯದ ಬಗ್ಗೆ ಹಗಲು ಕನಸು ಕಾಣುತ್ತಿರುವ ಪಾಲಕರ ಆಸೆಯನ್ನು ನುಚ್ಚುನೂರು ಮಾಡುತ್ತಿದೆ.
ಲಕ್ಕವಳ್ಳಿ, ರಂಗೇನಹಳ್ಳಿ, ಬೇಲೇನಹಳ್ಳಿ ತಾಂಡ ಸಮೀಪದ ನವಗ್ರಾಮ, ಪಿರಮೇನಹಳ್ಳಿ ಇನ್ನಿತರ ಗ್ರಾಮ ಸೇರಿ ಪಟ್ಟಣದ ಕೋಡಿಕ್ಯಾಂಪ್ ಮತ್ತಿತರ ಬಡಾವಣೆಗಳಲ್ಲಿ ಗಾಂಜಾ ವ್ಯಸನಿಗಳ ಹಾವಳಿ ಹೆಚ್ಚುತ್ತಿದೆ. 18ರಿಂದ 23 ವರ್ಷದೊಳಗಿನ ಯವಕರೇ ಹೆಚ್ಚು ಈ ದುಶ್ಚಟದ ದಾಸರಾಗುತ್ತಿದ್ದಾರೆ. ಸಾಗರ, ಕೋಲಾರದ ಮಾಲೂರು, ಕನಕಪುರ, ಶಿವಮೊಗ್ಗ, ಭದ್ರಾವತಿ ಕಡೆಯಿಂದ ತಾಲೂಕಿಗೆ ಬರುತ್ತಿರುವ ಹದಗೊಳಿಸಿದ ಗಾಂಜಾ ಸೊಪ್ಪು 50 ಗ್ರಾಂಗೆ ಎರಡರಿಂದ ಎರಡೂವರೆ ಸಾವಿರ ರೂ.ವರೆಗೆ ಮಾರಾಟವಾಗುತ್ತಿದೆ. ಕಾಲೇಜು, ವಿದ್ಯಾರ್ಥಿಗಳು ಹೇಗಾದರೂ ಹಣ ಹೊಂದಿಸಿ ನಶೆಯಲ್ಲಿ ತೇಲಾಡಲು ಗಾಂಜಾ ಖರೀದಿಸುತ್ತಿದ್ದಾರೆ.
ಗಾಂಜಾ ಘಾಟು ನೆತ್ತಿಗೇರಿಸಿಕೊಳ್ಳುವ ವ್ಯಸನಿಗಳು ಸಣ್ಣ ಸಣ್ಣ ವಿಷಯಕ್ಕೂ ಮೈಮೇಲೆ ಎರಗಿ ದಾಂಧಲೆ ಮಾಡುವ ಜತೆಗೆ ಭಯದ ವಾತಾವರಣ ಸೃಷ್ಟಿಸುತ್ತಿದ್ದಾರೆ. ರಸ್ತೆಯಲ್ಲಿ ಓಡಾಡುವ ಹೆಣ್ಣು ಮಕ್ಕಳಿಗೆ ಚುಡಾಯಿಸುತ್ತಾರೆ. ಇದನ್ನು ಪ್ರಶ್ನಿಸಿದವರ ಮೇಲೆ ತಿರುಗಿ ಬೀಳುತ್ತಿದ್ದಾರೆ. ಕಾನೂನು ಭಯವಿಲ್ಲದೆ ಮೆರೆಯುತ್ತಿರುವ ವ್ಯಸನಿಗಳ ಅಟ್ಟಹಾಸವನ್ನು ಮಟ್ಟಹಾಕದ ಹೊರತು ಸ್ವಸ್ಥ ಸಮಾಜ ನಿರ್ಮಾಣ ಅಸಾಧ್ಯವಾಗಿದೆ.