ಮನೆಯಲ್ಲಿ 300 ಗ್ರಾಂ, ಹೊಲದಲ್ಲಿ 25 ಕೆಜಿ ಹಸಿ ಗಾಂಜಾ ಜಪ್ತಿ

8 smg 13
Published on

ಶಿವಮೊಗ್ಗ: ಸೊರಬ ತಾಲೂಕ ಚಿಟ್ಟೂರು ಗ್ರಾಮದಲ್ಲಿ ಮನೆ ಮತ್ತು ಶುಂಠಿ ಹೊಲದ ಮೇಲೆ ದಾಳಿ ನಡೆಸಿರುವ ಅಬಕಾರಿ ಪೊಲೀಸರು ವ್ಯಕ್ತಿಯನ್ನು ಬಂಧಿಸಿದ್ದು 300 ಗ್ರಾಂ ಒಣಗಾಂಜಾ ಮತ್ತು 25 ಕೆಜಿ ಹಸಿ ಗಾಂಜಾ ಜಪ್ತಿ ಮಾಡಿದ್ದಾರೆ.

ಚಿಟ್ಟೂರು ಗ್ರಾಮದ ನಿಂಗರಾಜ್ ಬಂಧಿತ ಆರೋಪಿ. ಈತ ಮಾರಾಟ ಮಾಡಲೆಂದು ಮನೆಯಲ್ಲೇ ಒಣ ಗಾಂಜಾ ಸಂಗ್ರಹಿಸಿದ್ದ. ಖಚಿತ ಮಾಹಿತಿ ಮೇರೆಗೆ ಅಬಕಾರಿ ಡಿಸಿ ಕ್ಯಾಪ್ಟನ್ ಅಜಿತ್‌ಕುಮಾರ್ ಕುಮಾರ್ ನೇತೃತ್ವದಲ್ಲಿ ಗುರುವಾರ ದಾಳಿ ನಡೆಸಿದಾಗ 300 ಗ್ರಾಂ ಒಣ ಗಾಂಜಾ ಪತ್ತೆಯಾಗಿತ್ತು. ಬಳಿಕ ವಿಚಾರಣೆ ನಡೆಸಿದಾಗ ಶುಂಠಿ ಹೊಲದಲ್ಲೂ ಗಾಂಜಾ ಬೆಳೆದಿರುವುದನ್ನು ಒಪ್ಪಿಕೊಂಡಿದ್ದ.

ಆತ ನೀಡಿದ ಮಾಹಿತಿ ಆಧರಿಸಿ ಗ್ರಾಮದಲ್ಲೇ ಇದ್ದ ಶುಂಠಿ ಹೊಲದಲ್ಲಿ ತಪಾಸಣೆ ನಡೆಸಿದಾಗ 8ರಿಂದ 10 ಅಡಿಯ 10, ಐದಾರು ಅಡಿ ಎತ್ತರದ 10 ಗಾಂಜಾ ಹಸಿಗಳು ಪತ್ತೆಯಾಗಿದ್ದು ಆರೋಪಿ ನಿಂಗರಾಜ್‌ನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಸೊರಬ ವಲಯದ ಅಬಕಾರಿ ನಿರೀಕ್ಷಕ ಆರ್.ಶ್ರೀನಾಥ್, ನಿರೀಕ್ಷಕ ಹಾಲಾನಾಯಕ್, ಉಪ ನಿರೀಕ್ಷಕಿ ಭಾಗ್ಯಲಕ್ಷ್ಮೀ ಮತ್ತು ಸಿಬ್ಬಂದಿಗಳಾದ ರಂಜನ್, ರಾಮಪ್ಪ, ಬಾಲಚಂದ್ರ ಗಣಪತಿ, ಮಹಾಂತೇಶ, ದೇವರಾಜ, ಮಹಾಬಲೇಶ, ಕಾಂತರಾಜ, ಸಚಿನ್, ಅರ್ಜುನ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದು ಕಂದಾಯ ನಿರೀಕ್ಷಕ ರಮೇಶ್ ಮತ್ತು ಗ್ರಾಮ ಲೆಕ್ಕಾಧಿಕಾರಿ ಆರ್.ವೀರೇಂದ್ರ ಮತ್ತು ಗ್ರಾಪಂ ಕಾರ್ಯದರ್ಶಿ ಪರಶುರಾಮ ದಾಳಿ ವೇಳೆ ಸಹಕರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net