ಗಾಂಜಾ ಕೇಸಲ್ಲಿ ಪೊಲೀಸರ ತಲೆದಂಡ

ganja-kalaburgi
Published on

* 6 ಕೋಟಿ ರೂ. ಮೊತ್ತ ಗಾಂಜಾ ವಶ ಪ್ರಕರಣ * ಐವರು ಪೊಲೀಸರ ಅಮಾನತು

ಕಲಬುರಗಿ: ಗಾಂಜಾ ದಂಧೆ ಇದೀಗ ಜಿಲ್ಲಾ ಪೊಲೀಸರ ಕೊರಳು ಸುತ್ತಿಕೊಳ್ಳುತ್ತಿದೆ. ಲಚ್ಚು (ಲಕ್ಷ್ಮಣ) ನಾಯಕ ತಾಂಡಾದಲ್ಲಿ ಬೆಂಗಳೂರು ಪೊಲೀಸರು ಕಾರ್ಯಾಚರಣೆ ನಡೆಸಿ ಅಪಾರ ಪ್ರಮಾಣದ ಗಾಂಜಾ ವಶಪಡಿಸಿಕೊಂಡ ಪ್ರಕರಣ ಸಂಬಂಧ ಜಿಲ್ಲೆಯ ಪೊಲೀಸರ ವೈಫಲ್ಯ ಬಯಲಾಗುತ್ತಿದ್ದಂತೆಯೇ ಇಬ್ಬರು ಅಧಿಕಾರಿಗಳು ಸೇರಿ ಸ್ಥಳೀಯ ಐವರು ಪೊಲೀಸರನ್ನು ಅಮಾನತುಗೊಳಿಸಲಾಗಿದೆ.

ಕಾಳಗಿ ಸಿಪಿಐ ಭೋಜರಾಜ ರಾಠೋಡ್, ಎಸ್​ಐ ಬಸವರಾಜ ಚಿತಕೋಟಿ, ಎಎಸ್​ಐ ನೀಲಕಂಠ, ಸಿಬ್ಬಂದಿ ಶರಣು ಮತ್ತು ಅನೀಲ್ ಅವರನ್ನು ಅಮಾನತುಗೊಳಿಸಿ ಎಸ್​ಪಿ ಡಾ.ಸಿಮಿ ಮರಿಯಮ್ ಜಾರ್ಜ್ ಆದೇಶ ಹೊರಡಿಸಿದ್ದಾರೆ.

ತಾಂಡಾದ ಕುರಿ ಫಾರಂ ನೆಲಮಹಡಿಯಲ್ಲಿ ಸಂಗ್ರಹಿಸಿಟ್ಟಿದ್ದ ಸುಮಾರು 6 ಕೋಟಿ ರೂ. ಮೌಲ್ಯದ 1350 ಕೆಜಿ ಗಾಂಜಾ ಚೀಲಗಳನ್ನು ಬೆಂಗಳೂರು ಪೊಲೀಸರ ತಂಡ ವಶಪಡಿಸಿಕೊಂಡು ಆರೋಪಿಯನ್ನು ವಶಕ್ಕೆ ಪಡೆದಿತ್ತು. ಇಷ್ಟು ದೊಡ್ಡ ಪ್ರಮಾಣದಲ್ಲಿ ಗಾಂಜಾ ಸಂಗ್ರಹಿಸಿಟ್ಟಿದ್ದರೂ ಪತ್ತೆ ಹಚ್ಚುವಲ್ಲಿ ಕಾಳಗಿ ಪೊಲೀಸರು ವಿಫಲರಾಗಿದ್ದಾರೆ ಎಂದು ಆರೋಪಿಸಲಾಗಿತ್ತು. ಘಟನೆ ನಡೆದ ತಕ್ಷಣ ಐಜಿಪಿ ಮನೀಶ್ ಖರ್ಬಿಕರ್ ಎಸ್​ಪಿ ಅವರನ್ನು ಕರೆಸಿ ರ್ಚಚಿಸಿ ಗಾಂಜಾ ಪತ್ತೆ ಹಚ್ಚುವಲ್ಲಿ ವಿಫಲರಾಗಿರುವ ಪೊಲೀಸ್ ಅಧಿಕಾರಿಗಳನ್ನು ಸಸ್ಪೆಂಡ್ ಮಾಡುವಂತೆ ಆದೇಶಿಸಿದ್ದರು ಎನ್ನಲಾಗಿದೆ. ಹೀಗಾಗಿ ಇಲಾಖೆ ವಿಚಾರಣೆ ಕಾದಿರಿಸಿ ಸಿಪಿಐ, ಪಿಎಸ್​ಐ, ಎಎಸ್​ಐ ಮತ್ತು ಇಬ್ಬರು ಪೇದೆಗಳನ್ನು ಅಮಾನತು ಮಾಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net