

ಮಂಗಳೂರು: ಹೈದರಾಬಾದ್‌ನಿಂದ ಮಂಗಳೂರು ಹಾಗೂ ಕಾಸರಗೋಡಿಗೆ ಗಾಂಜಾ ಸಾಗಾಟ ಮಾಡುತ್ತಿದ್ದ ಆರೋಪದ ಮೇಲೆ ಇಬ್ಬರನ್ನು ಬಂಧಿಸಿ ಸುಮಾರು 5.73 ಲಕ್ಷ ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಕಾಸರಗೋಡು ನಿವಾಸಿ ಇಬ್ರಾಹಿಂ ಮಡನ್ನೂರು(40) ಮತ್ತು ಅಬ್ದುಲ್ ನಿಜಾದ್(37) ಬಂಧಿತ ಆರೋಪಿಗಳು.
ನ.27ರಂದು ನಗರದ ಪಡೀಲ್ ಜಂಕ್ಷನ್‌ನಿಂದ ಬಿಕರ್ನಕಟ್ಟೆಗೆ ಬರುವ ರಸ್ತೆಯಲ್ಲಿ ಪಡು ಮರೋಳಿ ಬಳಿ ಮಹಾರಾಷ್ಟ್ರ ನೋಂದಣಿ ಟೂರಿಸ್ಟ್ ಕಾರನ್ನು ತಡೆದು ನಿಲ್ಲಿಸಿದಾಗ ಅದರಲ್ಲಿ ಆರೋಪಿಗಳು ಹೈದರಾಬಾದ್‌ನಿಂದ ನಗರ ಹಾಗೂ ಕೇರಳಕ್ಕೆ ಗಾಂಜಾ ಸಾಗಾಟ ಮಾಡುತ್ತಿರುವುದು ಪತ್ತೆಯಾಗಿದೆ. ಆರೋಪಿಗಳಿಂದ 3.60 ಲಕ್ಷ ರೂ. ಮೌಲ್ಯದ 24 ಕೆ.ಜಿ. ತೂಕದ ಗಾಂಜಾ, 2 ಲಕ್ಷ ರೂ. ಮೌಲ್ಯದ ಕಾರು, 13 ಸಾವಿರ ರೂ. ಮೌಲ್ಯದ 3 ಮೊಬೈಲ್ ೆನ್ ಸೇರಿದಂತೆ 5.73 ಲಕ್ಷ ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಮಂಗಳೂರು ನಗರ ಪೊಲೀಸ್ ಕಮಿಷನರ್ ವಿಕಾಸ್ ಕುಮಾರ್ ಮಾರ್ಗದರ್ಶನದಲ್ಲಿ ಡಿಸಿಪಿಗಳಾದ ಹರಿರಾಮ್ ಶಂಕರ್ ಹಾಗೂ ವಿನಯ ಗಾಂವ್ಕರ್ ನಿರ್ದೇಶನದಂತೆ ಇಕನಾಮಿಕ್ ಆ್ಯಂಡ್ ನಾರ್ಕೊಟಿಕ್ ಕ್ರೈಂ ಪೊಲೀಸ್ ಠಾಣಾ ನಿರೀಕ್ಷಕ ಕೆ.ಕೆ.ರಾಮಕೃಷ್ಣ ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.