ಒಡಿಶಾದಿಂದ ಮಂಗಳೂರಿಗೆ 120 ಕೆ.ಜಿ. ಗಾಂಜಾ ಸಾಗಾಟ ಸಿಸಿಬಿ ಪೊಲೀಸರ ಕಾರ್ಯಾಚರಣೆ ಇಬ್ಬರ ಬಂಧನ

mng--6 Feb odissa ganja
Published on


ಮಂಗಳೂರು: ಒಡಿಶಾದಿಂದ ಮಂಗಳೂರಿಗೆ ಹಾಗೂ ಕೇರಳಕ್ಕೆ ಬೃಹತ್ ಪ್ರಮಾಣದಲ್ಲಿ ನಿಷೇಧಿತ ಮಾದಕ ವಸ್ತು ಗಾಂಜಾ ಸಾಗಾಟವನ್ನು ಸಿಸಿಬಿ ಪೊಲೀಸರು ಪತ್ತೆ ಮಾಡಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ 28 ಲಕ್ಷ ರೂ. ಗಳ 120 ಕೇಜಿ ಗಾಂಜಾ ವಶಪಡಿಸಿದ್ದಾರೆ.


ಆರೋಪಿಗಳಾದ ಕೇರಳ ವಯನಾಡ್‌ನ ಅನೂಪ್ ಎಂ.ಎಸ್.(28) ಮತ್ತು ಕೇರಳ ಇರಿಟ್ಟಿಯ ಲತೀಫ್ ಕೆ.ವಿ.(36) ಬಂಧಿತರು.
ಉಳ್ಳಾಲದ ತಲಪಾಡಿಯ ಪಿಲಿಕೂರಿನಲ್ಲಿ ಖಚಿತ ವರ್ತಮಾನ ಮೇರೆಗೆ ಸಿಸಿಬಿ ಇನ್‌ಸ್ಪೆಕ್ಟರ್ ಶ್ಯಾಮಸುಂದರ್ ತಂಡ ದಾಳಿ ನಡೆಸಿ ಬಂಧಿಸಿದೆ.


ಆರೋಪಿಗಳು ಸಿಲ್ವರ್ ಬಣ್ಣದ ಬೊಲೆರೋದಲ್ಲಿ ಈ ಮಾದಕ ವಸ್ತುವನ್ನು ಸಾಗಾಟ ಮಾಡುತ್ತಿದ್ದು, ಅದನ್ನು ವಶಪಡಿಸಲಾಗಿದೆ. ಅಲ್ಲದೆ 3 ಮೊಬೈಲ್ ಫೋನ್, 4,020 ರೂ. ನಗದು, ವಶಪಡಿಸಿಕೊಂಡಿದ್ದಾರೆ. ಆರೋಪಿಗಳು ಒಡಿಶಾದಿಂದ ಆಂಧ್ರಪ್ರದೇಶ, ಬೆಂಗಳೂರು ಮೂಲಕ ಗಾಂಜಾವನ್ನು ಕಾರಿನಲ್ಲಿರಿಸಿ ಸಾಗಾಟ ಮಾಡುತ್ತಿದ್ದರು. ಬೊಲೆರೋ ವಾಹನದ ಹಿಂಬದಿ ಡಿಕ್ಕಿಯಲ್ಲಿ ಪ್ರತ್ಯೇಕ ಕಬ್ಬಿಣದ ಬಾಕ್ಸ್ ಮಾಡಿಕೊಂಡು ಅದರಲ್ಲಿ ಗಾಂಜಾ ಬಚ್ಚಿಟ್ಟಿದ್ದರು. ಈ ಅಕ್ರಮ ಸಾಗಾಟದಲ್ಲಿ ಹಲವು ಮಂದಿ ಭಾಗಿಯಾಗಿರುವ ಶಂಕೆ ಇದ್ದು, ಆರೋಪಿಗಳ ಪತ್ತೆ ಕಾರ್ಯ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.


ಆರೋಪಿಗಳ ಪೈಕಿ ಅನೂಪ್ ಎಂಬಾತನ ವಿರುದ್ಧ ಈ ಹಿಂದೆ ಮೈಸೂರಿನ ನಂಜನಗೂಡು ಗ್ರಾಮಾಂತರ ಠಾಣೆಯಲ್ಲಿ 2018ರಲ್ಲಿ ದರೋಡೆ ಕೇಸ್ ದಾಖಲಾಗಿತ್ತು. ಕೇರಳ ವಯನಾಡ್‌ನ ಮೆಪ್ಪಳ್ಳಿ ಠಾಣೆಯಲ್ಲಿ ಮಾದಕವಸ್ತು ಸಾಗಾಟ ಪ್ರಕರಣ, ವಯನಾಡ್‌ನ ಕಲ್ಪಟ್ಟ ಠಾಣೆಯಲ್ಲಿ ಎರಡು ದರೋಡೆ ಕೇಸ್, ಒಂದು ಹಲ್ಲೆ ಕೇಸ್, ವಯನಾಡ್‌ನ ಅಂಬಲವಯಲ್ ಠಾಣೆಯಲ್ಲಿ ಎರಡು ಕಳವು ಕೇಸ್ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net