

ಹುಬ್ಬಳ್ಳಿ : ಎತ್ತಿನ ಗಾಣದಲ್ಲಿ ಉತ್ಪಾದನೆ ಮಾಡುವ ಶೇಂಗಾ ಮತ್ತು ಕುಸುಬೆ ಎಣ್ಣೆ ವಿವಿಧ ಪೋಷಕಾಂಶಗಳನ್ನು ಒಳಗೊಂಡಿದ್ದು, ನಿತ್ಯದ ಅಡುಗೆಗೆ ಆರೋಗ್ಯ ವರ್ಧಕ ಎತ್ತಿನ ಗಾಣದ ಎಣ್ಣೆ ಬಳಸಬೇಕು ಎಂದು ಬಿಜೆಪಿ ರೈತ ಮೋರ್ಚಾ ಬೆಂಗಳೂರು ದಕ್ಷಿಣ ಕಾರ್ಯದರ್ಶಿ ವಿದ್ಯಾ ವಿ.ಎಂ. ಹೇಳಿದರು.
ಬಿಜೆಪಿ ರೈತ ಮೋರ್ಚಾ ವತಿಯಿಂದ ಇಲ್ಲಿನ ಬಿಜೆಪಿ ಕಚೇರಿಯಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಗಾಣಿಗ ಸಮಾಜದವರ ಸಮಾಲೋಚನಾ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.
ನಮ್ಮ ಪೂರ್ವಜರ ಆಹಾರ ಪದ್ಧತಿಯಲ್ಲಿ ಎತ್ತಿನ ಗಾಣದ ಎಣ್ಣೆಗೆ ಸ್ಥಾನವಿತ್ತು. ಎತ್ತಿನ ಎಣ್ಣೆ ಗಾಣದ ಮೂಲಕವೇ ಶುದ್ಧ ಅಡುಗೆ ಎಣ್ಣೆ ಉತ್ಪಾದನೆಗೆ ಬಿಜೆಪಿ ರೈತ ಮೋರ್ಚಾ ಚಿಂತನೆ ನಡೆಸಿದೆ ಎಂದರು.
ಎತ್ತಿನ ಗಾಣದ ಎಣ್ಣೆ ಉತ್ಪಾದನೆಗೆ ಸಂಬಂಧಿಸಿ ಕೇಂದ್ರ ಆಹಾರ ಸಚಿವ ಪ್ರಲ್ಹಾದ ಜೋಶಿ ಅವರೊಂದಿಗೆ ರ್ಚಚಿಸಿದ್ದು, ಹುಬ್ಬಳ್ಳಿಯಲ್ಲಿ ಸಚಿವರ ನೇತೃತ್ವದಲ್ಲಿ ಹಮ್ಮಿಕೊಳ್ಳುವ ಸಮಾರಂಭದಲ್ಲಿ ರೈತರಿಗೆ ಎತ್ತಿನ ಗಾಣಗಳ ವಿತರಣೆ ಮಾಡಿ, ಹೆಚ್ಚೆಚ್ಚು ಎತ್ತಿನ ಗಾಣದ ಎಣ್ಣೆ ಉತ್ಪಾದನೆಗೆ ಪ್ರೋತ್ಸಾಹಿಸಲಾಗುವುದು ಎಂದು ಹೇಳಿದರು.
ಬಿಜೆಪಿ ರೈತ ಮೋರ್ಚಾ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಶಶಿಮೌಳಿ ಕುಲಕರ್ಣಿ ಮಾತನಾಡಿ, ಅಡುಗೆ ಎಣ್ಣೆ ಉತ್ಪಾದನೆಯನ್ನೇ ತಮ್ಮ ಕುಲಕಸುಬು ಹೊಂದಿರುವ ಧಾರವಾಡ ಜಿಲ್ಲೆಯ ಗಾಣಿಗ ಸಮಾಜದ ರೈತರಿಗೆ ಹೊಸ ವಿನ್ಯಾಸದ ಎತ್ತಿನ ಗಾಣಗಳನ್ನು ಒದಗಿಸಿ, ಶುದ್ಧ ಶೇಂಗಾ ಮತ್ತು ಕುಸುಬೆ ಎಣ್ಣೆ ಉತ್ಪಾದನೆಗೆ ಚಾಲನೆ ನೀಡಲು ಚಿಂತಿಸಲಾಗಿದೆ ಎಂದರು.
ಎತ್ತಿನ ಗಾಣದಲ್ಲಿ ಲಭಿಸುವ ಹಿಂಡಿಯನ್ನು ಎಮ್ಮೆ, ಆಕಳುಗಳಿಗೆ ಒದಗಿಸಿ ಅಧಿಕ ಹಾಲು ಉತ್ಪಾದನೆ ಮಾಡಬಹುದಾಗಿದೆ. ಇದು ರೈತರಿಗೆ ಲಾಭದಾಯಕ ವೃತ್ತಿಯೂ ಆಗಲಿದೆ ಎಂದು ತಿಳಿಸಿದರು.
ಬಿಜೆಪಿ ರೈತ ಮೋರ್ಚಾ ಧಾರವಾಡ ಜಿಲ್ಲಾಧ್ಯಕ್ಷ ಲಿಂಗಪ್ಪ ಸುತಗಟ್ಟಿ, ಮಂಡಳ ಅಧ್ಯಕ್ಷ ಕಲಗಟ್ಟಿ ಸೇರಿದಂತೆ ಬಿಜೆಪಿ ರೈತ ಮೋರ್ಚಾದ ಪದಾಧಿಕಾರಿಗಳು ಹಾಗೂ ಗಾಣಿಗ ಸಮಾಜದ ರೈತರು ಹಾಜರಿದ್ದರು.