

ತೈಲೇಶ್ವರ ಗಾಣಿಗ ಮಹಾಸಂಸ್ಥಾನ ಮಠದಲ್ಲಿ 11ರಂದು ಆಯೋಜನೆ-ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿ ಹಲವು ಗಣ್ಯರು ಭಾಗಿ
ನೆಲಮಂಗಲ: ರಾಜ್ಯದಲ್ಲಿ ಪ್ರಥಮ ಬಾರಿಗೆ ಜ.11ರಂದು ಗಾಣಿಗ ಹಬ್ಬವನ್ನು ಅದ್ದೂರಿಯಾಗಿ ಆಚರಣೆ ಮಾಡುತ್ತಿದೆ ಎಂದು ಶ್ರೀ ಪೂರ್ಣಾನಂದಪುರಿ ಸ್ವಾಮೀಜಿ ತಿಳಿಸಿದರು.
ನಗರೂರಿನ ತೈಲೇಶ್ವರ ಗಾಣಿಗ ಮಹಾಸಂಸ್ಥಾನ ಮಠದಲ್ಲಿ ನಡೆಯಲಿರುವ 2ನೇ ವರ್ಷದ ಪೀಠಾರೋಹಣ, ಶಾಲಾ ಕಟ್ಟಡ ಉದ್ಘಾಟನೆ ಸೇರಿ ಗಾಣಿಗ ಹಬ್ಬದ ಕುರಿತು ಅಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ಸುಮಾರು 50 ವರ್ಷದ ರಾಜಕೀಯ ಜೀವನವನ್ನು ತೊರೆದು ಗಾಣಿಗ ಸಮುದಾಯದ ಶ್ರೇಯೋಭಿವೃದ್ಧಿಗೆ
2022ರಲ್ಲಿ ಸನ್ಯಾಸತ್ವ ಸ್ವೀಕಾರ ಮಾಡಿ 2 ವರ್ಷ ಪೂರೈಸಿದೆ. ಈ ಹಿನ್ನೆಲೆಯಲ್ಲಿ ಸುಮಾರು 12 ಕೋಟಿ ರೂಪಾಯಿ ವೆಚ್ಚದಲ್ಲಿ ಶಾಲಾ ಕೊಠಡಿ, ಶಾಲಾ ಕಾಂಪೌಂಡ್ ವ್ಯವಸ್ಥೆ ಹಾಗೂ ಬಡ ಮಕ್ಕಳಿಗೆ, ಅಂಗವಿಕಲರಿಗೆ ಉಚಿತ ಶಿಕ್ಷಣ ಹಾಗೂ ವಿದ್ಯಾರ್ಥಿ ನಿಲಯ ಆರಂಭಿಸಲಾಗುತ್ತಿದೆ. 40 ಸಾವಿರಕ್ಕೂ ಹೆಚ್ಚು ಮಂದಿ ಭಾಗವಹಿಸುವ ನಿರೀಕ್ಷೆಯಿದೆ ಎಂದರು.
ಕಾರ್ಯಕ್ರಮಕ್ಕೆ ಸಕಲ ಸಿದ್ಧತೆ
ಶ್ರೀಮಠದಲ್ಲಿ ಜ.11ರಂದು ಬೆಳಗ್ಗೆ 11 ಗಂಟೆಗೆ ಪೀಠಾರೋಹಣದ ಎರಡನೇ ವರ್ಷಾಚರಣೆ, ಗಾಣಿಗರ ಹಬ್ಬ ಹಮ್ಮಿಕೊಂಡಿದ್ದು, ಶಾಲಾ ಕಟ್ಟಡವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆ. ಭೋಜನ ಕೊಠಡಿಯನ್ನು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಉದ್ಘಾಟಿಸುವರು. ಸಚಿವ ಎಚ್.ಕೆ.ಪಾಟೀಲ್ ಗ್ರಂಥ ಬಿಡುಗಡೆ, ಸಚಿವ ಎಚ್.ಸಿ.ಮಹದೇವಪ್ಪ ಸ್ಮರಣ ಸಂಚಿಕೆ ಬಿಡುಗಡೆ ಮಾಡುವರು. ಸಚಿವ ದಿನೇಶ್‌ಗುಂಡೂರಾವ್ ಗಾಣಿಗಸೂರ್ಯ ಗ್ರಂಥ ಬಿಡುಗಡೆ, ಸಚಿವ ಕೆ.ಎನ್.ರಾಜಣ್ಣ ಸಾಮಾಜಿಕ ಜಾಲತಾಣ ಉದ್ಘಾಟನೆ ನೆರವೇರಿಸಲಿದ್ದು, ಗ್ರಂಥಾಲಯ ಕಟ್ಟಡವನ್ನು ರಾಜ್ಯಸಭಾ ಸದಸ್ಯ ಜಿ.ಸಿ.ಚಂದ್ರಶೇಖರ್ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಸಚಿವ ಶಿವರಾಜ ತಂಗಡಗಿ, ಸರ್ಕಾರದ ಗ್ಯಾರಂಟಿ ಯೋಜನೆ ಅಧ್ಯಕ್ಷ ಎಚ್.ಎಂ.ರೇವಣ್ಣ, ಜಿಲ್ಲಾಧಿಕಾರಿ ಡಾ.ಬಿ.ವಿ.ವಾಸಂತಿ ಅಮರ್ ಭಾಗವಹಿಸಲಿದ್ದಾರೆ ಎಂದು ಶ್ರೀಪೂರ್ಣಾನಂದಪುರಿ ಸ್ವಾಮೀಜಿ ಮಾಹಿತಿ ನೀಡಿದರು.