

| ಕಿರಣ್ ಮಾದರಹಳ್ಳಿ ಚಾಮರಾಜನಗರ
ಗಣಿ ಮತ್ತು ಭೂವಿಜ್ಞಾನ ಇಲಾಖೆ ಅವೈಜ್ಞಾನಿಕ ನಿಯಮ ಮತ್ತು ಅಧಿಕಾರಿಗಳ ನಿರ್ಲಕ್ಷ್ಯ, ಗಣಿ ಮಾಲೀಕ, ಗುತ್ತಿಗೆದಾರನ ಹಣ ದಾಹವೇ ಜಿಲ್ಲೆಯಲ್ಲಿ ‘ಬಿಳಿಕಲ್ಲು ಗಣಿ ಕುಸಿತ’ ದುರಂತ ಸಂಭವಿಸಲು ಪ್ರಮುಖ ಕಾರಣ. ಗುಮ್ಮಕಲ್ಲುಗುಡ್ಡದಲ್ಲಿ ಒಟ್ಟು 34 ಎಕರೆ ಪ್ರದೇಶದಲ್ಲಿ 12 ಎಕರೆಯನ್ನು ಗಣಿ ಇಲಾಖೆ 7 ಜನರಿಗೆ ಭೋಗ್ಯಕ್ಕೆ ನೀಡಿದೆ. ಇವರೆಲ್ಲರೂ ಗುಡ್ಡದ ಒಂದೊಂದು ಭಾಗದಲ್ಲಿ ಗಣಿಗಾರಿಕೆ ಮಾಡುತ್ತಿದ್ದು, ಸುತ್ತಲೂ ಕಲ್ಲು ಕೊರೆಯಲಾಗಿದೆ. ಮಧ್ಯಭಾಗದ ಬಂಡೆ ಗಟ್ಟಿಯಾಗಿ ನಿಲ್ಲಲು ಬಲವಿಲ್ಲದೆ ಬಿಸಿಲು, ಶೀತ ವಾತಾವರಣಕ್ಕೆ ಕುಸಿದು ಬಿದ್ದಿದೆ.
ಕ್ವಾರಿಯನ್ನು ಒಬ್ಬರು ಅಥವಾ ಇಬ್ಬರಿಗೆ ಮಾತ್ರ ಭೋಗ್ಯಕ್ಕೆ ನೀಡಿದ್ದರೆ ಕಲ್ಲುಗಳನ್ನು ನೆಲಮಟ್ಟದಿಂದ ಹಂತ ಹಂತವಾಗಿ ಮೆಟ್ಟಿಲುಗಳ ರೀತಿಯಲ್ಲಿ ಹೊರತೆಗೆಯುವ ನಿಯಮ ಪಾಲನೆಯಾಗುತ್ತಿತ್ತು. ಆದರೆ ಗುಡ್ಡವನ್ನು ಭೋಗ್ಯ ಪಡೆದವರ ಸಂಖ್ಯೆ ಹೆಚ್ಚಾಗಿದ್ದ ಕಾರಣ ಇಲ್ಲಿ ಇದಕ್ಕೆ ಅವಕಾಶ ಸಿಕ್ಕಿಲ್ಲ. ಎಲ್ಲರೂ ತಮಗೆ ಸಿಕ್ಕಿರುವ ಜಾಗದಲ್ಲಿ ನೇರವಾಗಿ ಕಲ್ಲು ತೆಗೆದಿದ್ದಾರೆ. ಈ ಅವೈಜ್ಞಾನಿಕ ಕ್ರಮವನ್ನು ಬದಲಿಸಲು ಮತ್ತು ಸ್ಥಳ ಪರಿಶೀಲಿಸಿ ಅಧಿಕಾರಿಗಳು ಕ್ರಮವಹಿಸಿಲ್ಲ. ಜಿಲ್ಲೆಯ ಗಣಿ ಪ್ರದೇಶದಲ್ಲಿ ಅಂತರ್ಜಲ ಸಿಗುವವರೆಗೂ ಕಲ್ಲು ತೆಗೆಯಲು ಅನುಮತಿ ಇದೆ. ಗುಂಡ್ಲುಪೇಟೆ ತಾಲೂಕಿನಲ್ಲಿ ಅಂತರ್ಜಲ ಮಟ್ಟ ಸಂಪೂರ್ಣ ಕುಸಿದಿದೆ. ಕೊಳವೆ ಬಾವಿ ಕೊರೆಯಲು ಅನುಮತಿ ಇದ್ದರಷ್ಟೇ ಅವಕಾಶವಿದೆ. ಹೀಗಾಗಿ ಗುಮ್ಮಕಲ್ಲುಗುಡ್ಡದ ಕ್ವಾರಿಯಲ್ಲಿ ನೂರಾರು ಅಡಿ ಆಳದವರೆಗೂ ಭೂಮಿ ಕೊರೆಯಲು ಸಿಕ್ಕಿರುವ ಅವಕಾಶವನ್ನು ಗಣಿ ಮಾಲೀಕ ಸಂಪೂರ್ಣವಾಗಿ ಬಳಸಿಕೊಂಡು ಭೂಮಿಯ ಒಡಲು ಸೀಳಿದ್ದಾರೆ. ಏಕಮುಖವಾದ ಬಂಡೆಕಲ್ಲುಗಳು ಎತ್ತರದಿಂದ ಕೆಳಗೆ ಬಿದ್ದು ಕಾರ್ವಿುಕನ ಜೀವ ಬಲಿ ಪಡೆದಿದೆ. ಕ್ವಾರಿಯ ಮಾಲೀಕ ಮಹೇಂದ್ರಪ್ಪ ಕಾನೂನುಬದ್ಧವಾಗಿ ಗಣಿಗಾರಿಕೆ ನಡೆಸುತ್ತಿದ್ದಾರೆ. ಆದರೆ ಕೇರಳ ಮೂಲಕದ ಹಕೀಬ್ಗೆ ಗುತ್ತಿಗೆ ನೀಡಿರುವುದು ನಿಯಮಬಾಹಿರ. ತನಿಖೆ ನಡೆಸಿರುವ ಪೊಲೀಸರು ಇವರಿಬ್ಬರು ಮತ್ತು ಗಣಿ ವ್ಯವಸ್ಥಾಪಕ ನವೀದ್ ಮೇಲೆ ಪ್ರಕರಣ ದಾಖಲಿಸಿದ್ದಾರೆ. ಹಾಗಿದ್ದರೂ ಗಣಿ ಮಾಲೀಕನ ಪರವಾಗಿಯೇ ಜಿಲ್ಲಾ ಗಣಿ ಮತ್ತು ಭೂವಿಜ್ಞಾನ ಇಲಾಖೆ ನಿಂತಿದೆ. ಇಲಾಖೆಯ ಪ್ರಭಾರ ಉಪನಿರ್ದೇಶಕ ನಾಗಭೂಷಣ್ ವಿಜಯವಾಣಿಯೊಂದಿಗೆ ಮಾತನಾಡಿ, ಮಹೇಂದ್ರಪ್ಪ ಯಾರಿಗೂ ಗುತ್ತಿಗೆ ನೀಡಿರಲಿಲ್ಲ. ಕೆಲಸ ಮಾಡಲು ಬೇರೆಯವರನ್ನು ಬಿಟ್ಟಿದ್ದರು ಎಂದು ಹೇಳಿದ್ದಾರೆ. ಇಷ್ಟರ ಮಟ್ಟಿಗೆ ಬೆಂಬಲವಿರುವ ಗಣಿ ಮಾಲೀಕ ಮತ್ತು ಗುತ್ತಿಗೆದಾರನ ಹಣ ದಾಹಕ್ಕೆ ಕ್ವಾರಿಯಲ್ಲಿ ಅವೈಜ್ಞಾನಿಕವಾಗಿ ಗಣಿಗಾರಿಕೆ ನಡೆದು ದುರಂತ ಸಂಭವಿಸಲು ಕಾರಣವಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಗದಗ ಎಲ್ಲಿ ಚಾ.ನಗರ ಎಲ್ಲಿ?: ಯೂರೋಪ್ ರಾಷ್ಟ್ರಗಳಿಗೆ ಗ್ರಾನೈಟ್ಗಳನ್ನು ರಫ್ತು ಮಾಡುವ ಚಾ.ನಗರದಲ್ಲಿ ಗಣಿ ಮತ್ತು ಭೂವಿಜ್ಞಾನ ಇಲಾಖೆ ಶಕ್ತಿ ಕಳೆದುಕೊಂಡಿದೆ. ಗದಗದ ಗಣಿ ಇಲಾಖೆ ಉಪನಿರ್ದೇಶಕ ನಾಗಭೂಷಣ್ ಚಾ.ನಗರದ ಪ್ರಭಾರ ಹೊಣೆ ಹೊತ್ತಿದ್ದಾರೆ. ಕಲ್ಲುಗಣಿ ಕುಸಿತ ಪ್ರಕರಣ ಸಂಭವಿಸಿದ ಒಂದು ದಿನದ ನಂತರ ಅವರು ಸ್ಥಳಕ್ಕೆ ಬಂದರು.
ಈ ಅನಾಹುತಕ್ಕೆ ಕಾರಣವಾದವರ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುವುದು. ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆಗೆ ಮೋಕ್ಷ ಕಾಣಿಸುತ್ತೇನೆ. ಕ್ವಾರಿಗಳಲ್ಲಿ ಅಂತರ್ಜಲ ಸಿಗುವವರೆಗೂ ಭೂಮಿ ಕೊರೆಯುವ ಕ್ರಮವನ್ನು ಇಂತಹ ಸಂದರ್ಭದಲ್ಲಿ ಸ್ಥಗಿತಗೊಳಿಸಲು ಅವಕಾಶವಿದೆ. ಘಟನೆ ಸಂಬಂಧ ವರದಿ ಬಂದ ಬಳಿಕ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಲಾಗುವುದು. | ವಿ.ಸೋಮಣ್ಣ ಜಿಲ್ಲಾ ಉಸ್ತುವಾರಿ ಸಚಿವ, ಚಾಮರಾಜನಗರ
ಗುಂಡ್ಲುಪೇಟೆ: ತಾಲೂಕಿನ ಮಡಹಳ್ಳಿ ಸಮೀಪದ ಗುಮ್ಮಕಲ್ಲುಗುಡ್ಡದ ಬಿಳಿಕಲ್ಲು ಕ್ವಾರಿಯಲ್ಲಿ ಶನಿವಾರ ಇಬ್ಬರ ಶವ ಪತ್ತೆಯಾಗಿದ್ದು, ಆ ಪೈಕಿ ಒಂದನ್ನು ಹೊರತೆಗೆಯಲಾಯಿತು. ಸ್ಥಳದಲ್ಲಿ ಮೂವರು ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ಶನಿವಾರ ಬೆಳಗ್ಗೆ 7 ಗಂಟೆಗೆ ಕಾರ್ಯಾಚರಣೆ ಆರಂಭಿಸಿದ ಎನ್ಡಿಆರ್ಎಫ್, ಎಸ್ಡಿಆರ್ಎಫ್, ಅಗ್ನಿಶಾಮಕದಳ ತಂಡ ಸತತ 8 ಗಂಟೆಗಳ ಬಳಿಕ ದೊಡ್ಡ ಬಂಡೆಯ ಕೆಳಗೆ ಸಿಲುಕಿದ್ದ ಜೆಸಿಬಿಯಿಂದ ಚಾಲಕ ಅಜ್ಜೀಮುಲ್ಲಾ(24) ಶವವನ್ನು ಹೊರತೆಗೆಯಿತು. ಸಮೀಪದಲ್ಲೇ ಮತ್ತೊಂದು ಮೃತದೇಹದ ಕಾಲು ಕಾಣಿಸುತ್ತಿದ್ದು, ಅದನ್ನು ಹೊರತೆಗೆಯಲು ಬಂಡೆ ಕೊರೆಯುವ ಕಾರ್ಯ ಮುಂದುವರಿದಿದೆ. ಶುಕ್ರವಾರ ಘಟನೆ ನಡೆದ ಗಳಿಗೆಯಿಂದ ಉತ್ತರಪ್ರದೇಶ ಮೂಲದ ಅಜೀಮುಲ್ಲಾ, ಸರ್ಫರಾಜ್(18), ಮೀರಾಜ್(28) ಕಣ್ಮರೆಯಾಗಿರುವ ಬಗ್ಗೆ ಅವರ ಸ್ನೇಹಿತರು ಪೊಲೀಸರಿಗೆ ಮಾಹಿತಿ ನೀಡಿದರು. ರಕ್ಷಣೆಯಾಗಿರುವ ಮೃತದೇಹವನ್ನು ಅಜೀಮುಲ್ಲಾ ಎಂದು ಗುರುತಿಸಿದ್ದಾರೆ. ಬಂಡೆ ಕೆಳಗೆ ಕಾಣಿಸಿರುವ ಮತ್ತೊಂದು ಶವವನ್ನು ಹೊರತೆಗೆದ ಬಳಿಕವಷ್ಟೇ ಯಾರದೆಂದು ತಿಳಿಯಲಿದೆ. ಉಳಿದ ಇನ್ನೊಬ್ಬನ ಪತ್ತೆಗೆ ಕಲ್ಲಿನ ರಾಶಿಯ ನಡುವೆ ರಕ್ಷಣಾ ತಂಡ ಹುಡುಕುತ್ತಿದೆ.