ಪೊಲೀಸರ ಬೇಜವಾಬ್ದಾರಿಯಿಂದ ಗ್ಯಾಂಗ್‌ವಾರ್: ಆರಗ

araga jnanendra
ಆರಗ ಜ್ಞಾನೇಂದ್ರ, ಶಾಸಕ
Published on

ಶಿವಮೊಗ್ಗ: ಜಿಲ್ಲೆಯಲ್ಲಿ ಪೊಲೀಸ್ ಇಲಾಖೆ ಸಂಪೂರ್ಣ ವೈಫಲ್ಯವಾಗಿದೆ. ಶಿವಮೊಗ್ಗದ ಆಯಕಟ್ಟಿನ ಜಾಗ ಕೋಟೆ ಠಾಣೆಗೆ ಸಮರ್ಥ ಅಧಿಕಾರಿಯನ್ನು ವರ್ಗಾವಣೆ ಮಾಡಬೇಕಿದೆ. ಅಲ್ಲಿನ ಪೊಲೀಸರು ಕೆಲವು ಪ್ರದೇಶಗಳಿಗೆ ಹೋಗಲು ಭಯಪಡುತ್ತಿದ್ದಾರೆ. ಕೆಲ ಕ್ರಿಮಿನಲ್‌ಗಳು ನೀಡುವ ಉಡುಗೊರೆಗಳನ್ನು ಪಡೆದು ಸುಮ್ಮನಾಗುತ್ತಿದ್ದಾರೆ ಎಂದು ಶಾಸಕ ಆರಗ ಜ್ಞಾನೇಂದ್ರ ಗಂಭೀರ ಆರೋಪ ಮಾಡಿದರು.

ಕೋಟೆ ಠಾಣೆ ವ್ಯಾಪ್ತಿಯಲ್ಲಿ ನಡೆದ ಡಬಲ್ ಮರ್ಡರ್ ವಿಷಯವನ್ನು ಲಘುವಾಗಿ ಪರಿಗಣಿಸುವಂತಿಲ್ಲ. ಶಿವಮೊಗ್ಗದ ವಾತಾವರಣವೇ ಸಂಪೂರ್ಣ ಹಾಳಾಗುತ್ತಿದೆ. ಇದಕ್ಕೆ ಪೊಲೀಸ್ ಇಲಾಖೆಯೇ ಕಾರಣವಾಗುತ್ತಿದೆ ಎನ್ನುವುದು ಬೇಸರದ ಸಂಗತಿ ಎಂದು ಹರಿಹಾಯ್ದರು. ಗ್ಯಾಂಗ್‌ವಾರ್‌ಗಳನ್ನು ತಪ್ಪಿಸಲು ಪೊಲೀಸರು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಸಮಾಜಘಾತಕ ಶಕ್ತಿಗಳನ್ನು ಬಂಧಿಸುವ ಬದಲು ಅವರೊಂದಿಗೇ ಶಾಮೀಲಾಗುತ್ತಿದ್ದಾರೆ ಎಂದು ಆರೋಪಿಸಿದರು.
ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗಾಂಜಾ ಸೇರಿ ಮಾದಕ ವಸ್ತುಗಳ ಬಳಕೆ ಹೆಚ್ಚುತ್ತಿರುವುದು ಅಪರಾಧ ಪ್ರಕರಣ ಹೆಚ್ಚಲು ಒಂದು ಕಾರಣವಾದರೆ, ಪೊಲೀಸರ ನಿರಾಸಕ್ತಿ ಮತ್ತೊಂದು ಕಾರಣ. ನಮ್ಮ ಜಿಲ್ಲಾ ಉಸ್ತುವಾರಿ ಸಚಿವರು ಏನು ಮಾಡುತ್ತಿದ್ದಾರೆ ಎಂಬುದೇ ತಿಳಿಯುತ್ತಿಲ್ಲ ಎಂದು ಹೇಳಿದರು.
ಪೊಲೀಸ್ ಠಾಣೆಗೆ ದೂರು ನೀಡಿದರೆ ಬಹುತೇಕ ಸಂದರ್ಭಗಳಲ್ಲಿ ಎಫ್‌ಐಆರ್ ದಾಖಲಾಗುವುದಿಲ್ಲ. ದೂರು ನೀಡಿದವರನ್ನೇ ಪೊಲೀಸರು ಸೇಡಿನಿಂದ ನೋಡುತ್ತಾರೆ. ಪೊಲೀಸರ ಮಾನಸಿಕತೆಯೇ ಬದಲಾಗಿದೆ. ರಾಗಿಗುಡ್ಡ ಪ್ರಕರಣದಿಂದ ಆರಂಭವಾಗಿ ಅನೇಕ ಘಟನೆಗಳನ್ನು ಶಿವಮೊಗ್ಗ ಪೊಲೀಸರು ನಿರ್ವಹಿಸಿದ ರೀತಿಯೇ ಸರಿಯಿಲ್ಲ ಎಂದು ದೂರಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net