

ಹುಬ್ಬಳ್ಳಿ : ಅನುದಾನದ ಕೊರತೆಯ ನೆಪವೊಡ್ಡಿ ಗುರುಶಿಷ್ಯ ಪರಂಪರೆಗೆ ತಿಲಾಂಜಲಿ ಇಡಲು ಮುಂದಾಗಿದ್ದ ಮೈಸೂರಿನ ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯಕ್ಕೆ ಇದೇ ಮೇ 25ರಂದು ಹಸ್ತಾಂತರಗೊಂಡಿದ್ದ ಹುಬ್ಬಳ್ಳಿಯ ಡಾ. ಗಂಗೂಬಾಯಿ ಹಾನಗಲ್ ಗುರುಕುಲ ಟ್ರಸ್ಟ್ನ ಭಾರತೀಯ ಶಾಸ್ತ್ರೀಯ ಸಂಗೀತ ಗುರುಕುಲ ಮಾದರಿಯ ಶಿಕ್ಷಣ ಕೇಂದ್ರಕ್ಕೆ ಸೋಮವಾರದ ವಿಧಾನಸಭೆ ಅಧಿವೇಶನದ ಚರ್ಚೆಯಿಂದಾಗಿ ಮತ್ತೆ ಜೀವಕಳೆ ಬರುವ ಲಕ್ಷಣಗಳು ತೋರುತ್ತಿವೆ.
ಸೋಮವಾರ ನಡೆದ ಅಧಿವೇಶನದಲ್ಲಿ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದ ಶಾಸಕ ಮಹೇಶ ಟೆಂಗಿನಕಾಯಿ ಸರ್ಕಾರದ ಗಮನ ಸೆಳೆದು, ಡಾ. ಗಂಗೂಬಾಯಿ ಹಾನಗಲ್ ಗುರುಕುಲವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ವರ್ಗಾವಣೆ ಮಾಡುವಂತೆ ಒತ್ತಾಯಿಸಿದರು.
ಇದರ ಪರಿಣಾಮವಾಗಿ ಸಭಾಧ್ಯಕ್ಷರು, ಹಿರಿಯ ಸಚಿವ ಎಚ್.ಕೆ. ಪಾಟೀಲ ಅವರ ನೇತೃತ್ವದಲ್ಲಿ ಸಚಿವ ರಾಮಲಿಂಗಾರೆಡ್ಡಿ ಹಾಗೂ ಸಚಿವ ಶಿವರಾಜ್ ತಂಗಡಗಿ, ಉನ್ನತ ಶಿಕ್ಷಣ ಸಚಿವ ಎಂ.ಪಿ. ಸುಧಾಕರ, ಗೃಹ ಸಚಿವ ಡಾ. ಜಿ. ಪರಮೇಶ್ವರ ಮತ್ತು ಶಾಸಕ ಮಹೇಶ ಟೆಂಗಿನಕಾಯಿ ಅವರನ್ನೊಳಗೊಂಡ ಸಮಿತಿ ರಚಿಸಿ, ಸಮಸ್ಯೆ ಇತ್ಯರ್ಥ ಪಡಿಸಿ, ಸೂಕ್ತ ತೀರ್ಮಾನ ಕೈಗೊಳ್ಳಲು ಸೂಚನೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಸದನದಲ್ಲಿ ಮಾತನಾಡಿದ ಶಾಸಕ ಮಹೇಶ ಟೆಂಗಿನಕಾಯಿ, ಡಾ. ಗಂಗೂಬಾಯಿ ಹಾನಗಲ್ ಗುರುಕುಲ ಟ್ರಸ್ಟ್ನ ಭಾರತೀಯ ಶಾಸ್ತ್ರೀಯ ಸಂಗೀತ ಗುರುಕುಲ ಕೇಂದ್ರ ದೇಶದ ಏಕೈಕ ಗುರುಶಿಷ್ಯ ಪರಂಪರೆ ಹೊಂದಿರುವ ಭಾರತೀಯ ಶಾಸ್ತ್ರೀಯ ಸಂಗೀತದ ಶಿಕ್ಷಣ ನೀಡುವ ಕೇಂದ್ರವಾಗಿತ್ತು ಎಂದರು.
ಮೈಸೂರಿನ ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದ ವ್ಯಾಪ್ತಿಗೆ ಈ ಶಿಕ್ಷಣ ಕೇಂದ್ರವನ್ನು ಪಡೆದುಕೊಂಡ ನಂತರ ಗುರುಶಿಷ್ಯ ಪರಂಪರೆಗೇ ಇತಿಶ್ರೀ ಹಾಡಲು ಮುಂದಾಗಿದೆ ಎಂದು ಆರೋಪಿಸಿದರು.
ಈ ಶಾಖೆಯ ನಿರ್ವಹಣೆಗೆ ಅಧಿಕಾರಿಗಳು 2.13 ಕೋಟಿ ರೂ. ಕೇಳಿರುವುದೇ ಅಚ್ಚರಿ ಮೂಡಿಸಿದೆ. ಇದರ ನಿರ್ವಹಣೆಗೆ 1.45 ಕೋಟಿ ರೂ. ತಗುಲುತ್ತದೆ. ಆದರೆ, ಅಧಿಕಾರಿಗಳು 68 ಲಕ್ಷ ರೂ. ಹೆಚ್ಚುರಿ ತೋರಿಸಿದ್ದಾರೆ ಎಂದು ದೂರಿದರು.
ಈಗಾಗಲೇ ಗಂಗೂಬಾಯಿ ಹಾನಗಲ್ ಸಂಗೀತ ವಿದ್ಯಾಲಯದಲ್ಲಿ ಎರಡು ಬ್ಯಾಚ್ಗಳು ಶಿಕ್ಷಣ ಪೂರೈಸಿವೆ. ಈಗಾಗಲೇ ಮೂರನೇ ಬ್ಯಾಚ್ನ ಸಂಗೀತ ಶಿಕ್ಷಣ ಪ್ರಾರಂಭಗೊಂಡಿತ್ತು. ಈ ಸಮಯದಲ್ಲಿ ಮೈಸೂರು ವಿಶ್ವವಿದ್ಯಾಲಯದ ಅನುದಾನ ಕೊರತೆಯ ನೆಪವೊಡ್ಡಿ, ಅಲ್ಲಿನ ವಿದ್ಯಾರ್ಥಿಗಳ ಶೈಕ್ಷಣಿಕ ಜೀವನದೊಂದಿಗೆ ಚೆಲ್ಲಾಟವಾಡುತ್ತಿದೆ. ಸರ್ಕಾರ ಇದರತ್ತ ಗಮನ ಹರಿಸಬೇಕು ಎಂದು ಆಗ್ರಹಿಸಿದರು.
ಕಳೆದ ಅಧಿವೇಶನದಲ್ಲಿಯೂ ಡಾ. ಗಂಗೂಬಾಯಿ ಹಾನಗಲ್ ಗುರುಕುಲದ ಬಗ್ಗೆ ಮಾತನಾಡಿದ್ದನ್ನು ಸ್ಮರಿಸಿದ ಶಾಸಕ ಮಹೇಶ ಟೆಂಗಿನಕಾಯಿ, ಆ ಸಮಯದಲ್ಲಿ ಈ ಗುರುಕುಲವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸುಪರ್ದಿಗೆ ನೀಡುವಂತೆ ಆಗ್ರಹಿಸಿದ್ದನ್ನು ಸದನಕ್ಕೆ ನೆನಪಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಅವರಿಗೆ ಪತ್ರ ಬರೆದು, ಅವರನ್ನು ಖುದ್ದಾಗಿ ಭೇಟಿಯಾಗಿದ್ದನ್ನು, ನಂತರ ಸಚಿವ ತಂಗಡಗಿ ಅವರೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿದ್ದನ್ನು ಸಹ ಶಾಸಕ ಟೆಂಗಿನಕಾಯಿ ನೆನಪಿಸಿಕೊಂಡರು.
ಆ ಸಂದರ್ಭದಲ್ಲಿ ಡಾ. ಗಂಗೂಬಾಯಿ ಹಾನಗಲ್ ಗುರುಕುಲವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಹಸ್ತಾಂತರಿಸಲು ಮುಖ್ಯಮಂತ್ರಿ ಅವರು ಸಹ ಒಪ್ಪಿದ್ದರು. ಆದರೆ, ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಈ ಗುರುಕುಲವನ್ನು ನಿರ್ವಹಣೆಗಾಗಿ ಉನ್ನತ ಶಿಕ್ಷಣ ಇಲಾಖೆಗೆ ಹಸ್ತಾಂತರಿಸಲಾಯಿತು. ಉನ್ನತ ಶಿಕ್ಷಣ ಇಲಾಖೆಯು ಗುರುಕುಲವನ್ನು ಮೈಸೂರು ಗಂಗೂಬಾಯಿ ಹಾನಗಲ್ ವಿವಿಗೆ ಹಸ್ತಾಂತರಿಸಿತು ಎಂದು ಟೆಂಗಿನಕಾಯಿ ಸದನದ ಗಮನ ಸೆಳೆದರು.
ಶಾಸಕ ಮಹೇಶ ಟೆಂಗಿನಕಾಯಿ ಅವರ ಕಳಕಳಿಗೆ ವಿಧಾನಸಭೆ ವಿರೋಧ ಪಕ್ಷದ ಉಪ ನಾಯಕ ಅರವಿಂದ ಬೆಲ್ಲದ, ಶಾಸಕರಾದ ಪ್ರಸಾದ ಅಬ್ಬಯ್ಯ, ಎನ್.ಎಚ್. ಕೋನರಡ್ಡಿ ಹಾಗೂ ಮೈಸೂರು ಶಾಸಕ ಶ್ರೀವತ್ಸ ಅವರು ಸಹ ಬೆಂಬಲ ವ್ಯಕ್ತಪಡಿಸಿದರು.