ಗಂಗೂಬಾಯಿ ಹಾನಗಲ್​ ರಾಷ್ಟ್ರೀಯ ಪ್ರಶಸ್ತಿ ಪ್ರದಾನ

11 vikram 9
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ನಗರದ ಭಾರತೀಯ ಸಂಗೀತ ವಿದ್ಯಾಲಯ, ದಾಸ ಟ್ರಸ್ಟ್​ ಹಾಗೂ ಗಂಗೂಬಾಯಿ ಸಂಗೀತ ವಿದ್ಯಾಲಯ ವತಿಯಿಂದ ಇಲ್ಲಿನ ಸೃಜನಾ ರಂಗ ಮಂದಿರದಲ್ಲಿ ಭಾನುವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಗಂಗೂಬಾಯಿ ಹಾನಗಲ್​ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಅಂತಾರಾಷ್ಟ್ರೀಯ ಬಾನ್ಸುರಿ ವಾದಕ ಪಂ. ರಾಕೇಶ ಚೌರಾಸಿಯಾ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪ್ರಶಸ್ತಿಯು 65 ಸಾವಿರ ರೂ. ನಗದು ಹಾಗೂ ಸ್ಮರಣಿಕೆ ಒಳಗೊಂಡಿದೆ.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಪಂ. ರಾಕೇಶ ಚೌರಾಸಿಯಾ ಮಾತನಾಡಿ, ಸರ್ಕಾರಗಳು ಸಂಗೀತ ಸಾಧಕರಿಗೆ ಪ್ರಶಸ್ತಿ ನೀಡುತ್ತವೆ. ಆದರೆ ಹಾನಗಲ್​ ಸಂಗೀತ ಕುಟುಂಬದಿಂದ ಪ್ರಶಸ್ತಿ ಲಭಿಸಿದ್ದು ಖುಷಿ ತಂದಿದೆ. ಅದರಲ್ಲೂ ಸಂಗೀತದ ತವರು ಎಂದು ಪ್ರಸಿದ್ಧವಾದ ಧಾರವಾಡದಲ್ಲಿ ಪ್ರಶಸ್ತಿ ಸ್ವೀಕರಿಸಿದ್ದು ಖುಷಿ ಹೆಚ್ಚಿಸಿದೆ ಎಂದರು.
ಪ್ರಶಸ್ತಿ ಪ್ರದಾನ ಮಾಡಿದ ಡಾ. ಎಂ.ಎಂ. ಜೋಶಿ ಮಾತನಾಡಿ, ಸಂಗೀತ ಆರೋಗ್ಯಕ್ಕೆ ಒಳ್ಳೆಯದು. ಹೀಗಾಗಿ ಆರೋಗ್ಯ ಪ್ರಿಯರು ತಪ್ಪದೆ ನಿತ್ಯವೂ ಸಂಗೀತ ಆಲಿಸುವುದು ಒಳಿತು. ಇದು ನನ್ನ ಅನುಭವವೂ ಹೌದು. ಹೀಗಾಗಿ ನಿತ್ಯ ಸಂಗೀತ ಆಲಿಸುತ್ತೇನೆ ಎಂದರು.
ಭಾರತೀಯ ಸಂಗೀತ ವಿದ್ಯಾಲಯದ ಅಧ್ಯಕ್ಷೆ ಸೌಭಾಗ್ಯ ಕುಲಕರ್ಣಿ, ಕಾರ್ಯದರ್ಶಿ ವಿನಯ ನಾಯಕ, ಮಹೇಶ ಹಾನಗಲ್​, ಶಫೀಕ್​ ಖಾನ್​, ಧರ್ಮದಾಸ, ಇತರರು ಇದ್ದರು.
ಬಳಿಕ ಪಂ. ರಾಕೇಶ ಚೌರಾಸಿಯಾ ಕೊಳಲು ವಾದನ ಪ್ರಸ್ತುತಪಡಿಸಿದರು. ಅವರಿಗೆ ಓಜಸ್​ ಅದಿಯಾ ತಬಲಾ ಸಾಥ್​ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net