

ಗಂಗೊಳ್ಳಿ: ಜಾನುವಾರುಗಳನ್ನು ಅಮಾನುಷವಾಗಿ ಹತ್ಯೆಗೈಯ್ಯುವುದನ್ನು ಚಿತ್ರೀಕರಿಸಿ, ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟು ವಿಕೃತಿ ಮೆರೆದಿರುವುದನ್ನು ಖಂಡಿಸಿ ಹಾಗೂ ಗೋ ಹಂತಕರನ್ನು ಗಡೀಪಾರು ಮಾಡಲು ಒತ್ತಾಯಿಸಿ ಗಂಗೊಳ್ಳಿ ಹಿಂದು ಜಾಗರಣ ವೇದಿಕೆ ನೇತೃತ್ವದಲ್ಲಿ ಶುಕ್ರವಾರ ಬೃಹತ್ ಪ್ರತಿಭಟನಾ ಜಾಥಾ ಮತ್ತು ಸಭೆ ಜರುಗಿತು.
ಹಿಂದು ಜಾಗರಣ ವೇದಿಕೆ ಕರೆ ನೀಡಿದ್ದ ಸ್ವಯಂಪ್ರೇರಿತ ಗಂಗೊಳ್ಳಿ ಬಂದ್‌ಗೆ ಉತ್ತಮ ಬೆಂಬಲ ವ್ಯಕ್ತವಾಗಿದ್ದು, ಬೆಂಬಲವಾಗಿ ಇಡೀ ಪೇಟೆಯೇ ಬಂದ್ ಆಗಿತ್ತು. ಖಾಸಗಿ ಮತ್ತು ಕೆಎಸ್‌ಆರ್‌ಟಿಸಿ ಬಸ್, ರಿಕ್ಷಾ, ಕಾರು ಇತ್ಯಾದಿ ವಾಹನಗಳು ರಸ್ತೆಗಿಳಿಯಲಿಲ್ಲ. ಮೀನುಗಾರರೂ ಚಟುವಟಿಕೆ ಸ್ಥಗಿತಗೊಳಿಸಿದ್ದರು.
ಪ್ರತಿಭಟನಾ ಜಾಥಾ ಬಳಿಕ ಗಂಗೊಳ್ಳಿ ಶ್ರೀ ವೀರೇಶ್ವರ ದೇವಸ್ಥಾನ ವಠಾರದಲ್ಲಿ ಪ್ರತಿಭಟನಾ ಸಭೆ ನಡೆಯಿತು. ಹಿಂಜಾವೇ ಕರ್ನಾಟಕ ದಕ್ಷಿಣ ಪ್ರಾಂತ ಪ್ರಧಾನ ಕಾರ್ಯದರ್ಶಿ ಟಿ.ಕೆ.ಉಲ್ಲಾಸ್ ಮಾತನಾಡಿ, ವಿಡಿಯೋ ವೈರಲ್ ವಿಚಾರದಲ್ಲಿ ಹಿಂದುಗಳು ಕೇಸ್ ದಾಖಲು ಮಾಡುವ ಅನಿವಾರ್ಯತೆ ಇರಲಿಲ್ಲ. ಪೊಲೀಸರೇ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿ ಗೂಂಡಾ ಕಾಯ್ದೆಯಡಿ ಗಡೀಪಾರು ಮಾಡಬಹುದಿತ್ತು. ಗೋ ರಕ್ಷಣೆ ಮಾಡುವವರ ವಿರುದ್ಧ ಕೇಸು ದಾಖಲಿಸುವ ಪೊಲೀಸರು, ಗೋ ಕಳ್ಳರ ವಿರುದ್ಧ ಕೇಸು ದಾಖಲಿಸಲು
ಹಿಂದೆ ಮುಂದೆ ಯೋಚಿಸುತ್ತಾರೆ. ಮಾತೃ ಸ್ವರೂಪಿ ಗೋವನ್ನು ಕೊಲ್ಲುವುದು ತಾಯಿಯನ್ನೇ ಕೊಂದ ಹಾಗೆ. ಹಿಂದುಗಳ ಮನೆಗೆ ನುಗ್ಗಿ ತಲವಾರು ತೋರಿಸಿ, ದನಗಳನ್ನು ಕದಿಯುವವರ ವಿರುದ್ಧ ಕಾನೂನು ಕ್ರಮ ಜರಗಿಸಬೇಕು ಎಂದು ಆಗ್ರಹಿಸಿದರು.
ಹಿಂದು ಜಾಗರಣ ವೇದಿಕೆ ಮಂಗಳೂರು ವಿಭಾಗ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಕುಕ್ಕೆಹಳ್ಳಿ, ಉಡುಪಿ ಜಿಲ್ಲಾಧ್ಯಕ್ಷ ಪ್ರಶಾಂತ್ ನಾಯಕ್, ಗಂಗೊಳ್ಳಿ ಅಧ್ಯಕ್ಷ ಗೋವಿಂದ ಶೇರುಗಾರ್, ಮುಖಂಡರಾದ ವಾಸುದೇವ ಗಂಗೊಳ್ಳಿ, ನವೀನ್ ಗಂಗೊಳ್ಳಿ, ಯಶವಂತ್ ಗಂಗೊಳ್ಳಿ, ಮಹೇಶ್ ಬೈಂದೂರು ಮತ್ತಿತರರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.
ಉಡುಪಿ ಎಎಸ್ಪಿ ಕುಮಾರಚಂದ್ರ ಮತ್ತು ಕುಂದಾಪುರ ಡಿವೈಎಸ್ಪಿ ಶ್ರೀಕಾಂತ್ ಮಾರ್ಗದರ್ಶನದಲ್ಲಿ ಬೈಂದೂರು ಪೊಲೀಸ್ ವೃತ್ತ ನಿರೀಕ್ಷಕ ಸಂತೋಷ ಕಾಯ್ಕಿಣಿ ನೇತೃತ್ವದಲ್ಲಿ ಪೊಲೀಸ್ ಉಪನಿರೀಕ್ಷಕ ನಂಜಾ ನಾಯ್ಕ, ಜಿಲ್ಲೆಯ ವಿವಿಧ ಸರ್ಕಲ್ ಇನ್‌ಸ್ಪೆಕ್ಟರ್ ಮತ್ತು ಉಪನಿರೀಕ್ಷಕರು ಬಂದೋಬಸ್ತ್ ಮಾಡಿದ್ದರು.
ಪ್ರತಿಭಟನಾ ಪಾದಯಾತ್ರೆ
ಗಂಗೊಳ್ಳಿ ಬಂದರು ಪೋರ್ಟ್ ಆಫೀಸ್ ಸಮೀಪದಿಂದ ರಾಮ ಮಂದಿರ ಮಾರ್ಗವಾಗಿ ಸಾಗಿದ ಪ್ರತಿಭಟನಾ ಪಾದಯಾತ್ರೆ ಶ್ರೀ ವೀರೇಶ್ವರ ದೇವಾಲಯ ಬಳಿ ಸಂಪನ್ನಗೊಂಡಿತು. ನೂರಾರು ಮಹಿಳೆಯರು, ಮಕ್ಕಳು ಸೇರಿ ಸಾವಿರಾರು ಜನ ಜಾಥಾದಲ್ಲಿ ಪಾಲ್ಗೊಂಡಿದ್ದರು. ಗೋ ಹಂತಕರ ಬಂಧನ ಮತ್ತು ಗಡೀಪಾರಿಗೆ ಒತ್ತಾಯಿಸಿ ಕುಂದಾಪುರ ತಹಸೀಲ್ದಾರ್ ಕಿರಣ್ ಗೌರಯ್ಯ ಅವರಿಗೆ ಮನವಿ ಸಲ್ಲಿಸಲಾಯಿತು.
ಮಾತಿನ ಚಕಮಕಿ
ಪ್ರತಿಭಟನಾ ಮೆರವಣಿಗೆ ಮೇಲ್‌ಗಂಗೊಳ್ಳಿ ಸಮೀಪ ಸಾಗುತ್ತಿರುವಾಗ ರಾಮ್ ಪೈ ಮಠ ರಸ್ತೆಯ ಬಳಿ ಸುಮಾರು 50 ಮಂದಿಯಿದ್ದ ಅನ್ಯಕೋಮಿನ ಗುಂಪು ಮಾತಿನ ಚಕಮಕಿಗೆ ಇಳಿಯಿತು. ಈ ವೇಳೆ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಯಿತು. ಎಎಸ್ಪಿ ಕುಮಾರಚಂದ್ರ ಮತ್ತು ಕುಂದಾಪುರ ಡಿವೈಎಸ್ಪಿ ಶ್ರೀಕಾಂತ್ ನೇತೃತ್ವದ ಪೊಲೀಸರ ತಂಡ ಮಧ್ಯ ಪ್ರವೇಶಿಸಿ, ಪರಿಸ್ಥಿತಿ ವೀಕೋಪಕ್ಕೆ ತಿರುಗದಂತೆ ನಿಯಂತ್ರಿಸಿದರು.
ರಾಜ್ಯ ಸರ್ಕಾರ ಗೋ ಹತ್ಯೆ ನಿಷೇಧ ಕಾಯ್ದೆ ಜಾರಿಗೆ ತಂದಿದ್ದರೂ ಗಂಗೊಳ್ಳಿ ಠಾಣೆಗೆ ಅದರ ಬಗ್ಗೆ ಮಾಹಿತಿ ಇದ್ದಂತಿಲ್ಲ. ಅಕ್ರಮ ಮಸೀದಿಗಳನ್ನು ತೆರವುಗೊಳಿಸುವ ಕೆಲಸವನ್ನೂ ಜಿಲ್ಲಾಡಳಿತ ಮಾಡಬೇಕು. ಹಿಂದು ಸಮಾಜ ನೀಚ ಕೃತ್ಯಗಳ ವಿರುದ್ಧ ಒಗ್ಗಟ್ಟಾಗಿ ಹೋರಾಡಲು ಸಜ್ಜಾಗಿದೆ. ಮಸೀದಿಗಳಲ್ಲಿ ಲೌಡ್‌ಸ್ಪೀಕರ್ ಹಾಕಿ ಕೂಗುವುದರಿಂದ ಎಲ್ಲರಿಗೂ ಸಮಸ್ಯೆಯಾಗುತ್ತಿದೆ. ಈ ಬಗ್ಗೆಯೂ ಸರ್ಕಾರ ಗಮನ ಹರಿಸಲಿ.
ಟಿ.ಕೆ.ಉಲ್ಲಾಸ್, ಹಿಂಜಾವೇ ಕರ್ನಾಟಕ ದಕ್ಷಿಣ ಪ್ರಾಂತ ಪ್ರಧಾನ ಕಾರ್ಯದರ್ಶಿ