

ಗಂಗಾವತಿ: ಜಾತ್ಯತೀತ ರಾಷ್ಟ್ರ ಎನ್ನುವ ರಾಜ್ಯ ಸರ್ಕಾರ ಜಾತಿ ಗಣತಿಗೆ ಮುಂದಾಗಿದ್ದು, ರಾಜಕಾರಣಿಗಳು ಒಪ್ಪಿಗೆ ನೀಡುತ್ತಿರುವುದು ಸರಿಯಲ್ಲ ಎಂದು ಅಯೋಧ್ಯೆ ಶ್ರೀರಾಮ ಜನ್ಮಭೂಮಿ ಟ್ರಸ್ಟ್ ಸದಸ್ಯ ಹಾಗೂ ಪೇಜಾವರ ಅಧೋಕ್ಷಜ ಮಠದ ಪೀಠಾಧಿಪತಿ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.
ನಗರದ ರಾಯರ ಮಠಕ್ಕೆ ಮಂಗಳವಾರ ಭೇಟಿ ನೀಡಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಜಾತ್ಯತೀತ ರಾಷ್ಟ್ರ ಎಂದು ಹೇಳಿಕೊಳ್ಳುವ ಸಂದರ್ಭದಲ್ಲಿ ಜಾತಿಗಣತಿ ಮೂಲಕ ಜಾತಿ ಹುಡುಕುತ್ತಿರುವುದು ಜನವಿರೋಧಿ ನೀತಿಯಾಗಿದೆ.
ಗಣತಿ ಮೂಲಕ ಕೆಲ ಸಮುದಾಯವನ್ನು ಹತ್ತಿಕ್ಕುವ ಷಡ್ಯಂತ್ರ ನಡೆಯುತ್ತಿದ್ದು, ಈ ಬಗ್ಗೆ ಪರಿಶೀಲಿಸುವುದು ಸೂಕ್ತ. ಜಾತಿ ಹೊಗಲಾಡಿಸುವಂತ ಕ್ರಮ ಕೈಗೊಳ್ಳಬೇಕೆ ಹೊರತು, ಗಣತಿ ಮೂಲಕ ಜಾತಿ ವ್ಯವಸ್ಥೆ ಬಲಗೊಳಿಸಲೆತ್ನಿಸುತ್ತಿರುವುದು ಸರಿಯಲ್ಲ.
ಅಯೋಧ್ಯೆಯಲ್ಲಿ ಶ್ರೀರಾಮಮಂದಿರವಾಗಿದ್ದು, ಮೂರ್ತಿ ಪ್ರತಿಷ್ಠಾಪನೆಯೂ ಮುಗಿದಿದೆ. ನೀಲಿನಕ್ಷೆಯಂತೆ ಇನ್ನಷ್ಟು ಕಾಮಗಾರಿ ಬಾಕಿಯಿದ್ದು, ಹಂತಹಂತವಾಗಿ ಕೈಗೆತ್ತಿಕೊಳ್ಳಲಾಗುವುದು. ಧರ್ಮ ಮತ್ತು ಅಧ್ಯಾತ್ಮ ಕಾರ್ಯಕ್ರಮಗಳು ಹೆಚ್ಚಾದಂತೆಲ್ಲ ನೆಮ್ಮದಿ ಸಾಧ್ಯ ಎಂದರು.
ನಂತರ ತಾಲೂಕಿನ ಮರಳಿಯ ಸುಶಮೀಂದ್ರ ತೀರ್ಥರ ತಪೋವನದಲ್ಲಿ ಸಂಸ್ಥಾನ ಪೂಜೆ ಮತ್ತು ಲಮಂತ್ರಾಕ್ಷತೆ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಶ್ರೀಗಳ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಜರುಗಿದ್ದು, ವಿಶೇಷ ಹೋಮದ ಪೂರ್ಣಾಹುತಿ ನೆರವೇರಿಸಲಾಯಿತು.
ಧಾರವಾಡದಿಂದ ಬಂದಿರುವ ಮಂತ್ರಾಲಯ ಪಾದಯಾತ್ರೆಗಳಿಗೆ ಆಶೀರ್ವಚನ ಹಮ್ಮಿಕೊಳ್ಳಲಾಗಿತ್ತು. ಬಳಿಕ ತೀರ್ಥ ಪ್ರಸಾದ ವಿತರಿಸಲಾಯಿತು. ಸಂಸ್ಕಾರ ಮತ್ತು ಸಂಸ್ಕೃತಿ ಮುಂದುವರಿಸಲು ಧರ್ಮಾಚರಣೆಗಳು ಪೂರಕ ಎಂದರು.
ರಾಯರ ಮಠದ ವಿಚಾರಣಕರ್ತ ರಾಮಕೃಷ್ಣ ಜಹಗೀರದಾರ್, ವ್ಯವಸ್ಥಾಪಕ ಗುರುರಾಜ್ ಸಾಮವೇದ, ವಿದ್ಯಾನಿಕೇತನ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ನೆಕ್ಕಂಟಿ ಸೂರಿಬಾಬು, ನಗರಸಭೆ ಮಾಜಿ ಸದಸ್ಯ ಶ್ಯಾಮಾಚಾರ್ ಜೋಶಿ, ವಿಪ್ರ ಸಮಾಜದ ಮುಖಂಡರಾದ ಉದಯ ಜಹಗೀರದಾರ್, ಹನುಮಂತರಾವ್ ಕುಲ್ಕರ್ಣಿ, ಶ್ರೀನಿವಾಸ ಹೇರೂರು ಇತರರಿದ್ದರು.