ಕುಡಿವ ನೀರಿನ ಮುಂಜಾಗ್ರತೆ ಕ್ರಮ ಕೈಗೊಳ್ಳಿ

05 gvt 07
ಗಂಗಾವತಿ ತಾಪಂ ಮಂಥನ ಸಭಾಂಗಣದಲ್ಲಿ ತಾಲೂಕು ಆಡಳಿತದಿಂದ ಆಯೋಜಿಸಿದ್ದ ಕುಡಿವ ನೀರು ಮತ್ತು ಬರಗಾಲ ನಿರ್ವಹಣೆ ತಾಲೂಕು ಮಟ್ಟದ ಪ್ರಗತಿ ಪರಿಶೀಲನೆ ಸಭೆಯಲ್ಲಿ ಎಸಿ ಬಸವಣ್ಣೆಪ್ಪ ಕಲ್ಲಶೆಟ್ಟಿ ಮಾತನಾಡಿದರು. ತಹಸೀಲ್ದಾರ್ ಮಂಜುನಾಥ ಭೋಗಾವತಿ, ಪೌರಾಯುಕ್ತ ಆರ್. ವಿರೂಪಾಕ್ಷಮೂರ್ತಿ ಇತರರಿದ್ದರು
Published on

ಗಂಗಾವತಿ: ಬೇಸಿಗೆ ಅವಧಿಯಲ್ಲಿ ಕುಡಿವ ನೀರಿನ ವ್ಯವಸ್ಥೆ ಸಮರ್ಥವಾಗಿ ನಿಭಾಯಿಸಬೇಕಿದ್ದು, ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳುವಂತೆ ಎಸಿ ಬಸವಣ್ಣೆಪ್ಪ ಕಲ್ಲಶೆಟ್ಟಿ ಹೇಳಿದರು.

ನಗರದ ತಾಪಂ ಮಂಥನ ಸಭಾಂಗಣದಲ್ಲಿ ತಾಲೂಕು ಆಡಳಿತದಿಂದ ಬುಧವಾರ ಆಯೋಜಿಸಿದ್ದ ಕುಡಿವ ನೀರು ಮತ್ತು ಬರಗಾಲ ನಿರ್ವಹಣೆ ತಾಲೂಕು ಮಟ್ಟದ ಪ್ರಗತಿ ಪರಿಶೀಲನೆ ಸಭೆಯಲ್ಲಿ ಬುಧವಾರ ಮಾತನಾಡಿದರು.

ಈ ಹಿಂದೆ ಇದ್ದ ನೀರಿನ ಸಮಸ್ಯೆ ಸದ್ಯಕ್ಕಂತೂ ಇಲ್ಲ. ಮುಂದಿನ ಮೂರು ತಿಂಗಳವರೆಗೆ ನೀರಿನ ಸಮಸ್ಯೆ ಎದುರಾಗದಂತೆ ಯೋಜನೆ ರೂಪಿಸಬೇಕಿದ್ದು, ಪರ್ಯಾಯ ಕ್ರಮ ಕೈಗೊಳ್ಳಬೇಕು. ಸಮಸ್ಯಾತ್ಮಕ ಗ್ರಾಮಗಳಲ್ಲಿ ತ್ವರಿತ ವ್ಯವಸ್ಥೆಗೆ ಮುಂದಾಗಬೇಕು. ಟ್ಯಾಂಕರ್ ಬಳಸದೇ ಭೂ ಮಾಲೀಕರಿಂದ ಬೋರ್ ವೆಲ್ ಬಾಡಿಗೆ ಪಡೆದು ನೀರು ಪೂರೈಸಬೇಕು. ಜಾನುವಾರುಗಳಿಗೆ ನೀರು ಮತ್ತು ಮೇವು ಸಮಸ್ಯೆ ಎದುರಾಗದಂತೆ ಎಚ್ಚರವಹಿಸುವಂತೆ ಸಲಹೆ ನೀಡಿದರು.

ತಹಸೀಲ್ದಾರ್ ಮಂಜುನಾಥ ಭೋಗಾವತಿ ಮಾತನಾಡಿ, ತಾಲೂಕಿನ 8 ಗ್ರಾಮಗಳು ಸಮಸ್ಯಾತ್ಮಕ ಪಟ್ಟಿಯಲ್ಲಿದ್ದು, ವಿಠಲಾಪುರ, ಕಡೇಬಾಗಿಲು, ಹಂಪಸದುರ್ಗಾ, ಭಟ್ಟರನರಸಾಪುರ, ಶ್ರೀರಾಮನಗರ, ಚಿಕ್ಕಬೆಣಕಲ್ ಹಾಗೂ ಮರಳಿ ಗ್ರಾಪಂ ವ್ಯಾಪ್ತಿಯ ಬಸವಣ್ಣ ಕ್ಯಾಂಪ್ ನಲ್ಲಿ ನೀರಿನ ಸಮಸ್ಯೆ ಇದೆ. ಆರ್‌ಡಬ್ಲ್ಯುಎಸ್ ಹಾಗೂ ಗ್ರಾಪಂ ಸಿಬ್ಬಂದಿ ಅಲರ್ಟ್ ಆಗಬೇಕಿದ್ದು, ಪರಿಹಾರ ಕಂಡುಕೊಳ್ಳಬೇಕು. ನಗರ ಪ್ರದೇಶದಲ್ಲಿ 15 ದಿನಕ್ಕೊಮ್ಮೆ ನೀರಿನ ಪರೀಕ್ಷೆ ಮಾಡಿಸಬೇಕು. ಸ್ಥಗಿತಗೊಂಡ ಆರ್‌ಓ ಪ್ಲಾಂಟ್‌ಗಳನ್ನು ಕೂಡಲೇ ದುರಸ್ತಿ ಕೈಗೊಳ್ಳಿ ಎಂದರು.

ತಾಪಂ ಇಒ ಮಹಾಂತಗೌಡ ಪಾಟೀಲ್ ಮಾತನಾಡಿ, ಕುಡಿವ ನೀರಿನ ಮೇಲ್ತೊಟ್ಟಿಗಳ ಸ್ವಚ್ಛತೆಗೆ ಆದ್ಯತೆ ನೀಡಬೇಕಿದ್ದು, 15ನೇ ಹಣಕಾಸು ಯೋಜನೆ ಅನುದಾನದಡಿ ಕಾಮಗಾರಿ ಕೈಗೆತ್ತಿಕೊಳ್ಳಿ ಎಂದರು.

ಪೌರಾಯುಕ್ತ ಆರ್.ವಿರೂಪಾಕ್ಷಮೂರ್ತಿ, ಸಹಾಯಕ ಕೃಷಿ ನಿರ್ದೇಶಕ ಸಂತೋಷ ಪಟ್ಟದಕಲ್ ಸೇರಿ ವಿವಿಧ ಇಲಾಖೆ ಅಧಿಕಾರಿಗಳು, ಗ್ರಾಪಂ ಪಿಡಿಒ ಮತ್ತು ಕಾರ್ಯದರ್ಶಿಗಳು ಭಾಗವಹಿಸಿದ್ದರು. ಚುನಾವಣೆ ಸಂಬಂಧಿತ ವಿಷಯಗಳ ಬಗ್ಗೆ ಚರ್ಚಿಸಿದ್ದು, ಹಳ್ಳಿಗಳಲ್ಲಿ ಮತದಾನದ ಬಗ್ಗೆ ಜಾಗೃತಿ ಮೂಡಿಸುವಂತೆ ಸಲಹೆ ನೀಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net