

ಗಂಗಾವತಿ: ನಗರದ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿಗೆ ಕಳಪೆ ಎಲೆಕ್ಟ್ರಾನಿಕ್ ವಸ್ತುಗಳನ್ನು ನೀಡಿರುವ ಮತ್ತು ಕೆಲವೊಂದು ವಸ್ತುಗಳನ್ನು ನೀಡದಿರುವ ಆರೋಪದಡಿ ಜಿಪಂ ಇಂಜಿನಿಯರಿಂಗ್ ವಿಭಾಗದ ಪ್ರಭಾರ ಎಇಇ ಪಿ.ವಿಜಯಕುಮಾರ ಮತ್ತು ಕೊಪ್ಪಳ ಎಇ ಸತ್ಯಪ್ಪ ಅವರನ್ನು ಅಮಾನತು ಮಾಡಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ಇಲಾಖೆ ಅಧೀನ ಕಾರ್ಯದರ್ಶಿ ಎಂ.ಚೇತನ್ ಆದೇಶ ಹೊರಡಿಸಿದ್ದಾರೆ.
ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿಗೆ 2023ರಲ್ಲಿ ಮೂರು ಕಾಮಗಾರಿಗಳ ನಿರ್ವಹಣೆಗೆ ನಿರ್ಣಯ ಪಡೆದುಕೊಳ್ಳಲಾಗಿತ್ತು. ಸಿವಿಲ್, ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್, ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ವಿಭಾಗಕ್ಕೆ ಪ್ರಯೋಗಾಲಯ ಉಪಕರಣಗಳು, ಗ್ರಂಥಾಲಯಕ್ಕೆ ಪೀಠೋಪಕರಣಗಳು ಮತ್ತು ಪುಸ್ತಕ ಒದಗಿಸುವ ಕುರಿತು 68.40 ಲಕ್ಷ ರೂ. ಅನುದಾನಕ್ಕೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿತ್ತು. 2024ರಲ್ಲಿ ಕಾರ್ಯಾದೇಶ ನೀಡಿದ್ದು, 6 ತಿಂಗಳ ಕಾಲಾವಕಾಶ ನೀಡಲಾಗಿತ್ತು. ಉದ್ದೇಶಿತ ಅನುದಾನದಲ್ಲಿ ಒಟ್ಟು 90 ವಸ್ತುಗಳ ಪೈಕಿ 82 ವಸ್ತುಗಳನ್ನು ಮಾತ್ರ ನೀಡಿದ್ದು, ಉಳಿದವುಗಳನ್ನು ನೀಡಿಲ್ಲ. ಪ್ರಯೋಗಾಲಯಕ್ಕೆ ಒದಗಿಸಿರುವ 47 ಯಂತ್ರೋಕರಣಗಳಲ್ಲಿ 18ರಲ್ಲಿ ನ್ಯೂನತೆ ಕಂಡು ಬಂದಿವೆ. ಅದರಂತೆ 7 ಉಪಕರಣಗಳನ್ನು ಸಮರ್ಪಕ ರೀತಿಯಲ್ಲಿ ನಿರ್ವಹಿಸದ ಪರಿಣಾಮ ನಿರುಪಯುಕ್ತವಾಗಿವೆ. ಯಂತ್ರೋಪಕರಣ ಸೇರಿ ಇತರ ವಸ್ತುಗಳ ಪೂರೈಕೆಯಲ್ಲಿ ಲೋಪದೋಷಗಳಿದ್ದು ಮತ್ತು ಕರ್ತವ್ಯಲೋಪ ಎಸಗಿರುವುದು ಕಂಡು ಬಂದ ಹಿನ್ನೆಲೆಯಲ್ಲಿ ಇಬ್ಬರನ್ನು ಅಮಾನತು ಮಾಡಲಾಗಿದ್ದು, ಕೇಂದ್ರ ಸ್ಥಾನ ಬಿಡದಂತೆ ಆದೇಶ ಪತ್ರದಲ್ಲಿ ತಿಳಿಸಲಾಗಿದೆ.