

ಗಂಗಾವತಿ: ಪರಂಪರೆ ಮತ್ತು ಸಂಸ್ಕೃತಿ ಬಿಂಬಿಸುವ ಪ್ರವಾಸೋದ್ಯಮದಿಂದ ಪೂರಕ ಅಭಿವೃದ್ಧಿ ಸಾಧ್ಯವಿದ್ದು, ಆರ್ಥಿಕ ಬೆಳವಣಿಗೆಗೆ ಕಾರಣವಾಗಲಿದೆ ಎಂದು ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ಡಿ.ನಾಗರಾಜ್ ಹೇಳಿದರು.
ನಗರದ ಕೆಕೆಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಗಂಗಾವತಿ ಚಾರಣ ಬಳಗ ಮತ್ತು ಪ್ರವಾಸೋದ್ಯಮ ಇಲಾಖೆ ಶನಿವಾರ ಹಮ್ಮಿಕೊಂಡಿದ್ದ ವಿಶ್ವ ಪ್ರವಾಸೋದ್ಯಮ ದಿನಾಚರಣೆಯಲ್ಲಿ ಮಾತನಾಡಿದರು.
ಪ್ರವಾಸೋದ್ಯಮ ಬೆಳೆದಂತೆಲ್ಲ ಉದ್ಯೋಗ ಸೃಷ್ಟಿಯಾಗಲಿದ್ದು, ಇತಿಹಾಸ ಸಂರಕ್ಷಣೆಗೆ ಅನುಕೂಲವಾಗಲಿದೆ. ಆನೆಗೊಂದಿ ವ್ಯಾಪ್ತಿಯಲ್ಲಿ ಪ್ರವಾಸೋದ್ಯಮ ಪೂರಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಚಾರಣ ಬಳಗದ ಮುಖ್ಯಸ್ಥ ಡಾ.ಶಿವಕುಮಾರ ಮಾ. ಪಾಟೀಲ್ ಮಾತನಾಡಿ, ವಿರೂಪಗೊಂಡಿದ್ದ ಬಸ್ ನಿಲ್ದಾಣದ ಮಹಿಳಾ ವಿಶ್ರಾಂತಿ ಕೊಠಡಿಯನ್ನು ಇತಿಹಾಸದ ಮಾಹಿತಿಯೊಂದಿಗೆ ಅಲಂಕರಿಸಲಾಗಿದ್ದು, ಜಿಲ್ಲೆಯ ಐತಿಹಾಸಿಕ ಸ್ಥಳಗಳ ೆಟೋ ಮತ್ತು ಸಮಗ್ರ ಮಾಹಿತಿಯನ್ನು ಬಸ್ ನಿಲ್ದಾಣದಲ್ಲಿ ಹಾಕಲಾಗಿದೆ. ಇದು ಯುವ ಪೀಳಿಗೆಗೆ ಇತಿಹಾಸ ತಿಳಿಸುವ ಪ್ರಯತ್ನ ಎಂದರು.
ತಹಸೀಲ್ದಾರ್ ಯು.ನಾಗರಾಜ್, ಉಪತಹಸೀಲ್ದಾರ್ ಪ್ರಕಾಶ ನಾಯ್ಕ, ಕೆಕೆಆರ್‌ಟಿಸಿ ಘಟಕ ವ್ಯವಸ್ಥಾಪಕ ರಾಜಶೇಖರ್ ಅಣ್ಣಿಗೇರಿ, ಸಂಶೋಧಕ ಡಾ.ಶರಣಬಸಪ್ಪ ಕೋಲ್ಕಾರ್, ನಗರ ಸಂಚಾರ ಪಿಎಸ್‌ಐ ಶಾರದಾ, ನಿವೃತ್ತ ಪ್ರಾಚಾರ್ಯ ಪ್ರೊ.ಎ್.ಎಚ್. ಚಿತ್ರಗಾರ, ಬಳಗದ ಪ್ರಮುಖರಾದ ಪ್ರಹ್ಲಾದ್ ಕುಲಕರ್ಣಿ, ಶಿವಪ್ಪ ಗಾಳಿ, ಪ್ರೋ.ಸುಂಕೇಶ್ವರ ಕರಿಗೂಳಿ, ಮಹಮ್ಮದ್ ರಫಿ, ಉಲ್ಲಾಸ್, ರಮೇಶ್ ಗಬ್ಬೂರ್, ಮಹಾಲಕ್ಷ್ಮೀ ಕೇಸರಹಟ್ಟಿ, ಶಾಹೀನ್ ಕೌಸರ್, ಟಿ. ಆಂಜನೇಯ, ರಾಜೇಶ ನಾಯಕ, ಕೃಷ್ಣ, ಹರನಾಯಕ, ಚಿದಾನಂದ ಕೀರ್ತಿ, ಸರ್ವೇಶ ವಸದ, ಮಂಜುನಾಥ ಸೋನಾರ್ ಇತರರಿದ್ದರು.