

ಗಂಗಾವತಿ: ವಿಶ್ವ ಕಾರ್ಮಿಕ ದಿನದ ನಿಮಿತ್ತ ತಾಲೂಕಿನ ಸಣಾಪುರದ ಕಿರುಜಲಾಶಯ ವ್ಯಾಪ್ತಿಯಲ್ಲಿ ಕಿಷ್ಕಿಂಧಾ ಯುವ ಚಾರಣ ಬಳಗದಿಂದ ಸ್ವಚ್ಛತಾ ಮತ್ತು ಮತದಾನ ಜಾಗೃತಿ ಅಭಿಯಾನ ಗುರುವಾರ ಹಮ್ಮಿಕೊಳ್ಳಲಾಗಿತ್ತು.
ಲಿವ್ ವಿತ್ ಹ್ಯೂಮಿನಿಟಿ ಟ್ರಸ್ಟ್‌ನಿಂದ ಅಭಿಯಾನ ಹಮ್ಮಿಕೊಂಡಿದ್ದು, ಜಲಾಶಯ ವ್ಯಾಪ್ತಿಯಲ್ಲಿ ಸ್ವಚ್ಛಗೊಳಿಸಿದ ನಂತರ ಪ್ರವಾಸಿಗರಿಗೆ ಕಡ್ಡಾಯ ಮತದಾನ ಕುರಿತು ಜಾಗೃತಿ ಮೂಡಿಸಲಾಯಿತು. ದಡದಲ್ಲಿ ಮದ್ಯ, ತಂಪು ಪಾನೀಯ ಮತ್ತು ಕುಡಿವ ನೀರಿನ ಬಾಟಲ್ ಮತ್ತು ಪ್ಲಾಸ್ಟಿಕ್ ಚೀಲಗಳು, ಜಂಕ್‌ುಡ್ ಪ್ಯಾಕೇಟ್‌ಗಳು ಸಂಗ್ರಹವಾಗಿದ್ದವು. ಇವುಗಳನ್ನು ಸಂಗ್ರಹಿಸಿದ ತಂಡದ ಸದಸ್ಯರು, ವೈಜ್ಞಾನಿಕ ರೀತಿಯಲ್ಲಿ ವಿಲೇವಾರಿ ಮಾಡಿದರು.
ಜಿಲ್ಲಾ ಚುನಾವಣಾ ರಾಯಭಾರಿ ಡಾ.ಶಿವಕುಮಾರ ಮಾಲಿಪಾಟೀಲ್ ಮಾತನಾಡಿ, ತಾಲೂಕಿನ ಐತಿಹಾಸಿಕ ಮತ್ತು ಪ್ರೇಕ್ಷಣೀಯ ಸ್ಥಳಗಳಲ್ಲಿನ ಪರಿಸರ ರಕ್ಷಣೆಗೆ ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕಿದ್ದು, ತ್ಯಾಜ್ಯ ಹಾಕುವುದನ್ನು ನಿಷೇಧಿಸಬೇಕು. ಮದ್ಯ ಮಾರಾಟ ನಿಯಂತ್ರಣ ಜತೆಗೆ ಭದ್ರತಾ ಸಿಬ್ಬಂದಿ ನಿಯೋಜಿಸುವಂತೆ ಒತ್ತಾಯಿಸಿದರು. ಇದೇ ಸಂದರ್ಭದಲ್ಲಿ ಕಡ್ಡಾಯ ಮತದಾನ ಕುರಿತು ಪ್ರತಿಜ್ಞಾವಿಧಿ ಬೋಧಿಸಲಾಯಿತು.
ನೀರಾವರಿ ಸಲಹಾ ಸಮಿತಿ ಒಕ್ಕೂಟದ ಜಿಲ್ಲಾಧ್ಯಕ್ಷ ಸುದರ್ಶನ ವರ್ಮಾ, ಚಾರಣ ಬಳಗದ ಪದಾಧಿಕಾರಿಗಳಾದ ಜಿ.ಆರ್. ಅರ್ಜುನ್, ಎಂ.ಪ್ರಕಾಶ, ಪಂಪಾಪತಿ ಮುದಗಲ್, ಸೌಮ್ಯಾ ಶ್ಯಾವಿ, ಪ್ರಸನ್ನ ಮಿಶ್ರಕೋಟಿ, ಮಂಜುನಾಥ ಶ್ರೇಷ್ಠಿ, ಮಂಜುನಾಥ ಇಂಡಿ, ಚನ್ನಪ್ಪ ಬಳ್ಳೊಳ್ಳಿ, ಆಕಾಶ ನಾಗಲೀಕರ್, ಚಿದಾನಂದ ಕೀರ್ತಿ ಪಾಲ್ಗೊಂಡಿದ್ದರು.