

ಗಂಗಾವತಿ: ಕೃಷಿಯೊಂದಿಗೆ ಉಪ ಕಸುಬಿನತ್ತ ರೈತರು ಗಮನಹರಿಸಿದಾಗ ಆರ್ಥಿಕಾಭಿವೃದ್ಧಿ ಸಾಧ್ಯ ಎಂದು ಸರ್ಕಾರಿ ಕೃಷಿ ಮಹಾವಿದ್ಯಾಲಯದ ವಿಶೇಷಾಧಿಕಾರಿ ಡಾ.ಎಸ್.ಟಿ.ಯಂಜೇರಪ್ಪ ಸಲಹೆ ನೀಡಿದರು.
ನಗರದ ಕೆವಿಕೆ ಸಭಾಂಗಣದಲ್ಲಿ ಕೃಷಿ ವಿಜ್ಞಾನ ಕೇಂದ್ರ ಮತ್ತು ದೆಹಲಿಯ ಭಾರತೀಯ ಕ್ರಾಂತಿಕಾರಿ ಕಿಸಾನ್ ಸೇವಾದಿಂದ ಮಂಗಳವಾರ ಹಮ್ಮಿಕೊಂಡಿದ್ದ ಅಣಬೆ ಬೇಸಾಯ ಮತ್ತು ಮೌಲ್ಯವರ್ಧನೆ ಕುರಿತ ತರಬೇತಿ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದರು. ಜೇನು ಮತ್ತು ಅಣಬೆ ಬೇಸಾಯ ಸೇರಿ ಉಪಕಸುಬುಗಳು ಲಾಭದಾಯಕವಾಗಿದ್ದು, ಮಣ್ಣಿನ ಲವತ್ತತೆ ಜತೆಗೆ ಇಳುವರಿ ಹೆಚ್ಚಿಸಲಿವೆ. ರೈತರು ಸಮಗ್ರ ಕೃಷಿಗೆ ಆದ್ಯತೆ ನೀಡಲಿ ಎಂದರು.
ಸೇವಾದ ಜಿಲ್ಲಾಧ್ಯಕ್ಷ ದೊಡ್ಡಭರಮಣ್ಣ ಮಾತನಾಡಿ, ಅಕಾಲಿಕ ಮಳೆ, ಅನಿಶ್ಚಿತ ಬೆಳೆಗಳಿಂದ ರೈತರು ನಷ್ಟಕ್ಕೊಳಗಾಗುತ್ತಿದ್ದು, ಕಷಿ ಸಂಬಂಧಿತ ಉಪ ಕಸುಬಿಗೆ ಆದ್ಯತೆ ನೀಡಿ ಎಂದರು.
ಇದನ್ನೂ ಓದಿ: ಕೃಷಿಯಲ್ಲಿ ಉಪಕಸುಬು ಮುಖ್ಯ
ಕೌಶಲಾಭಿವೃದ್ಧಿ ತರಬೇತಿ ಮತ್ತು ತಾಂತ್ರಿಕತೆ ಕುರಿತು ಕೆವಿಕೆ ಮುಖ್ಯಸ್ಥ ಡಾ. ರಾಘವೇಂದ್ರ ಎಲಿಗಾರ್ ಮಾಹಿತಿ ನೀಡಿದರು. ಕಾರ್ಯಾಗಾರದಲ್ಲಿ ಚಿಪ್ಪು ಅಣಬೆ ಮೌಲ್ಯವರ್ಧನೆ ಕುರಿತು ತರಬೇತಿ ನೀಡಲಾಯಿತು.
ಕೆವಿಕೆ ತಜ್ಞರಾದ ಡಾ.ಆರ್.ಜ್ಯೋತಿ, ಡಾ.ಕವಿತಾ ಉಳ್ಳಿಕಾಶಿ, ಆರ್.ಎಂ.ರೇವತಿ, ಎನ್.ಶ್ರುತಿ, ಸೇವಾದ ಜಿಲ್ಲಾ ಕಾರ್ಯಾಧ್ಯಕ್ಷ ಬಿಡ್ಡನಗೌಡ, ಮುಖಂಡ ಜಂಬಣ್ಣ, ದೇವಪ್ಪ ಹಳ್ಳಿಗುಡಿ, ಹನುಮಂತಪ್ಪ ಬೇವೂರ್, ಆನಂದ, ಹೊನ್ನಪ್ಪ ತಳವಾರ್ ಇತರರಿದ್ದರು. ನಂತರ ಅಣಬೆ ಬೀಜಗಳನ್ನು ಉಚಿತವಾಗಿ ವಿತರಿಸಲಾಯಿತು.