ವೃತ್ತಿ ಆಧಾರಿತ ಸಾಮಗ್ರಿ ಕಿಟ್ ಪಡೆಯಲು ಕಾರ್ಮಿಕರ ನಡುವೆ ನೂಕುನುಗ್ಗಲು

251122 For material kit near Gangavati Labor Department office
ಗಂಗಾವತಿ ಕಾರ್ಮಿಕ ಇಲಾಖೆ ಕಚೇರಿ ಬಳಿ ಸಾಮಗ್ರಿ ಕಿಟ್‌ಗಾಗಿ ಶುಕ್ರವಾರ ಸೇರಿದ್ದ ಕೂಲಿಕಾರರ ನಡುವೆ ನೂಕುನುಗ್ಗಲು ಉಂಟಾಯಿತು.
Published on

ಗಂಗಾವತಿ: ವೃತ್ತಿ ಆಧಾರಿತ ಸಾಮಗ್ರಿ ಕಿಟ್‌ಗಾಗಿ ನಗರದ ಕಾರ್ಮಿಕ ಇಲಾಖೆ ಕಚೇರಿ ಮುಂದೆ ಶುಕ್ರವಾರ ಸೇರಿದ್ದ ಕೂಲಿಕಾರರ ನಡುವೆ ನೂಕುನುಗ್ಗಲು ಉಂಟಾಯಿತು.

ಕನಕಗಿರಿ, ಗಂಗಾವತಿ ಮತ್ತು ಕಾರಟಗಿ ತಾಲೂಕಿನ 60 ಸಾವಿರ ಕಾರ್ಮಿಕರು ನೋಂದಾಯಿಸಿಕೊಂಡಿದ್ದಾರೆ. ಗಾರೆ ಕೆಲಸದವರಿಗಾಗಿ 1400 ಮತ್ತು ಕಾರ್ಪೇಂಟರಿಗಾಗಿ 700 ಕಿಟ್‌ಗಳು ಬಂದಿದ್ದು, ಹೆಸರು ನೋಂದಣಿ ಮಾಡಿಕೊಂಡವರಿಗೆ ಉಚಿತವಾಗಿ ವಿತರಿಸಲಾಗುತ್ತಿದೆ. 2500 ರೂ. ಮೌಲ್ಯದ ಸಲಕರಣೆಗಳಿಗಾಗಿ ಕಚೇರಿ ಬಳಿ ಬೆಳಗ್ಗೆಯೇ ಸೇರಿದ್ದು, ನೂಕುನುಗ್ಗಲು ಉಂಟಾಗಿದೆ. ಹೆಸರು ನೋಂದಾಯಿಸಿದವರು ಗುರುತಿನ ಪತ್ರದೊಂದಿಗೆ ನಿಂತಿದ್ದರು. ಯಾರು ಅರ್ಹರೆಂಬ ಬಗ್ಗೆ ಇಲಾಖೆ ಸೂಚನಾ ಫಲಕದಲ್ಲಿ ವಿವರ ನೀಡಿಲ್ಲ. ಸಿಬ್ಬಂದಿಯೂ ಯಾವುದೇ ಮಾಹಿತಿ ನೀಡುತ್ತಿಲ್ಲವೆಂದು ಕೆಲಸ ಬಿಟ್ಟು ಬಂದಿದ್ದ ಕಾರ್ಮಿಕರು ಅಸಮಾಧಾನ ವ್ಯಕ್ತಪಡಿಸಿದರು.

ಕಾರ್ಮಿಕ ನಿರೀಕ್ಷಕ ಗೋಪಾಲ್ ಧೂಪದ್ ಪ್ರತಿಕ್ರಿಯಿಸಿ, ನೋಂದಣಿ ಹಿರಿತನ ಆಧಾರದಡಿ ಕಿಟ್ ವಿತರಿಸಲಾಗುತ್ತಿದ್ದು, ಎಲ್ಲರಿಗಲ್ಲ. ಕಾರ್ಮಿಕ ಸಂಘಟನೆಗಳ ಮೂಲಕ ಮಾಹಿತಿ ನೀಡಿದ್ದು, ಕಾರ್ಮಿಕರು ಅರ್ಥ ಮಾಡಿಕೊಳ್ಳುತ್ತಿಲ್ಲ. ವಿನಾಕಾರಣ ನೂಕುನುಗ್ಗಲು ನಡೆಸುತ್ತಿದ್ದಾರೆ. ಇಲಾಖೆಯಲ್ಲಿ ನೋಂದಾಯಿಸಿದ ಸಂಘಟನೆಗಳ ಮೂಲಕ ಯೋಜನೆಗಳನ್ನು ತಿಳಿಸಲಾಗುತ್ತಿದ್ದು, ಮಧ್ಯವರ್ತಿಗಳಿಗೆ ಅವಕಾಶವಿಲ್ಲ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net