ನದಿ ತೀರದಲ್ಲಿ ಹರಿಗೋಲು, ಮೀನುಗಾರಿಕೆ ನಿಷೇಧ

RIVER
ತುಂಗಭದ್ರಾ ಜಲಾಶಯದಿಂದ ನದಿಗೆ ಹೆಚ್ಚುವರಿ ನೀರು ಹರಿಬಿಟ್ಟಿದ್ದರಿಂದ ಗಂಗಾವತಿ ತಾಲೂಕಿನ ಆನೆಗೊಂದಿಯ ಶ್ರೀಕೃಷ್ಣದೇವರಾಯ ಶಿಲಾ ಮಂಟಪ ಮುಳುಗಿರುವುದು.
Published on

ಗಂಗಾವತಿ: ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್ ಗೇಟ್ ಮುರಿದ ಕಾರಣ ಜಲಾಶಯದಿಂದ ನದಿಗೆ ಹೆಚ್ಚುವರಿ ನೀರು ಹರಿದು ಬರುತ್ತಿದ್ದು, ನದಿ ತೀರದಲ್ಲಿ ಯಾಂತ್ರಿಕ ದೋಣಿ, ಹರಿಗೋಲು ಮತ್ತು ಮೀನುಗಾರಿಕೆ ನಿಷೇಧಿಸಲಾಗಿದೆ.

ದಿನದಿಂದ ದಿನಕ್ಕೆ ನೀರಿನ ಪ್ರಮಾಣ ಹೆಚ್ಚುತ್ತಿದ್ದು, ಸದ್ಯ 1.30ಕ್ಯೂಸೆಕ್ ನದಿಗೆ ಬಿಡಲಾಗುತ್ತಿದೆ. ಸಣಾಪುರ, ಹನುಮನಹಳ್ಳಿ, ವಿರುಪಾಪುರಗಡ್ಡಿ, ಆನೆಗೊಂದಿ, ಗೂಗಿಬಂಡಿ ಕ್ಯಾಂಪ್, ದೇವಘಾಟ, ವಿಪ್ರ, ಸಿಂಗನಗುಂಡು, ಅಯೋಧ್ಯಾ, ಚಿಕ್ಕಜಂತಕಲ್ ವ್ಯಾಪ್ತಿಯ ನದಿ ಪಾತ್ರದಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದ್ದು, ಎರಡನೇ ಬಾರಿ ಭತ್ತದ ಗದ್ದೆಗಳಿಗೆ ನೀರು ನುಗ್ಗುವ ಸಾಧ್ಯತೆಗಳಿವೆ. ಆನೆಗೊಂದಿಯ ಶ್ರೀಕೃಷ್ಣದೇವರಾಯ ಶಿಲಾಮಂಟಪ ಮುಳುಗಿದ್ದು, ಯಾಂತ್ರಿಕ ದೋಣಿಗಳು ದಡ ಸೇರಿವೆ. ಹನುಮನಹಳ್ಳಿಯ ಋಷ್ಯಮುಖ, ವಿರುಪಾಪುರಗಡ್ಡಿ, ತಳವಾರ ಘಟ್ಟ ನವವೃಂದಾವನಗಡ್ಡಿ, ಹಳೇ ಕರಿಯಮ್ಮನಗಡ್ಡಿ ಸಂಪರ್ಕ ಕಡಿತಗೊಂಡಿದೆ. ಚಿಕ್ಕಜಂತಕಲ್ ಮತ್ತು ಕಂಪ್ಲಿ ಸಂಪರ್ಕ ಸೇತುವೆ ಮುಳುಗುವ ಹಂತ ತಲುಪಿದ್ದು, ಪಾದಚಾರಿಗಳ ಸಂಚಾರ ನಿಷೇಧಿಸಲಾಗಿದೆ.

ಅಧಿಕಾರಿಗಳ ಭೇಟಿ:

ತಾಲೂಕಿನ ನೆರೆಹಾವಳಿ ಪ್ರದೇಶಕ್ಕೆ ಕಂದಾಯ ಮತ್ತು ಗ್ರಾಮಾಡಳಿತಾಧಿಕಾರಿಗಳನ್ನೊಳಗೊಂಡ ತಂಡ ರಚಿಸಿದ್ದು, ಸೂಕ್ಷ್ಮ ಗ್ರಾಮಗಳಲ್ಲಿ ನಿಯೋಜಿಸಲಾಗಿದೆ. ನದಿ ತೀರದಲ್ಲಿ ಯಾವುದೇ ಚಟುವಟಿಕೆ ನಡೆಸದಂತೆ ನೆರೆಹಾವಳಿ ಬಾಧಿತ 18 ಗ್ರಾಮಗಳಲ್ಲಿ ಗ್ರಾಪಂ ನೆರವಿನೊಂದಿಗೆ ಡಂಗೂರ ಸಾರಿಸಲಾಗಿದೆ. ಪ್ರವಾಸಿಗರ ಅನುಕೂಲಕ್ಕಾಗಿ ಕೆಲ ಪ್ರದೇಶಗಳಲ್ಲಿನ ಪ್ರವೇಶ ನಿಷೇಧಿಸಲಾಗಿದ್ದು, ಸೆಲ್ಫಿ ನಿರ್ಬಧಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net