

ಗಂಗಾವತಿ: ಸಕಾಲಕ್ಕೆ ವೇತನ ಪಾವತಿ ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ತುಂಗಭದ್ರಾ ಎಡದಂಡೆ ಕಾಲುವೆ ವ್ಯಾಪ್ತಿಯ ಹೊರಗುತ್ತಿಗೆ ನೌಕರರು ಕೆಲಸ ಸ್ಥಗಿತಗೊಳಿಸಿ ಸೋಮವಾರ ತಾಲೂಕಿನ ನೀರಾವರಿ ಇಲಾಖೆ ನಂ.2 ವಿಭಾಗದ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಸಂಘದ ತಾಲೂಕು ಅಧ್ಯಕ್ಷ ಸಿದ್ದಲಿಂಗಯ್ಯಸ್ವಾಮಿ ಮಾತನಾಡಿ, ಗುತ್ತಿಗೆದಾರರು ಹೊರಗುತ್ತಿಗೆ ಕಾರ್ಮಿಕರಿಗೆ ಕಾರ್ಮಿಕ ಇಲಾಖೆಯನ್ವಯ ಸೌಲಭ್ಯ ನೀಡುತ್ತಿಲ್ಲ. ಪ್ರತಿ ತಿಂಗಳು 5ನೇ ದಿನಾಂಕದೊಳಗೆ ವೇತನ ಪಾವತಿಸಬೇಕು. ಯಾವುದೇ ಕಾರಣಕ್ಕೂ ವೇತನ ಕಡಿತಗೊಳಿಸಬಾರದು. ಪಿಎ್ ಮತ್ತು ಇಪಿಎ್ ಸಕಾಲಕ್ಕೆ ಭರ್ತಿ ಮಾಡಬೇಕು. ಸೇವೆ ಕಾಯಂಗೆ ಆದ್ಯತೆ ನೀಡಬೇಕು. ಗುತ್ತಿಗೆದಾರರ ಬದಲಾಗಿ ಬ್ಯಾಂಕ್ ಮೂಲಕವೇ ವೇತನ ಪಾವತಿಯಾಗುವಂತೆ ಕಾಯ್ದೆ ರೂಪಿಸುವಂತೆ ಮನವಿ ಮಾಡಿದರು. ಇಇ ಸತ್ಯಪ್ಪಗೆ ಮನವಿ ಸಲ್ಲಿಸಿದರು. ಸಂಘದ ಗೌರವಾಧ್ಯಕ್ಷ ದುರುಗಪ್ಪ ನಡುಲಮನಿ, ಪದಾಧಿಕಾರಿಗಳಾದ ಶರಣಬಸವ, ಶಿವಕುಮಾರ, ಚಾಂದ್‌ಪಾಷಾ, ಹಸನ್‌ಸಾಬ್, ನಬೀಸಾಬ್, ಜಾರ್‌ಸಾಬ್, ಮಾಬುಸಾಬ್, ಲಕ್ಷ್ಮೀ, ವಿಜಯಲಕ್ಷ್ಮೀ, ಹುಲಿಗೆಮ್ಮ, ನಾಗಮ್ಮ, ಖಾಜಾ ಹುಸೇನ್, ಲಕ್ಷ್ಮಣ, ಪಾಮಪ್ಪ ಇತರರಿದ್ದರು.