ವರ್ತನೆ ಬದಲಿಸಿಕೊಳ್ಳದಿದ್ದರೆ ಶಿಸ್ತುಕ್ರಮ, ಅಧಿಕಾರಿಗಳಿಗೆ ಸಚಿವ ಶಿವರಾಜ ತಂಗಡಗಿ ಎಚ್ಚರಿಕೆ

KDP Meeting
ಗಂಗಾವತಿ ತಾಪಂ ಮಂಥನ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ತ್ರಿವಳಿ ತಾಲೂಕಿನ ತಾಲೂಕು ಮಟ್ಟದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಮಂಗಳವಾರ ಮಾತನಾಡಿದರು. ಸಂಸದ ಕೆ.ರಾಜಶೇಖರ್ ಹಿಟ್ನಾಳ್, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ರೆಡ್ಡಿ ಶ್ರೀನಿವಾಸ, ತಾಲೂಕಾಡಳಿತಾಧಿಕಾರಿ ಜೆ.ಪಿ.ವಡ್ಡರ್ ಇತರರಿದ್ದರು.
Published on

ಗಂಗಾವತಿ: ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸದ ಅಧಿಕಾರಿಗಳು ತಾಲೂಕಿನಲ್ಲಿರಲು ಯೋಗ್ಯರಲ್ಲ. ನೀವಾಗಿ ವರ್ಗಾವಣೆಯಾಗಿ ಇಲ್ಲವೇ ನಾನೇ ಶಿಸ್ತುಕ್ರಮಕ್ಕೆ ಶಿಾರಸು ಮಾಡಬೇಕಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ, ಬೇಜವಾಬ್ದಾರಿ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.

ನಗರದ ತಾಪಂ ಮಂಥನ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಗಂಗಾವತಿ, ಕಾರಟಗಿ ಮತ್ತು ಕನಕಗಿರಿ ತಾಲೂಕು ಮಟ್ಟದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಮಾತನಾಡಿದರು. ಶುದ್ಧ ಕುಡಿವ ನೀರು ಸಮರ್ಪಕ ಪೂರೈಕೆಯಾಗುತ್ತಿಲ್ಲ. ಬಹುಗ್ರಾಮ ಯೋಜನೆ ಘಟಕಗಳು ಸ್ಥಗಿತಗೊಂಡಿದ್ದು, ನಿರ್ವಹಣೆ ಇಂಜಿನಿಯರ್‌ಗಳು ಪರಿಶೀಲಿಸುತ್ತಿಲ್ಲ.

ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ರಾತ್ರಿಯಾಗುತ್ತಿದ್ದಂತೆ ಆರೋಗ್ಯ ಕಾರ್ಯಕರ್ತೆಯರು ಇರಲ್ಲ. ನವಲಿ ಮತ್ತು ಕಾರಟಗಿ 108 ಆಂಬುಲೆನ್ಸ್ ಸೇವೆ ಸ್ಥಗಿತಗೊಂಡು ಹಲವು ತಿಂಗಳಾದವು. ತೋಟಗಾರಿಕೆ ಇಲಾಖೆ ಸಿಬ್ಬಂದಿ ತೋಟಗಳಿಗೆ ಭೇಟಿ ನೀಡುತ್ತಿಲ್ಲ, ಪಿಡಿಒಗಳು ಗ್ರಾಪಂ ಕಚೇರಿಯಲ್ಲಿರಲ್ಲ , ಗ್ರಾಮಸ್ಥರ ಕೈಗೂ ಸಿಗುತ್ತಿಲ್ಲ. ಇದರಿಂದ ಜನಸಾಮಾನ್ಯರ ಸಮಸ್ಯೆಗಳಿಗೆ ಪರಿಹಾರ ದೊರೆಯುತ್ತಿಲ್ಲ. ಇದೇ ಕಾರಣಕ್ಕಾಗಿ ನಾಗರಿಕರು ನನ್ನ ಮನೆ ಮುಂದೆ ಬರುವಂತಾಗಿದೆ ಎಂದು ಅಧಿಕಾರಿಗಳ ವಿರುದ್ಧ ಹರಿಹಾಯ್ದರು.

ಲಾಸ್ಟ್ ವಾರ್ನಿಂಗ್: ಗ್ರಾಮೀಣ ಭಾಗದ ಸಮಸ್ಯೆಗಳಿಗೆ ಸ್ಪಂದಿಸದ ಗುಂಡೂರು, ಮುಷ್ಟೂರು, ಚಿಕ್ಕಜಂತಕಲ್, ಬೇವಿನಾಳ್, ಕರಡೋಣಿ, ಹಣವಾಳ ಪಿಡಿಒಗಳು ವರ್ತನೆ ಬದಲಾಯಿಸಿಕೊಳ್ಳಿ ಇಲ್ಲವೇ ಕೌನ್ಸೆಲಿಂಗ್ ಮೂಲಕ ವರ್ಗಾವಣೆಯಾಗಿ. ವಾರದ ಗಡವು ನೀಡಲಾಗುತ್ತಿದ್ದು, ಸುಧಾರಿಸದಿದ್ದರೆ ಅಮಾನತ್ತಿಗೆ ಶಿಾರಸು ಮಾಡಲಾಗುವುದು. ಗ್ರಾಮದ ಸಮಸ್ಯೆಗಳನ್ನು ಸಚಿವರೇ ಪರಿಹರಿಸಬೇಕಾದರೆ, ನೀವ್ಯಾಕೇ ಅಧಿಕಾರದಲ್ಲಿರಬೇಕು. ಇದು ಲಾಸ್ಟ್ ವಾರ್ನಿಂಗ್. ಮುಂದಿನ ಸಭೆಯೊಳಗೆ ದೂರುಗಳು ಬಂದರೆ ಸುಮ್ಮನಿರಲ್ಲ ಎಂದು ಪಿಡಿಒಗಳ ವಿರುದ್ಧ ಹರಿಹಾಯ್ದರು. ಗ್ರಾಮೀಣ ಭಾಗದ ಸಮಸ್ಯೆಗಳನ್ನು ಆಲಿಸಲು ನಾಮನಿರ್ದೇಶಿತ ಸದಸ್ಯರು ಕ್ರೀಯಾಶೀಲರಾಗಬೇಕು. ಲೋಪ ಕಂಡು ಬಂದಲ್ಲಿ ನನ್ನ ಗಮನಕ್ಕೆ ತನ್ನಿ. ರಾಜಕೀಯಕ್ಕೆ ಅವಕಾಶ ನೀಡದೇ, ಪಾರದರ್ಶಕತೆ ಕಾಯ್ದುಕೊಳ್ಳುವಂತೆ ಗ್ಯಾರಂಟಿ ಅನುಷ್ಠಾನ ಸಮಿತಿ ಮತ್ತು ಕೆಡಿಪಿ ಸದಸ್ಯರಿಗೆ ಸೂಚನೆ ನೀಡಿದರು.

ಪ್ರಸ್ತಾವನೆ ಸಲ್ಲಿಸಿ: ತಾಲೂಕಿನ ಹೇರೂರು, ವಡ್ಡರಹಟ್ಟಿಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಬೇಕಿದ್ದು, ಉಪಕೇಂದ್ರದಲ್ಲಿ ಆರೋಗ್ಯ ಕಾರ್ಯಕರ್ತೆಯರು ಇರುವಂತೆ ಕ್ರಮ ಕೈಗೊಳ್ಳಬೇಕಿದೆ. ನಗರದ 92 ಅಂಗನವಾಡಿ ಕೇಂದ್ರಗಳ ಸ್ವಂತ ಕಟ್ಟಡಕ್ಕಾಗಿ ಜಾಗ ಗುರುತಿಸಬೇಕು. ಬಾಲ್ಯ ವಿವಾಹ ಪ್ರಕರಣ ನಿಯಂತ್ರಣಕ್ಕೆ ಗ್ರಾಮೀಣ ಮಟ್ಟದಲ್ಲಿ ಜಾಗೃತಿ ಮೂಡಿಸಬೇಕಿದ್ದು, ಪ್ರೇರೇಪಿಸುವರ ವಿರುದ್ಧ ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳಿ. ಎಸ್ಸೆಸ್ಸ್ಸೆಲ್ಸಿ ಲಿತಾಂಶ ಸುಧಾರಣೆಗೆ ಜೂನ್ ತಿಂಗಳಿಂದಲೇ ತರಬೇತಿ ಶುರುವಾಗಬೇಕಿದ್ದು, ಸಂಪನ್ಮೂಲ ವ್ಯಕ್ತಿಗಳನ್ನು ಬಳಸಿಕೊಳ್ಳಿ. ಕಲಿಕೆಯಿಂದ ಹಿಂದುಳಿದ ವಿದ್ಯಾರ್ಥಿಗಳನ್ನು ಗುರುತಿಸಿ ಅಗತ್ಯ ತರಬೇತಿ ನೀಡಿ. ಶಾಲೆಗಳಿಗೆ ಮೂಲ ಸೌಕರ್ಯಗಳನ್ನು ನಗರಸಭೆ, ಪುರಸಭೆ ಮತ್ತು ಪಪಂ ಆದ್ಯತಾನುಸಾರ ಒದಗಿಸಬೇಕು. ಲಿತಾಂಶ ಕಡಿಮೆಯಾದರೆ ಅಧಿಕಾರಿಗಳ ವಿರುದ್ಧ ಕ್ರಮ ಗ್ಯಾರಂಟಿ ಎಂದರು. ಸಭೆಯಲ್ಲಿ ಆರೋಗ್ಯ, ಅರಣ್ಯ, ಸಮಾಜ ಕಲ್ಯಾಣ, ಸಿಡಿಪಿಒ ಸೇರಿ ವಿವಿಧ ಇಲಾಖೆ ಪ್ರಗತಿ ಪರಿಶೀಲಿಸಿದರು.

ಸಂಸದ ಕೆ.ರಾಜಶೇಖರ್ ಹಿಟ್ನಾಳ್, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ರೆಡ್ಡಿ ಶ್ರೀನಿವಾಸ, ತಾಲೂಕು ಆಡಳಿತಾಧಿಕಾರಿ ಜೆ.ಪಿ. ವಡ್ಡರ್, ತ್ರಿವಳಿ ತಾಲೂಕಿನ ತಹಸೀಲ್ದಾರರಾದ ಯು.ನಾಗರಾಜ್, ಕುಮಾರಸ್ವಾಮಿ, ವಿಶ್ವನಾಥಮುರಡಿ, ಇಒಗಳಾದ ರಾಮರೆಡ್ಡಿ ಪಾಟೀಲ್, ಲಕ್ಷ್ಮೀದೇವಿ ಯಾದವ್, ರಾಜಶೇಖರ್, ಡಿವೈಎಸ್ಪಿ ಸಿದ್ದಲಿಂಗಪ್ಪ ಗೌಡ ಪಾಟೀಲ್ ಇತರರಿದ್ದರು.

ಕನಕಗಿರಿ ಕ್ಷೇತ್ರಕ್ಕೆ ಆದ್ಯತೆ: ಅರೆ ಬರೆ ಮಾಹಿತಿಯೊಂದಿಗೆ ಸಭೆಗೆ ಬಂದಿದ್ದ ತಾಲೂಕು ವೈದ್ಯಾಧಿಕಾರಿ ಗೌರಿಶಂಕರ ಚಿತ್ರಿಕಿ, ಗ್ರಾಮೀಣ ಕುಡಿವ ನೀರು ನೈರ್ಮಲ್ಯ ವಿಭಾಗದ ಎಇಇ ದೇವಣ್ಣ ಕಟ್ಟಿ, ಪಿಡಿಒಗಳಾದ ಮಲ್ಲಿಕಾರ್ಜುನ, ಗೌಸ್‌ಸಾಬ್, ಸಾಯಿನಾಥ, ಕನಕಪ್ಪ ಇತರರನ್ನು ತೀವ್ರ ತರಾಟೆಗೆ ತೆಗೆದುಕೊಂಡರಲ್ಲದೇ, ಸರ್ಕಾರಿ ಸೇವೆಯಲ್ಲಿರಲು ಯೋಗ್ಯರಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ನಗರದ ರಸ್ತೆ ಸಂಪೂರ್ಣ ಹಾಳಾಗಿದ್ದು, ಅನುದಾನ ಕ್ರೋಡೀಕರಣದೊಂದಿಗೆ ಶೀಘ್ರ ಗತಿಯಲ್ಲಿ ಅಭಿವೃದ್ಧಿಪಡಿಸುವಂತೆ ಪೌರಾಯುಕ್ತ ಆರ್. ವಿರೂಪಾಕ್ಷಮೂರ್ತಿಗೆ ತಾಕೀತು ಮಾಡಿದರು. ಸಭೆಯುದ್ದಕ್ಕೂ ಕನಕಗಿರಿ ಕ್ಷೇತ್ರದ ಸಮಸ್ಯೆಗಳಿಗೆ ಹೆಚ್ಚು ಸ್ಪಂದಿಸಿದ್ದು, ಗಂಗಾವತಿ ಕ್ಷೇತ್ರಕ್ಕೆ ಆದ್ಯತೆ ನೀಡಲಿಲ್ಲ. ಅಭಿವೃದ್ಧಿಗೆ ಸ್ಪಂದಿಸದ ಅಧಿಕಾರಿಗಳ ವಿರುದ್ಧ ಕ್ರಮಕ್ಕಿಂತ ಹೆಚ್ಚಾಗಿ ಸಲಹೆ ನೀಡಿದ್ದು, ಸುಧಾರಿಸಿಕೊಳ್ಳಲು ಅವಕಾಶ ನೀಡಿದರು. ಯಾವುದೇ ಇಲಾಖೆ ಗಂಭೀರ ಚರ್ಚೆ ನಡೆಯಲಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net