

ಗಂಗಾವತಿ: ಡಿಜಿಟಲ್ ವಹಿವಾಟನ್ನು ಅವಶ್ಯಕತೆಗೆ ತಕ್ಕಂತೆ ಬಳಸಿಕೊಳ್ಳಬೇಕಿದ್ದು, ನಿರ್ಲಕ್ಷಿಸಿದರೆ ಅಪರಾಧ ಪ್ರಕರಣಕ್ಕೆ ದಾರಿಯಾಗಲಿದೆ ಎಂದು ಪೊಲೀಸ್ ಇಲಾಖೆ ಸೈಬರ್ ಕ್ರೈಂ ವಿಭಾಗದ ಪಿಐ ಮಹಾಂತೇಶ ಸಜ್ಜನ್ ಹೇಳಿದರು.
ನಗರದ ಲಲಿತಮಹಲ್ ಸಭಾಂಗಣದಲ್ಲಿ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತದಿಂದ ತ್ರಿವಳಿ ತಾಲೂಕಿನ ಸಹಕಾರಿ ಬ್ಯಾಂಕ್‌ಗಳ ಸಿಇಒಗಳಿಗೆ ಸೋಮವಾರ ಹಮ್ಮಿಕೊಂಡಿದ್ದ ವಿಷಯಾಧಾರಿತ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. ತಂತ್ರಜ್ಞಾನ ಬೆಳೆದಂತೆಲ್ಲ ವಂಚನೆ ಪ್ರಕರಣ ಹೆಚ್ಚಾಗುತ್ತಿದ್ದು, ಅಗತ್ಯಕ್ಕೆ ತಕ್ಕಂತೆ ತಾಂತ್ರಿಕತೆ ಅವಲಂಬಿಸಬೇಕಿದೆ. ಇತ್ತೀಚಿನ ದಿನಗಳಲ್ಲಿ ಡಿಜಿಟಲ್ ವಂಚನೆ ಪ್ರಕರಣಗಳು ಅತಿಹೆಚ್ಚು ದಾಖಲಾಗುತ್ತಿದ್ದು, ದುರಾಸೆಗೆ ಹಣ ಕಳೆದುಕೊಳ್ಳುವ ವಿದ್ಯಾವಂತರೇ ಹೆಚ್ಚು. ಹಣಕಾಸು ಕ್ಷೇತ್ರದಲ್ಲಿರುವ ಸಿಬ್ಬಂದಿ ಎಚ್ಚರಿಕೆಯಿಂದ ಡಿಜಿಟಲ್ ವಹಿವಾಟು ನಿರ್ವಹಿಸಬೇಕಿದ್ದು, ಅನುಮಾನ ಬಂದ ಕೂಡಲೇ ಸೈಬರ್ ಕ್ರೈಂ ವಿಭಾಗಕ್ಕೆ ಮಾಹಿತಿ ನೀಡುವಂತೆ ಸಲಹೆ ನೀಡಿದರು.
ಸಹಕಾರಿ ನಿಯಮಿತ ಕಲಬುರಗಿ ವಿಭಾಗದ ನಿರ್ದೇಶಕ ಜಿ.ಶ್ರೀಧರ್ ಕೇಸರಹಟ್ಟಿ ಮಾತನಾಡಿ, ಬದಲಾದ ದಿನಮಾನಕ್ಕನುಗುಣ ಕಾನೂನಿನ ಅರಿವು ಮುಖ್ಯವಾಗಿದ್ದು, ತರಬೇತಿ ಕಾರ್ಯಾಗಾರ ಮೂಲಕ ಸಹಕಾರಿಗಳನ್ನು ಸದೃಢಗೊಳಿಸಲಾಗುತ್ತಿದೆ ಎಂದರು.
ಜಿಲ್ಲಾ ಸೌಹಾರ್ದ ಸಹಕಾರಿ ಒಕ್ಕೂಟದ ಮಾಜಿ ಅಧ್ಯಕ್ಷ ನಾಗಲಿಂಗಪ್ಪ ಪತ್ತಾರ್, ನಿರ್ದೇಶಕ ಕುಮಾರೆಪ್ಪ ಸಿಂಗನಾಳ್, ಸಂಪನ್ಮೂಲ ವ್ಯಕ್ತಿಗಳಾದ ಚಂದ್ರಶೇಖರ್, ನವೀನ್, ಸಾತ್ವಿಕ್, ಜಿಲ್ಲಾ ಸೌಹಾರ್ದ ಅಭಿವೃದ್ಧಿ ಅಧಿಕಾರಿ ಓಂಕಾರ್ ಧರಣಿ ಇತರರಿದ್ದರು. ಗಂಗಾವತಿ, ಕಾರಟಗಿ, ಕನಕಗಿರಿ ತಾಲೂಕಿನ ವಿವಿಧ ಸಹಕಾರಿ ಬ್ಯಾಂಕ್‌ಗಳ ಸಿಇಒಗಳು ಭಾಗವಹಿಸಿದ್ದರು.