ಸ್ವಚ್ಛ ಗ್ರಾಮ ನಿರ್ಮಾಣಕ್ಕೆ ಮುಂದಾಗಿ; ತಾಪಂ ಇಒ ಡಾ.ಡಿ.ಮೋಹನ್ ಸಲಹೆ

300822 29 gvt 03
Published on

ಗಂಗಾವತಿ: ವೈಯಕ್ತಿಕ ಶೌಚಗೃಹ ಬಳಕೆ ಕುರಿತು ಹಳ್ಳಿ ಜನರಲ್ಲಿ ಅರಿವು ಮೂಡಿಸಿ ಸ್ವಚ್ಛ ಗ್ರಾಮ ನಿರ್ಮಿಸಬೇಕು ಎಂದು ಕಾರಟಗಿ ತಾಪಂ ಇಒ ಡಾ.ಡಿ.ಮೋಹನ್ ಸಲಹೆ ನೀಡಿದರು.
ನಗರದ ತಾಪಂ ಮಂಥನ ಸಭಾಂಗಣದಲ್ಲಿ ಸ್ವಚ್ಛ ಭಾರತ ಮಿಷನ್, ಗ್ರಾಮ ನೈರ್ಮಲ್ಯ ಯೋಜನೆ ಘಟಕದಿಂದ ಸೋಮವಾರ ಆಯೋಜಿಸಿದ್ದ ಕಾರಟಗಿ ಮತ್ತು ಗಂಗಾವತಿ ತಾಪಂ ವ್ಯಾಪ್ತಿಯ ಗ್ರಾಪಂ ಅಧ್ಯಕ್ಷ, ಪಿಡಿಒ, ಕಾರ್ಯದರ್ಶಿ, ಸ್ವಚ್ಛಗ್ರಹಿ, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರಿಗೆ ಏರ್ಪಡಿಸಿದ್ದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. ಯೋಜನೆಯಡಿ ನಿರ್ಮಿಸಿರುವ ಶೌಚಗೃಹಗಳು ಸ್ಟೋರ್ ರೂಮ್‌ಗಳಾಗಿವೆ. ಬಳಕೆಗೆ ಮನವೊಲಿಸಬೇಕಿದ್ದು, ಘನ ಮತ್ತು ದ್ರವ ತ್ಯಾಜ್ಯ ವಿಲೇವಾರಿ ಬಗ್ಗೆ ಜಾಗೃತಿ ಮೂಡಿಸಬೇಕು. ಗ್ರಾಪಂಗಳಲ್ಲಿರುವ ಸ್ವಚ್ಛ ವಾಹಿನಿ ನಿತ್ಯ ಬಳಕೆಗೆ ಆದ್ಯತೆ ನೀಡಬೇಕಿದ್ದು, ಒಣ ಮತ್ತು ಹಸಿ ಕಸ ವಿಂಗಡಣೆಗೆ ತರಬೇತಿ ನೀಡುವಂತೆ ತಿಳಿಸಿದರು.

ಸ್ವಚ್ಛ ಭಾರತ ಮಿಷನ್ ಜಿಲ್ಲಾ ಸಮಾಲೋಚಕ ರಾಮಣ್ಣ ಮಾತನಾಡಿ, ಶಾಲೆ ಮತ್ತು ಅಂಗನವಾಡಿಗಳಲ್ಲಿ ಶೌಚಗೃಹ ಕಡ್ಡಾಯವಾಗಿ ಬಳಸಬೇಕು. ಎಲ್ಲೆಂದರಲ್ಲಿ ಕಸ ಹಾಕುವುದನ್ನು ತಡೆಯಬೇಕು ಎಂದರು. ತಾಪಂ ಸಹಾಯಕ ನಿರ್ದೇಶಕರಾದ ಎನ್.ನರಸಪ್ಪ, ವೈ.ವಜನಾ, ನೋಡಲ್ ಅಧಿಕಾರಿಗಳಾದ ನಾಗೇಶ ಕುರಡಿ, ಸುರೇಶ ಉಪ್ಪಾರ್, ವಿಷಯ ನಿರ್ವಾಹಕರಾದ ಭೀಮಣ್ಣ, ಮಂಜುನಾಥ ಇತರರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net