

ಗಂಗಾವತಿ: ನಗರದ ಉಪವಿಭಾಗ ಆಸ್ಪತ್ರೆ ಆರೋಗ್ಯ ರಕ್ಷಾ ಸಮಿತಿಗೆ ಕೊನೆಗೂ ಸದಸ್ಯರ ನಾಮನಿರ್ದೇಶನಗೊಂಡಿದ್ದು, ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಬೆಂಬಲಿಗರಿಗೆ ಅವಕಾಶ ದೊರೆತಿದೆ.
ಆರೋಗ್ಯ ಸಮಿತಿಗೆ ಸದಸ್ಯರಾಗಿ ಲಕ್ಷ್ಮೀ ಕೋತ್ವಾಲ್, ಹೊನ್ನುರ ಅಲಿ, ಸಂತೋಷ ಪಾಟೀಲ್, ಚಂದ್ರಶೇಖರ ಕಲ್ಮನಿ, ಮಲ್ಲಿಕಾರ್ಜುನ ತಟ್ಟಿ, ಶರಣಪ್ಪ ಹಣವಾಳ, ಉಮಲೂಟಿ ಬಸಪ್ಪ, ಪ್ರಭಾವತಿ ಅವರು ನೇಮಕರಾಗಿದ್ದಾರೆ. ನಾಮನಿರ್ದೇಶನಕ್ಕಾಗಿ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಮತ್ತು ಮಾಜಿ ಎಂಎಲ್ಸಿ ಎಚ್.ಆರ್.ಶ್ರೀನಾಥ ನಡುವೆ ಪೈಪೋಟಿ ಇತ್ತು. ಸಿಎಂ ಮತ್ತು ಡಿಸಿಎಂರನ್ನು ಪ್ರತ್ಯೇಕ ಭೇಟಿಯಾಗಿ ಬೆಂಬಲಿಗರ ನೇಮಕಕ್ಕೆ ಅಹವಾಲು ಸಲ್ಲಿಸಿದ್ದರು. ಲೋಕಚುನಾವಣೆ ಸಂದರ್ಭದಲ್ಲಿ ಮುನಿಸಿಕೊಂಡ ಅನ್ಸಾರಿ ಸಮಾಧಾನಪಡಿಸಲು ಬೆಂಬಲಿಗರಿಗೆ ಅವಕಾಶ ನೀಡಿದ್ದು, ಭಿನ್ನಮತ ಶಮನಕ್ಕೆ ಮೊದಲ ಹಂತದ ಪ್ರಯತ್ನ ಹೈಕಮಾಂಡ್ ಮಾಡಿದೆ. ನಾಮನಿರ್ದೇಶನದಿಂದ ಅನ್ಸಾರಿ ಬೆಂಬಲಿಗರು ಸಂಭ್ರಮಿಸಿದ್ದು, ಪ್ರತಿಷ್ಠೆ ಮತ್ತಷ್ಟು ಹೆಚ್ಚಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಶಾಸಕ ರೆಡ್ಡಿಗೆ ಹಿನ್ನಡೆ: ಆರೋಗ್ಯ ರಕ್ಷಾ ಸಮಿತಿ ಶಾಸಕರೇ ಅಧ್ಯಕ್ಷರಾಗುವುದು ವಾಡಿಕೆ. ನಾಮನಿರ್ದೇಶನ ಸದಸ್ಯರನ್ನು ಶಾಸಕ ಶಿಾರಸಿನಂತೆ ಕೈಗೊಳ್ಳಲಾಗುತ್ತಿದೆ. ಶಾಸಕ ಜನಾರ್ದನರೆಡ್ಡಿ ಆಯ್ಕೆಯಾಗಿ 8 ತಿಂಗಳ ನಂತರ ನಾಮನಿರ್ದೇಶನ ಕೈಗೊಂಡಿದ್ದು, ಆದೇಶ ಪತ್ರ ಪಡೆದ ಒಂದೇ ದಿನದಲ್ಲಿ ಎಲ್ಲ ನಾಮನಿರ್ದೇಶನಗಳು ರದ್ದಾಗಿದ್ದವು. ಸಿಎಂ, ಡಿಸಿಎಂಗೆ ಅನ್ಸಾರಿ ನೀಡಿದ ದೂರಿನಿಂದಲೇ ರದ್ದಾಗಿದ್ದು, ನಾಮನಿರ್ದೇಶನಕ್ಕೆ ಸಹಕರಿಸಿದ ಉಪವಿಭಾಗ ಆಸ್ಪತ್ರೆ ಆಡಳಿತಾಧಿಕಾರಿ ಡಾ.ಈಶ್ವರ ಸವಡಿ ವಿರುದ್ಧ ಕ್ರಮಕ್ಕೂ ಒತ್ತಡ ಹೆಚ್ಚಾಗಿತ್ತು. ನಾಮನಿರ್ದೇಶನದ ಆದೇಶ ಪತ್ರ ನೀತಿ ಸಂಹಿತೆ ಜಾರಿಯಾಗುವ ಒಂದೆರೆಡು ಗಂಟೆಯ ಮುನ್ನವೇ ಮಾ.16ರಂದು ಸರ್ಕಾರದ ಅಧೀನ ಕಾರ್ಯದರ್ಶಿ ಸಹಿ ಮಾಡಿದ್ದು ಗಮನಾರ್ಹ.
ಗಂಗಾವತಿ ಉಪವಿಭಾಗ ಆಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿಗೆ ನಾಮನಿರ್ದೇಶನಗೊಂಡ ಮಲ್ಲಿಕಾರ್ಜುನ ತಟ್ಟಿ ಮತ್ತು ಇತರ ಸದಸ್ಯರು ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಅವರನ್ನು ಭಾನುವಾರ ಸನ್ಮಾನಿಸಿದರು. ಸದಸ್ಯರಾದ ಚಂದ್ರಶೇಖರ್ ಕಲ್ಮನಿ, ಹೊನ್ನೂರ್‌ಅಲಿ ಇತರರಿದ್ದರು.