

ಗಂಗಾವತಿ: ಕಲ್ಯಾಣ ಕರ್ನಾಟಕ ಭಾಗದ ಶಿಕ್ಷಣ ಮತ್ತು ಉದ್ಯೋಗ ಮೀಸಲಿಗಾಗಿ 371- ಜೆ ವಿಧೇಯಕ ಪೂರಕವಾಗಿದ್ದು, ಸಮರ್ಪಕ ಅನುಷ್ಠಾನವಾಗುವವರೆಗೂ ಹೋರಾಟ ಕೈಬಿಡುವುಲ್ಲ ಎಂದು ಕಾನೂನು ತಿದ್ದುಪಡಿ ಹೋರಾಟ ಸಮಿತಿ ಸಂಚಾಲಕ ಸೈಬಣ್ಣಾ ಜಮಾದರ್ ಹೇಳಿದರು.
ನಗರದ ಬಸವೇಶ್ವರ ಪ್ರತಿಮೆ ಬಳಿ ಆಗಮಿಸಿದ ವಿಧೇಯಕ ಸಮರ್ಪಕ ಅನುಷ್ಟಾನಕ್ಕಾಗಿ ಸೇಡಂನಿಂದ ಬೆಂಗಳೂರುವರಿಗೂ ಅಹಿಂದ ಚಿಂತಕರ ವೇದಿಕೆಯಿಂದ ಹಮ್ಮಿಕೊಂಡ ಜ್ಯೋತಿಯಾತ್ರೆಯಲ್ಲಿ ಮಾತನಾಡಿದರು. ಕಲ್ಯಾಣ ಕರ್ನಾಟಕದ ಬಗ್ಗೆ ಸರ್ಕಾರ ನಿರ್ಲಕ್ಷ್ಯವಹಿಸುತ್ತಿದ್ದು, ವಿಧೇಯಕ ಸಮರ್ಪಕ ಅನುಷ್ಠಾನಕ್ಕೆ ಆಸಕ್ತಿವಹಿಸುತ್ತಿಲ್ಲ. ಖಾಲಿಯಿರುವ ಹುದ್ದೆಗಳ ಭರ್ತಿಗೂ ಆದ್ಯತೆ ನೀಡುತ್ತಿಲ್ಲ. ವಿಧೇಯಕ ಜಾರಿ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ 3ಸಾವಿರ ಕೋ.ರೂ. ಒದಗಿಸಬೇಕಿದ್ದು, ಗಂಭೀರವಾಗಿ ಪರಿಗಣಿಸುತ್ತಿಲ್ಲ.
ಕಕ ಭಾಗದ ಸರ್ಕಾರಿ ನೌಕರರಿಗೆ ಮುಂಬಡ್ತಿಯಲ್ಲಾಗುತ್ತಿರುವ ಅನ್ಯಾಯ ಸರಿಪಡಿಸಬೇಕಿದ್ದು, ಖಾಸಗಿ ಕೈಗಾರಿಕೆ ಘಟಕಗಳಲ್ಲಿ ಸ್ಥಳೀಯರಿಗೆ ಶೇ.80 ಮೀಸಲು ನಿಗದಿಪಡಿಸಬೇಕು. ಹಕ್ಕುಗಳಿಗಾಗಿ ಸೇಡಂದಿಂದ ವೈಜನಾಥ ಪಾಟೀಲ್‌ರ ಸಮಾಧಿಯಿಂದ ಜ್ಯೋತಿ ಯಾತ್ರೆ ಹಮ್ಮಿಕೊಂಡಿದ್ದು, ಆ.29ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಸಮಾರೋಪದೊಂದಿಗೆ ಹೋರಾಟ ಮುಂದುವರಿಯಲಿದೆ ಎಂದರು.