

ಗಂಗಾವತಿ: ಬೀದಿ ಬದಿ ವ್ಯಾಪಾರಿಗಳಿಗೆ ರಸ್ತೆ ಬದಿಯಲ್ಲಿ ವ್ಯಾಪಾರ ಮಾಡಲು ಅವಕಾಶ ಕಲ್ಪಿಸುವಂತೆ ಒತ್ತಾಯಿಸಿ ಕರ್ನಾಟಕ ಪ್ರಗತಿಪರ ಬೀದಿ ವ್ಯಾಪಾರಿಗಳ ಸಂಘದ ಕಾರ್ಯಕರ್ತರು ಎಐಸಿಸಿಟಿಯು ನೇತೃತ್ವದಲ್ಲಿ ನಗರಸಭೆ ಮುಂದೆ ಗುರುವಾರ ಪ್ರತಿಭಟನೆ ನಡೆಸಿ ವ್ಯವಸ್ಥಾಪಕ ಷಣ್ಮುಖಪ್ಪಗೆ ಮನವಿ ಸಲ್ಲಿಸಿದರು.
ಸಂಘದ ಜಿಲ್ಲಾಧ್ಯಧ್ಯಕ್ಷ ವಿಜಯ ದೊರೈರಾಜು ಮಾತನಾಡಿ, ಬೀದಿ ಬದಿ ವ್ಯಾಪಾರಿಗಳನ್ನು ಮಾರುಕಟ್ಟೆ ಪ್ರಾಂಗಣಕ್ಕೆ ಸ್ಥಳಾಂತರಿಸುತ್ತಿರುವುದು ಖಂಡನೀಯವಾಗಿದ್ದು, ಬದುಕು ಕಟ್ಟಿಕೊಂಡ ವ್ಯಾಪಾರಿಗಳಿಗೆ ತೊಂದರೆ ನೀಡಲಾಗುತ್ತಿದೆ. ಹಲವು ವರ್ಷಗಳಿಂದ ಬೀದಿ ಬದಿ ವ್ಯಾಪಾರ ಮಾಡಿಕೊಂಡು ಬರುತ್ತಿರುವ ಹಲವು ಕುಟುಂಬಗಳಿಗೆ ಜೀವನ ನಿರ್ವಹಣೆಗೆ ನೆರವಾಗಿದೆ.
ಏಕಾಏಕಿ ಸ್ಥಳಾಂತರಿಸಿದರೆ ವ್ಯಾಪಾರದ ಮೇಲೆ ಪರಿಣಾಮ ಬೀರಲಿದ್ದು, ಜೀವನ ನಿರ್ವಹಣೆಗೆ ತೊಂದರೆಯಾಗಲಿದೆ. ಬೀದಿ ವ್ಯಾಪಾರಿಗಳ ರಕ್ಷಣಾ ಕಾಯ್ದೆ 2014ರಂತೆ ಯಾವುದೇ ವ್ಯಾಪಾರಿಗಳನ್ನು ಒಕ್ಕಲೆಬ್ಬಿಸಲು ಬರಲ್ಲ. ಈ ಬಗ್ಗೆ ಅಧಿಕಾರಿಗಳು ಗಂಭೀರ ಪರಿಗಣಿಸಿ, ಬದಿ ಬದಿಯಲ್ಲಿ ವ್ಯಾಪಾರ ಮಾಡಲು ಅವಕಾಶ ಕಲ್ಪಿಸುವಂತೆ ಒತ್ತಾಯಿಸಿದರು.
ಪದಾಧಿಕಾರಿಗಳಾದ ಸೈಯದ್ ಬುರಾನುದ್ದೀನ್, ಕೆಂಚಪ್ಪ ಹಿರೇಖೇಡಾ, ಸಣ್ಣ ಹನುಮಂತಪ್ಪ, ಚಾಂದ್ ಪಾಷಾ, ಕರೀಂಸಾಬ್, ಬಸವರಾಜ, ನಾರಾಯಣಪ್ಪ, ಯುಸೂಫ್ ಇತರರಿದ್ದರು.