ತುಂಗಭದ್ರಾ ನದಿಗೆ ಜಲಾಶಯದಿಂದ ನೀರು

TB DAM
ಗಂಗಾವತಿ ತಾಲೂಕಿನ ಆನೆಗೊಂದಿಯ ತುಂಗಭದ್ರಾ ನದಿಯಲ್ಲಿರುವ ಶ್ರೀಕೃಷ್ಣ ದೇವರಾಯ ಶಿಲಾಮಂಟಪ ಸಂಪರ್ಕ ಕಡಿತಗೊಂಡಿರುವುದು.
Published on

ಗಂಗಾವತಿ: ತುಂಗಭದ್ರಾ ಜಲಾಶಯದಿಂದ ಹೆಚ್ಚುವರಿ ನೀರು ನದಿ ಪಾತ್ರಕ್ಕೆ ಹರಿಸುತ್ತಿರುವ ಪರಿಣಾಮ ತಾಲೂಕಿನ ತುಂಗಭದ್ರಾ ನದಿ ತೀರದಲ್ಲಿ ಕಟ್ಟೆಚ್ಚರ ವಹಿಸಿಲಾಗಿದೆ.

ಕಳೆದ 7 ತಿಂಗಳಿಂದ ಬರಿದಾಗಿದ್ದ ತುಂಗಭದ್ರಾ ನದಿಗೆ ನೀರು ಹರಿದು ಬರುತ್ತಿದ್ದು, ಜೀವ ಕಳೆ ಬಂದಿದೆ. ತಾಲೂಕಿನ ಆನೆಗೊಂದಿ, ಸಣಾಪುರ, ನವವೃಂದಾವನಗಡ್ಡಿ, ಗೂಡಿಬಂಡಿ ಕ್ಯಾಂಪ್, ಅಯೋಧ್ಯ, ಚಿಕ್ಕಜಂತಕಲ್, ವಿರುಪಾಪುರಗಡ್ಡಿ, ಹನುಮನಹಳ್ಳಿ ವ್ಯಾಪ್ತಿಯ ನದಿಗೆ ನೀರು ಹರಿದು ಬರುತ್ತಿದೆ.

ಮೀನುಗಾರಿಕೆ ಸೇರಿ ನದಿ ಪಾತ್ರದಲ್ಲಿ ಯಾವುದೇ ಚಟುವಟಿಕೆ ಕೈಗೊಳ್ಳದಂತೆ ತಾಲೂಕಾಡಳಿತ ಗ್ರಾಮಸ್ಥರಿಗೆ ಸೂಚನೆ ನೀಡಿದ್ದು, ಗ್ರಾಪಂ ಮೂಲಕ ಡಂಗೂರ ಸಾರಲಾಗಿದೆ. ನದಿ ತೀರದ ಗ್ರಾಮಗಳಿಗೆ ಕಂದಾಯ ಮತ್ತು ಗ್ರಾಪಂ ಸಿಬ್ಬಂದಿ ತೆರಳಿ, ನದಿಪಾತ್ರದಲ್ಲಿ ಇಳಿಯದಂತೆ ಸೂಚನೆ ನೀಡಿದ್ದು, ಸುರಕ್ಷಿತ ಪ್ರದೇಶದಲ್ಲಿರಲು ತಿಳಿಸಿದೆ. ಸಣಾಪುರ, ಆನೆಗೊಂದಿ, ವಿರುಪಾಪುರ ಗಡ್ಡಿಯಲ್ಲಿ ನೀರು ಹರಿದು ಬರುತ್ತಿದ್ದಂತೆ ಆನೆಗೊಂದಿಯ ಶ್ರೀಕೃಷ್ಣದೇವರಾಯ ಶಿಲಾಮಂಟಪದ ಸಂಪರ್ಕ ಕಡಿತಗೊಂಡಿದೆ. ನೀರು ನಾಯಿಗಳ ಅಬ್ಬರ ಹೆಚ್ಚಾಗಿದ್ದು, ಎಲ್ಲೆಂದರಲ್ಲಿ ಗೋಚರಿಸುತ್ತಿವೆ.

ಈ ಬಗ್ಗೆ ಗ್ರೇಡ್ 2 ತಹಸೀಲ್ದಾರ್ ಮಹಾಂತಗೌಡ ಗೌಡರ್ ಮಾತನಾಡಿ, ಜಲಾಶಯದಿಂದ ನದಿಪಾತ್ರಕ್ಕೆ ನೀರು ಹರಿಸಿದ್ದು, ಹರಿವಿನ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಲಿದೆ. ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದ್ದು, ಗ್ರಾಮಸ್ಥರಿಗೂ ಸೂಚನೆ ನೀಡಲಾಗಿದೆ. ನದಿ ಪಾತ್ರದಲ್ಲಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿದೆ ಎಂದರು. ಕಂದಾಯ ನಿರೀಕ್ಷಕ ಮಂಜುನಾಥ ಹಿರೇಮಠ, ಗ್ರಾಮೀಣ ಪಿಎಸೈ ಪುಂಡಪ್ಪ, ಗ್ರಾಮಾಡಳಿತಾಧಿಕಾರಿ ಮಂಜುನಾಥ ದುಮ್ಮಾಣಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net