

ಗಂಗಾವತಿ: ತಾಲೂಕಿನ ಶ್ರೀರಾಮನಗರ ವ್ಯಾಪ್ತಿಯ ತುಂಗಭದ್ರಾ ವಿತರಣೆ ಕಾಲುವೆ 25ಕ್ಕೆ ಏ.15ರವರೆಗೂ ನೀರು ಹರಿಸಲು ಒತ್ತಾಯಿಸಿ ವಿವಿಧ ಭಾಗದ ರೈತರು ತಾಲೂಕಿನ ವಡ್ಡರಹಟ್ಟಿ ಕ್ಯಾಂಪ್ ಜಲಸಂಪನ್ಮೂಲ ಇಲಾಖೆ ಕಚೇರಿ ಮುಂಭಾಗ ಶನಿವಾರ ಪ್ರತಿಭಟನೆ ನಡೆಸಿದರು.
ರೈತ ಮುಖಂಡ ವೆಂಕಟೇಶ್ವರರಾವ್ ಮಾತನಾಡಿ, 25ನೇ ವಿತರಣೆ ಕಾಲುವೆ ವ್ಯಾಪ್ತಿಯಲ್ಲಿ ಬರುವ ಬಹುತೇಕ ಕೃಷಿ ಭೂಮಿ ಭತ್ತವನ್ನೇ ಅವಲಂಬಿಸಿದೆ. ಈಗಾಗಲೇ ನಾಟಿ ಮಾಡಲಾಗಿದೆ. ನೀರಿನ ಕೊರತೆಯಿಂದ ಇಳುವರಿ ಮೇಲೆ ಪರಿಣಾಮ ಬೀರಲಿದೆ. ಟೇಲಂಡ್‌ಗೆ ನೀರು ಹರಿಸುವ ಉದ್ದೇಶದಿಂದ ವಿತರಣೆ ಕಾಲುವೆ ಗೇಜ್ ಕಡಿಮೆ ಮಾಡಲಾಗುತ್ತಿದ್ದು, 130 ತಿರುವಣಿ ಬದಲು 90ಕ್ಕಿಳಿಸುತ್ತಿರುವುದು ಸರಿಯಲ್ಲ. ಅದರಂತೆ ಮೇಲ್ಭಾಗದ ರೈತರು ಪಂಪ್‌ಸೆಟ್‌ಗಳ ಮೂಲಕ ನೀರು ಕಳವು ಮಾಡುತ್ತಿದ್ದು, ಜಲಸಂಪನ್ಮೂಲ ಇಲಾಖೆ ಅಧಿಕಾರಿಗಳ ಗಮನಕ್ಕಿದ್ದರೂ ಕ್ರಮವಾಗಿಲ್ಲ. ನೀರು ಬಳಕೆದಾರ ಸಹಕಾರ ಸಂಘದಿಂದ ಮನವಿ ಸಲ್ಲಿಸಿದರೂ ಯಾವುದೇ ಪ್ರಕರಣವಾಗಿಲ್ಲ. ಏ.15ರವರಿಗೆ ನೀರು ಹರಿಸುವರೆಗೂ ಹೋರಾಟ ಮುಂದುವರಿಯಲಿದೆ ಎಂದು ಎಚ್ಚರಿಸಿ ಇಇ ಎಂ.ಎಸ್.ಗೋಡೆಕರ್‌ಗೆ ಮನವಿ ಸಲ್ಲಿಸಿದರು.
ರೈತರಾದ ಪಿ.ರಾಮಕೃಷ್ಣ, ದುರ್ಗಾರಾವ್, ಎಂ.ರಾಂಬಾಬು, ಎಸ್.ಮಲ್ಲೇಶ್ವರರಾವ್, ಎನ್.ಶ್ರೀನಿವಾಸ, ಎ.ರಂಗರಾವ್, ಪೀರ್‌ಸಾಬ್, ನಾಗೇಶ ಅಲ್ಲದೆ ಶ್ರೀರಾಮನಗರ, ಕುಂಟೋಜಿ, ಬರಗೂರು, ಮುಷ್ಟೂರು ಕ್ಯಾಂಪ್, ಹೆಬ್ಬಾಳ್ ಕ್ಯಾಂಪ್ ಸೇರಿ ವಿವಿಧ ಭಾಗದ ರೈತರು ಭಾಗವಹಿಸಿದ್ದರು.