

ಗಂಗಾವತಿ: ಇಲ್ಲಿನ ಶಾರದಾ ನಗರದ ಶ್ರೀ ಶಾರದಾಂಬೆ ದೇವಾಲಯದಲ್ಲಿ ಶಂಕರ ಮಠದಿಂದ ಸೌಂದರ್ಯ ಲಹರಿ ಪಾರಾಯಣ ಸಪ್ತಾಹಕ್ಕೆ ಮಂಗಳವಾರ ಚಾಲನೆ ನೀಡಲಾಯಿತು.
ಶೃಂಗೇರಿ ಮಠದ ಪೀಠಾಧಿಪತಿ ಶ್ರೀಭಾರತಿ ತೀರ್ಥ ಸ್ವಾಮೀಜಿ ಸನ್ಯಾಸ ಸ್ವೀಕರಿಸಿದ ಸುವರ್ಣ ಮಹೋತ್ಸವ ಹಿನ್ನೆಲೆಯಲ್ಲಿ ದೇಶಾದ್ಯಂತ ವಿವಿಧ ಧಾರ್ಮಿಕ, ಸಮಾಜ ಸೇವಾ ಚಟುವಟಿಕೆ ಹಮ್ಮಿಕೊಳ್ಳಲಾಗಿದೆ. ಪೂರಕವಾಗಿ ಸ್ಥಳೀಯ ದೇವಾಲಯದಲ್ಲಿ ಅ.22ರಿಂದ 28ರವರೆಗೆ ಆದಿಗುರು ಶ್ರೀ ಶಂಕರಾಚಾರ್ಯ ವಿರಚಿತ ಸೌಂದರ್ಯ ಲಹರಿ ಸಾಮೂಹಿಕ ಪಾರಾಯಣ ನಡೆಯಲಿದೆ.
ಶೇಷ ಪೂಜೆಯೊಂದಿಗೆ ಚಾಲನೆ ನೀಡಿದ ಸ್ಥಳೀಯ ಮಠದ ಧರ್ಮದರ್ಶಿ ನಾರಾಯಣರಾವ್ ವೈದ್ಯ ಮಾತನಾಡಿ, ಧಾರ್ಮಿಕ, ಆಧ್ಯಾತ್ಮಿಕ ಮತ್ತು ಸಮಾಜಮುಖಿ ಚಟುವಟಿಕೆಗಳ ಮೂಲಕ ಜಗತ್ತಿನಾದ್ಯಂತ ಶ್ರೀಮಠ ಖ್ಯಾತಿಗಳಿಸಿದ್ದು, ಸನ್ಯಾಸತ್ವ ಸ್ವೀಕರಿಸಿದ 50ನೇ ವರ್ಷಾಚರಣೆ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲ ಮಠಗಳಲ್ಲಿ ವಿಭಿನ್ನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಬೆಂಗಳೂರಿನಲ್ಲಿ ಸಮಾರೋಪ ಹಮ್ಮಿಕೊಳ್ಳಲಾಗಿದ್ದು, ಶ್ರೀಮಠದ ಕಿರಿಯ ಶ್ರೀಗಳಾದ ಮಧುಶೇಖರ್ ಸ್ವಾಮೀಜಿ ಸಾನ್ನಿಧ್ಯದಲ್ಲಿ 2 ಲಕ್ಷಕ್ಕೂ ಹೆಚ್ಚು ಮಹಿಳೆಯರಿಂದ 2 ಕೋಟಿ ಪಾರಾಯಣ ಸಂಪನ್ನಗೊಳ್ಳಲಿದೆ. ಶಾರದಾ ಭಜನಾ ಮಂಡಳಿ, ಸೌಂದರ್ಯ ಲಹರಿ ಭಗಿನೀಯರ ಸಂಘ ಸೇರಿ ವಿವಿಧ ಭಜನಾ ಮಂಡಳಿ ಸದಸ್ಯರಿದ್ದರು.