

ಗಂಗಾವತಿ: ಬಿಜೆಪಿ ನಗರ ಮತ್ತು ಗ್ರಾಮೀಣ ಮಂಡಲ ಪದಾಧಿಕಾರಿಗಳ ಆಯ್ಕೆ ವಿಚಾರದಲ್ಲಿ ಹಾಲಿ-ಮಾಜಿ ಶಾಸಕರ ಪರ ಕಾರ್ಯಕರ್ತರ ನಡುವೆ ಅಸಮಾಧಾನ ವ್ಯಕ್ತವಾಗಿದ್ದು, ಸಾಮಾಜಿಕ ಜಾಲತಾಣಗಳ ಮೂಲಕ ಕೆಲ ಕಾರ್ಯಕರ್ತರು ಹೊರಹಾಕಿದ್ದಾರೆ.
2008ರಿಂದ ಮಾಜಿ ಶಾಸಕ ಪರಣ್ಣ ಮುನವಳ್ಳಿ ನಿಯಂತ್ರಣದಲ್ಲಿದ್ದ ಬಿಜೆಪಿ, ಪ್ರಸ್ತುತ ಹಾಲಿ ಶಾಸಕ ಗಾಲಿ ಜನಾರ್ದನರೆಡ್ಡಿ ವಶಕ್ಕೆ ತೆಗೆದುಕೊಂಡಿದ್ದು, ಮೊದಲ ಹಂತದಲ್ಲಿ ನಗರ ಮತ್ತು ಗ್ರಾಮೀಣ ಮಂಡಲ ಅಧ್ಯಕ್ಷರನ್ನು ತಮ್ಮ ಬೆಂಬಲಿಗರನ್ನೇ ಆಯ್ಕೆ ಮಾಡುವ ಮೂಲಕ ಮಾಜಿ ಶಾಸಕ ಪರಣ್ಣ ಮುನವಳ್ಳಿಗೆ ಶಾಕ್ ನೀಡಿದ್ದಾರೆ. ವಲಸಿಗ ಕಾರ್ಯಕರ್ತರಿಗೆ ಅವಕಾಶ ಸಿಕ್ಕಿದ್ದು, ಪದಾಧಿಕಾರಿಗಳ ನಿರೀಕ್ಷೆಯಲ್ಲಿದ್ದ ಮೂಲ ಬಿಜೆಪಿಗರಲ್ಲಿ ಅಸಮಾಧಾನ ಹೆಚ್ಚಾಗಿದೆ. ಪದಾಧಿಕಾರಿಗಳ ಆಯ್ಕೆ ವಿಚಾರದಲ್ಲಿ ಸಭೆ ಸೇರಿದ್ರಾ, ಅಭಿಪ್ರಾಯ ಸಂಗ್ರಹಿಸಿದ್ರಾ ಮತ್ತು ಹಿರಿಯ ಮುಖಂಡರ ಗಮನಕ್ಕೆ ತಂದಿದ್ರಾ ಎಂಬ ಚರ್ಚೆಗಳು ಶುರುವಾಗಿದ್ದು, ಯಾರಿಂದಲೂ ಉತ್ತರ ಸಿಕ್ಕಿಲ್ಲ ಮತ್ತು ಯಾರಲ್ಲೂ ಉತ್ತರವಿಲ್ಲ.
ಸೋಲಿಸಿದವರಿಗೆ ಪಟ್ಟ: ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ವಿರೋಧಿಸಿ, ಕೆಆರ್‌ಪಿಪಿ ಬೆಂಬಲಿಸಿದ್ದವರಿಗೆ ನಗರ ಮತ್ತು ಮಂಡಲ ಅಧಿಕಾರ ಸಿಕ್ಕಿದ್ದು, ಪಕ್ಷದ ಅಧಿಕೃತ ಅಭ್ಯರ್ಥಿ ಪರಣ್ಣ ಮುನವಳ್ಳಿ ಸೋಲಿಗೆ ಕಾರಣರಾದವರಿಗೆ ಮಣೆ ಹಾಕಲಾಗಿದೆ. ನಗರಸಭೆ ಚುನಾವಣೆಯಲ್ಲೂ ಬಿಜೆಪಿಯಿಂದ ಬಂಡಾಯ ಎದ್ದು, ಪಕ್ಷೇತರರಾಗಿ ಸ್ಪರ್ಧಿಸಿದ್ದ ಚಂದ್ರು ಹಿರೂರ್‌ಗೆ ನಗರ ಮಂಡಲ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ. ಪಕ್ಷ ಸಂಘಟನೆಯಲ್ಲಿ ಎಂದಿಗೂ ಕಾಣಿಸಿಕೊಳ್ಳದವರಿಗೆ ಅವಕಾಶ ನೀಡಿದರೆ ಪಕ್ಷದ ಗತಿಯೇನು, ಇನ್ನೂ ಹಲವು ವರ್ಷಗಳಿಂದ ಪಕ್ಷಕ್ಕಾಗಿ ದುಡಿದ ಕಾರ್ಯಕರ್ತರನ್ನು ಕಡೆಗಣಿಸಿದರೆ ಹೇಗೆ ಎಂದು ಕಾರ್ಯಕರ್ತರ ಪ್ರಶ್ನೆಯಾಗಿದ್ದರೂ, ಯಾವೊಬ್ಬ ಮುಖಂಡರು ಉತ್ತರ ನೀಡುತ್ತಿಲ್ಲ. ಸಾಮಾಜಿಕ ಜಾಲತಾಣದ ಮೂಲಕ ಪರಣ್ಣ ಮುನವಳ್ಳಿ ಬೆಂಬಲಿಗರು ಅಸಮಾಧಾನ ವ್ಯಕ್ತಪಡಿಸಿದ್ದು, ಈ ವಿಚಾರ ಜಿಲ್ಲಾಧ್ಯಕ್ಷರ ಅಂಗಳಕ್ಕೆ ತೆರಳಿದೆ.
ಕಚೇರಿ ಸ್ಥಿತಿಯೇನು?: ಬಿಜೆಪಿ ಕಚೇರಿ ಮಾಜಿ ಶಾಸಕ ಪರಣ್ಣ ಮುನವಳ್ಳಿ ಅಧಿಕೃತ ನಿವಾಸದಲ್ಲಿದ್ದು, ಪರಣ್ಣ ಬೆಂಬಲಿಗರನ್ನು ಕಡೆಗಣಿಸಿದ್ದರಿಂದ ಪಕ್ಷದ ಕಚೇರಿ ಅಲ್ಲೇ ಉಳಿಯುವುದೆ ಅಥವಾ ಬೇರೆಡೆ ಸ್ಥಳಾಂತರಗೊಳ್ಳುವುದೆ ಎಂಬ ಚರ್ಚೆ ಶುರುವಾಗಿದೆ. 2016ರಲ್ಲಿ ಇದೇ ಸ್ಥಿತಿ ನಿರ್ಮಾಣವಾಗಿದ್ದಾಗ ಬಿಜೆಪಿ ಕಚೇರಿ ಕೊಪ್ಪಳ ರಸ್ತೆಗೆ ಶ್‌ಟಿ ಮಾಡಲಾಗಿತ್ತು. ಬಾಡಿಗೆ, ವಿದ್ಯುತ್ ಬಿಲ್ ಮತ್ತು ನಿರ್ವಹಣೆ ವೆಚ್ಚ ವಿಚಾರದಲ್ಲಿ ಗೊಂದಲ ಮೂಡಿದ್ದರಿಂದ ಪುನಃ 2018ರಲ್ಲಿ ಪರಣ್ಣ ಮುನವಳ್ಳಿ ನಿವಾಸಕ್ಕೆ ಸ್ಥಳಾಂತರಿಸಲಾಗಿತ್ತು. ಅಸಮಾಧಾನ ಶಮನವಾಗದಿದ್ದರೆ ಬಿಜೆಪಿ ಕಚೇರಿ ಕನಕಗಿರಿ ರಸ್ತೆಯ ಶಾಸಕ ಗಾಲಿ ಜನಾರ್ದನರೆಡ್ಡಿ ನಿವಾಸದತ್ತ ಸ್ಥಳಾಂತರಗೊಳ್ಳುವ ಎಲ್ಲ ಲಕ್ಷಣಗಳು ಕಂಡು ಬರುತ್ತಿವೆ. ಹಾಲಿ ಶಾಸಕ ಗಾಲಿ ಜನಾರ್ದನರೆಡ್ಡಿ ಮತ್ತು ಮಾಜಿ ಶಾಸಕ ಪರಣ್ಣ ಮುನವಳ್ಳು ನಡುವೆ ಯಾವುದೇ ಭಿನ್ನಾಭಿಪ್ರಾಯ ಕಂಡು ಬರದಿದ್ದರೂ, ಕಾರ್ಯಕರ್ತರಲ್ಲಿ ವಿಧಾನಸಭೆ ಚುನಾವಣೆಯಿಂದಲೂ ಈ ಭಿನ್ನತೆ ಮುಂದುವರಿದಿದೆ.
ಗಾಲಿ ಬೆಂಬಲಿಗರಿಗೆ ಮಣೆ: ಬಿಜೆಪಿ ನಗರ ಮಂಡಲ ಅಧ್ಯಕ್ಷರಾಗಿ ಚಂದ್ರಶೇಖರ್ ಬಸವರಾಜ ಹಿರೂರ್ ಮತ್ತು ಗ್ರಾಮೀಣ ಮಂಡಲ ಅಧ್ಯಕ್ಷರಾಗಿ ದುರುಗಪ್ಪ ಕೆ.ಆಗೋಲಿ ಆಯ್ಕೆಯಾಗಿದ್ದು, ಇಬ್ಬರೂ ಶಾಸಕ ಗಾಲಿ ಜನಾರ್ದನರೆಡ್ಡಿ ಬೆಂಬಲಿಗರಾಗಿದ್ದಾರೆ. ಚಂದ್ರು ಹಿರೂರ್ ನಗರಸಭೆ ಚುನಾವಣೆಯಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿದ್ದರೆ, ದುರುಗಪ್ಪ ಕೆ.ಆಗೋಲಿ ಅವರು ಇರಕಲ್‌ಗಡಾ ಕ್ಷೇತ್ರದಿಂದ ಬಿಜೆಪಿಯಿಂದ ತಮ್ಮ ಪತ್ನಿಗೆ ಅವಕಾಶ ನೀಡಿದ್ದರು. ಆ ಚುನಾವಣೆಯಲ್ಲಿ ಇಬ್ಬರೂ ಸೋತಿದ್ದರು. 2023ರಲ್ಲಿ ಬಿಜೆಪಿ ತೊರೆದು ಕೆಆರ್‌ಪಿಪಿಯೊಂದಿಗೆ ಗುರುತಿಸಿಕೊಂಡಿದ್ದ ಇಬ್ಬರಿಗೂ ಸ್ಥಾನ ಸಿಕ್ಕಿದ್ದು, ಪಕ್ಷಕ್ಕಾಗಿ ದುಡಿದವರನ್ನು ಕಡೆಗಣಿಸಲಾಗಿದೆ. ಕ್ಷೇತ್ರವನ್ನು ಹಿಡಿತದಲ್ಲಿಟ್ಟುಕೊಂಡ ಶಾಸಕ ಗಾಲಿ ಜನಾರ್ದನರೆಡ್ಡಿ, ನಗರಸಭೆ ಆಡಳಿತವನ್ನು ತಮ್ಮ ಬೆಂಬಲಿಗರಿಗೆ ವಹಿಸುವ ಮೂಲಕ ಪಾರುಪತ್ಯ ಮೆರೆದಿದ್ದರೆ, ಪಕ್ಷದಲ್ಲೂ ತಮ್ಮ ಬೆಂಬಲಿಗರಿಗೆ ಮಣೆ ಹಾಕುವ ಮೂಲಕ ಮತ್ತೊಮ್ಮೆ ಮೇಲುಗೈ ಸಾಧಿಸಿದ್ದಾರೆ.
ನಗರ ಮತ್ತು ಗ್ರಾಮೀಣ ಮಂಡಲ ಪದಾಧಿಕಾರಿಗಳನ್ನು ರಾಜ್ಯ ಸಮಿತಿ ಚುನಾವಣಾಧಿಕಾರಿ ಆಯ್ಕೆ ಮಾಡುತ್ತಿದ್ದು, ಸ್ಥಳೀಯ ಕೋರ್‌ಕಮಿಟಿ ಮತ್ತು ಮುಖಂಡರ ಶಿಫಾರಸಿನಂತೆ ಆಯ್ಕೆ ಮಾಡಲಾಗಿದೆ. ಯಾರೇ ಆಯ್ಕೆಯಾದರೂ ಪಕ್ಷ ಸಂಘಟನೆಗೆ ಒತ್ತು ನೀಡಲಿದ್ದಾರೆ.
ಬಿ.ಎಚ್.ಎಂ. ತಿಪ್ಪೇರುದ್ರಸ್ವಾಮಿ, ಪಕ್ಷದ ಹಿರಿಯ ಮುಖಂಡ