

ಗಂಗಾವತಿ: ತಾಲೂಕಿನ ಸಂಗಾಪುರ ಗ್ರಾಪಂನಲ್ಲಿ ನರೇಗಾ ಯೋಜನೆಯಡಿಯಲ್ಲಾಗಿರುವ ಅಕ್ರಮ ತನಿಖೆಗೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ ಶೆಟ್ಟಿ ಬಣದ ತಾಲೂಕು ಸಮಿತಿ ಸದಸ್ಯರು ನಗರದ ತಾಪಂ ಕಚೇರಿ ಮುಂದೆ ಗುರುವಾರ ಪ್ರತಿಭಟನೆ ನಡೆಸಿ ಇಒ ಲಕ್ಷ್ಮೀದೇವಿ ಯಾದವ್‌ಗೆ ಮನವಿ ಸಲ್ಲಿಸಿದರು.
ಜಿಲ್ಲಾಧ್ಯಕ್ಷ ಪಂಪಣ್ಣನಾಯಕ ಮಾತನಾಡಿ, ಸಂಗಾಪುರ ಗ್ರಾಪಂ ನರೇಗಾ ಯೋಜನೆ ಅನುಷ್ಠಾನದಲ್ಲಿ ಲೋಪವಾಗಿದ್ದು, ಕೂಲಿಕಾರರಿಗೆ ಕೆಲಸ ಸಿಗುತ್ತಿಲ್ಲ. ವಿದ್ಯಾರ್ಥಿಗಳ ಹೆಸರಿನಲ್ಲಿ ಜಾಬ್‌ಕಾರ್ಡ್ ಸೃಷ್ಟಿಸಿರುವ ಸಿಬ್ಬಂದಿ, ಅನುದಾನ ದುರ್ಬಳಕೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಪ್ರಶ್ನಿಸುವ ಕೂಲಿಕಾರರಿಗೆ ಕೆಲಸ ನೀಡದೇ ತೊಂದರೆಕೊಡುತ್ತಿದ್ದಾರೆ. ಪಿಡಿಒ ಮತ್ತು ನರೇಗಾ ನಿರ್ವಹಿಸುವ ಕಂಪ್ಯೂಟರ್ ಆಪರೇಟರ್ ಕಚೇರಿಯಲ್ಲಿರಲ್ಲ, ಸಾರ್ವಜನಿಕರ ಸಮಸ್ಯೆಗೂ ಸ್ಪಂದಿಸುತ್ತಿಲ್ಲ. ತಾಪಂ ಸಹಾಯಕ ನಿರ್ದೇಶಕರ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಸಂಬಂಧಪಟ್ಟ ಅಧಿಕಾರಿಗಳು ತನಿಖೆ ನಡೆಸುವಂತೆ ಒತ್ತಾಯಿಸಿದರು. ಗ್ರಾಮೀಣ ಘಟಕದ ಅಧ್ಯಕ್ಷ ಮುತ್ತಳ್ಳಿಗೆ ರಾಘು, ಸದಸ್ಯರಾದ ಬಾಷಾ, ಜೀವಾನಂದ, ಮೋಹನಬಾಬು, ನಾಗರಾಜ್ ನಾಯಕ, ಜಗನ್ನಾಥ, ವೀರೇಶ ಇತರರಿದ್ದರು.