

ಗಂಗಾವತಿ: ಗುರಿ ಮತ್ತು ಗುರುವಿಲ್ಲದೆ ಸಮಾಜ ಕವಲುದಾರಿಯಲ್ಲಿದ್ದು, ಪರಿವರ್ತನೆಯ ಹೆದ್ದಾರಿಗೆ ಬರಲು ಬಸವ ಮಾರ್ಗದಿಂದ ಮಾತ್ರ ಸಾಧ್ಯ ಎಂದು ಚಿತ್ರದುರ್ಗ ಮುರಘಾಮಠದ ಜಗದ್ಗುರು ಡಾ.ಶಿವಮೂರ್ತಿ ಮುರಘಾಶ್ರೀ ಹೇಳಿದರು.
ನಗರದ ಕಲ್ಮಠ ಪುರಾಣ ಮಂಟಪದಲ್ಲಿ ಲಿಂ.ಶ್ರೀ ಕೊಟ್ಟೂರೇಶ್ವರ ಶಿವಯೋಗಿಗಳ 101ನೇ ಸ್ಮರಣೋತ್ಸವ ನಿಮಿತ್ತ ಗುರುವಾರ ಆಯೋಜಿಸಿದ್ದ ಶರಣ ಸಂಸ್ಕೃತಿ ಉತ್ಸವದ ಸಮಾರೋಪದಲ್ಲಿ ಮಾತನಾಡಿದರು. ಪ್ರತಿಯೊಬ್ಬ ಸಾಧಕನ ಹಿಂದೆ ಬಸವಮಾರ್ಗದ ಚಿಂತನೆಯಿದ್ದು, ಉನ್ನತ ಸಾಧನೆಗೆ ನೆರವಾಗಿದೆ. 12ನೇ ಶತಮಾನದಲ್ಲಿ ಬಸವಣ್ಣ ಪ್ರತಿಯೊಬ್ಬರಿಗೂ ಸೂಕ್ತ ಸ್ಥಾನಮಾನ ನೀಡುವ ಮೂಲಕ ಪರಿವರ್ತನೆಯ ಮುಖ್ಯವಾಹಿನಿಗೆ ತಂದಿದ್ದಾರೆ ಎಂದರು.
ಶಿರಹಟ್ಟಿಯ ಕೀರ ದಿಂಗಾಲೇಶ್ವರ ಸ್ವಾಮೀಜಿ ಮಾತನಾಡಿದರು. ಕಲ್ಲುಮಠದ ಡಾ.ಕೊಟ್ಟೂರು ಸ್ವಾಮೀಜಿ, ಹಿರೇನಾಗಾವಿ ಶಾಂತಲಿಂಗೇಶ್ವರ ಸಂಸ್ಥಾನ ಮಠದ ಜಯಶಾಂತಲಿಂಗ ಸ್ವಾಮೀಜಿ, ಸವಣೂರು ದೊಡ್ಡ ಹುಣಿಸಿಮಠದ ಚನ್ನಬಸವ ಸ್ವಾಮೀಜಿ ಇತರರಿದ್ದರು.