

ಗಂಗಾವತಿ: ಸೇವಾಭದ್ರತೆ ಒದಗಿಸುವಂತೆ ಆಗ್ರಹಿಸಿ ಸರ್ಕಾರಿ ಪದವಿ ಕಾಲೇಜಿನ ಅತಿಥಿ ಉಪನ್ಯಾಸಕರ ಸಂಘ ತಾಲೂಕು ಘಟಕದಿಂದ ಎಂಎಲ್ಸಿ ಶಶೀಲ್ ನಮೋಶಿಗೆ ಭಾನುವಾರ ಮನವಿ ಸಲ್ಲಿಸಲಾಯಿತು.
ನಗರದ ಸರ್ಕೀಟ್ ಹೌಸ್‌ನಲ್ಲಿ ಭೇಟಿಯಾದ ಸಂಘದ ಪದಾಧಿಕಾರಿಗಳು, ಅತಿಥಿ ಉಪನ್ಯಾಸಕರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಚರ್ಚಿಸಿದರು.
ಸಂಘದ ತಾಲೂಕಾಧ್ಯಕ್ಷ ಪಂಚಾಕ್ಷರಯ್ಯ ಹಿರೇಮಠ ಮಾತನಾಡಿ, ಹಲವು ವರ್ಷಗಳಿಂದ ದುಡಿಯುತ್ತಿರುವ ಅತಿಥಿ ಉಪನ್ಯಾಸಕರಿಗೆ ಸೇವಾಭದ್ರತೆಯಿಲ್ಲದಂತಾಗಿದ್ದು, ಕೋರ್ಟ್ ಆದೇಶ ಮುಂದಿಟ್ಟುಕೊಂಡು ರಾಜ್ಯ ಸರ್ಕಾರ ಕಾಲಹರಣ ಮಾಡುತ್ತಿದೆ. ಇದುವರೆಗೆ ದುಡಿದವರಿಗೆ ಆತಂಕ ಶುರುವಾಗಿದ್ದು, ಇತ್ಯರ್ಥಕ್ಕೆ ಗಮನಹರಿಸಬೇಕಿದೆ. ಸೇವಾಭದ್ರತೆ ಒದಗಿಸುವಂತೆ ಸರ್ಕಾರದ ಮೇಲೆ ಒತ್ತಡ ಹೇರಬೇಕಲ್ಲದೇ, ಅಧಿವೇಶನದಲ್ಲಿ ಗಮನಸೆಳೆಯುವಂತೆ ಮನವಿ ಮಾಡಿದರು.
ಮನವಿ ಸ್ವೀಕರಿಸಿದ ಎಂಎಲ್ಸಿ ಶಶೀಲ್ ನಮೋಶಿ ಮಾತನಾಡಿ, ಅತಿಥಿ ಉಪನ್ಯಾಸಕರ ಸಮಸ್ಯೆಗಳ ಬಗ್ಗೆ ಸರ್ಕಾರದ ಗಮನಕ್ಕೆ ತಂದಿದ್ದು, ಹಲವು ವರ್ಷಗಳಿಂದ ದುಡಿದ ಉಪನ್ಯಾಸಕರನ್ನು ಕೈಬಿಡದೇ ಮಾನವೀಯ ನೆಲೆಯ ಮೇಲೆ ಮುಂದುವರಿಸುವಂತೆ ಸರ್ಕಾರವನ್ನು ಒತ್ತಾಯಿಸಲಾಗುವುದು ಎಂದರು. ಪದಾಧಿಕಾರಿಗಳಾದ ಗುಂಡೂರು ಪವನಕುಮಾರ, ಶಿವಾನಂದ ಮೇಟಿ ಇತರರಿದ್ದರು.