ಸಾಮಾಜಿಕ ಭದ್ರತಾ ಯೋಜನೆಗಳು ಬಡವರಿಗೆ ಅನುಕೂಲ

SABHE
Published on

ಕನಕಗಿರಿ: ಸಾಮಾಜಿಕ ಭದ್ರತಾ ಯೋಜನೆಗಳಾದ ಪಿಎಂಜೆಜೆಬಿವೈ, ಪಿಎಂಎಸ್‌ಬಿವೈ ಯೋಜನೆಗಳು ನಾಗರಿಕರಿಗೆ ವಿಶೇಷವಾಗಿ ಸಮಾಜದ ಕನಿಷ್ಠ ವರ್ಗಗಳಿಗೆ ಜೀವ ಮತ್ತು ಅಪಘಾತ ವಿಮೆ ರಕ್ಷಣೆಯನ್ನು ಒದಗಿಸುವ ಗುರಿ ಹೊಂದಿವೆ ಎಂದು ಗಂಗಾವತಿ ಎಸ್‌ಬಿಐ ಆರ್ಥಿಕ ಸಾಕ್ಷರತಾ ಸಲಹೆಗಾರ ಟಿ.ಆಂಜನೇಯ ಹೇಳಿದರು.

ತಾಲೂಕಿನ ಬಸರಿಹಾಳ ಗ್ರಾಪಂನಲ್ಲಿ ಹುಲಿಹೈದರ ಎಸ್‌ಬಿಐ ಶಾಖೆಯಿಂದ ಮಂಗಳವಾರ ಹಮ್ಮಿಕೊಂಡಿದ್ದ ಜನ ಸುರಕ್ಷಾ ಯೋಜನೆಯ ಅಭಿಯಾನದಲ್ಲಿ ಮಾತನಾಡಿ, ಗ್ರಾಮ ಪಂಚಾಯತಿ ಮಟ್ಟದಲ್ಲಿ ಸೂಕ್ಷ್ಮ ವಿಮಾ ಯೋಜನೆಗಳನ್ನು ಹೆಚ್ಚಿಸಲು ಹಣಕಾಸು ಸೇವೆಗಳ ಇಲಾಖೆ ಡಿಎಫ್‌ಎಸ್ ಏಪ್ರಿಲ್‌ನಿಂದ ಜೂನ್ 30ರವರೆಗೆ ಮೂರು ತಿಂಗಳ ಅವಧಿಯ ಪ್ರಚಾರವನ್ನು ಪ್ರಾರಂಭಿಸಿದೆ ಎಂದರು.

ಪ್ರಧಾನ ಮಂತ್ರಿ ಜೀವನ ಜ್ಯೋತಿ ವಿಮಾ ಯೋಜನೆ, ಪ್ರಧಾನ ಮಂತ್ರಿ ಸುರಕ್ಷಾ ವಿಮಾ ಯೋಜನೆಯಡಿ ಶುದ್ಧತ್ವವನ್ನು ಸಾಧಿಸಲು ಏ.1ರಿಂದ ಜೂ.30ವರೆಗೆ ಮೂರು ತಿಂಗಳು ಸ್ಯಾಚುರೇಶನ್ ಅಭಿಯಾನವನ್ನು ಹಣಕಾಸು ಸಚಿವಾಲಯ ನಡೆಸುತ್ತಿದೆ.

ಇದರ ಅಂಗವಾಗಿ ಪಿಎಂಜೆಜೆಬಿವೈ, ಪಿಎಂಎಸ್‌ಬಿವೈ ಎರಡು ಸುರಕ್ಷಾ ಯೋಜನೆಯ ಪ್ರಯೋಜನಗಳು ಜನಸಾಮಾನ್ಯರಿಗೆ ತಲುಪುವುದನ್ನು ಖಚಿತಪಡಿಸಿಕೊಳ್ಳಲು ರಾಜ್ಯ ಆಡಳಿತ, ಭಾರತ ಸರ್ಕಾರದ ಇತರ ಸಚಿವಾಲಯಗಳು ಸಕ್ರಿಯವಾಗಿ ಭಾಗವಹಿಸುವಿಕೆಯೊಂದಿಗೆ ಬ್ಯಾಂಕುಗಳು ದೇಶದ ಎಲ್ಲ ಜಿಲ್ಲೆಗಳ ಗ್ರಾಪಂ ಮಟ್ಟದಲ್ಲಿ ಶಿಬಿರಗಳನ್ನು ಆಯೋಜಿಸುತ್ತಿವೆ ಎಂದು ತಿಳಿಸಿದರು.

ಎಸ್‌ಬಿಐ ಶಾಖೆಯ ವ್ಯವಸ್ಥಾಪಕ ಸಾಯಿಕೃಷ್ಣ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನಾಗರಿಕರಿಗಾಗಿ ಹಲವಾರು ಸೌಲಭ್ಯಗಳನ್ನು ವಿಸ್ತರಿಸಿವೆ. ವಿಶೇಷವಾಗಿ ಕೇಂದ್ರ ಸರ್ಕಾರದ ಸಾಮಾಜಿಕ ಭದ್ರತಾ ಯೋಜನೆಗಳ ವಿಮಾ ಸೌಲಭ್ಯವನ್ನು ಸಾರ್ವಜನಿಕರು ಪಡೆದುಕೊಳ್ಳಬೇಕೆಂದರು.

ಗ್ರಾಪಂ ಉಪಾಧ್ಯಕ್ಷ ಶಿವಪ್ಪ, ಸದಸ್ಯರಾದ ಶರಣಪ್ಪ ತರಲಕಟ್ಟಿ, ಹೊಳೆಗೌಡ ಪೋ.ಪಾ., ಪ್ರಮುಖರಾದ ಬೀರಪ್ಪ, ನಾಗನಗೌಡ, ಯಂಕಪ್ಪ, ತಾಪಂ ತಾಂತ್ರಿಕ ಸಹಾಯಕಿ ವಿಜಯಲಕ್ಷ್ಮೀ ಪಾಟೀಲ್, ಮದ್ದಾನಮ್ಮ, ದೇವಮ್ಮ, ಗ್ರಾಹಕರ ಸೇವಾ ಕೇಂದ್ರದ ಹನುಮಂತಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net